ಸುನೀಲ್, ಹರ್ಮನ್‌ಪ್ರೀತ್‌ಗೆ ಎಎಚ್‌ಎಫ್ ಪ್ರಶಸ್ತಿ

ಮಸ್ಕತ್, ಮಾ.31: ಭಾರತದ ಹಾಕಿ ತಂಡದ ಫಾರ್ವರ್ಡ್ ಆಟಗಾರ ಎಸ್.ವಿ. ಸುನೀಲ್ ಹಾಗೂ ಯುವ ಡ್ರಾಗ್‌ಫ್ಲಿಕರ್ ಹರ್ಮನ್‌ಪ್ರೀತ್ ಸಿಂಗ್ ಏಷ್ಯನ್ ಹಾಕಿ ಫೆಡರೇಶನ್(ಎಎಚ್‌ಎಫ್) ವರ್ಷದ ಆಟಗಾರ ಹಾಗೂ ಭರವಸೆಯ ಆಟಗಾರ ಪ್ರಶಸ್ತಿಯನ್ನು ಪಡೆದಿದ್ದಾರೆ. ಜೂನಿಯರ್ ಪುರುಷರ ವಿಭಾಗದಲ್ಲಿ ಹರ್ಮನ್‌ಪ್ರೀತ್ ವರ್ಷದ ಭರವಸೆಯ ಆಟಗಾರನಾಗಿಯೂ, ಸುನೀಲ್ ಹಿರಿಯ ವಿಭಾಗದಲ್ಲಿ ವರ್ಷದ ಆಟಗಾರನ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಏಷ್ಯಾದ ರಾಷ್ಟ್ರೀಯ ತಂಡಗಳ ಕೋಚ್‌ಗಳು ಈ ಪ್ರಶಸ್ತಿಗೆ ನಾಮನಿರ್ದೇಶನ ಮಾಡಲಿದ್ದು, ಆಟಗಾರರು ನೀಡಿರುವ ಪ್ರದರ್ಶನವು ಪ್ರಶಸ್ತಿಗೆ ಮಾನದಂಡವಾಗಿದೆ.
ಭಾರತದ ಜೂನಿಯರ್ ಪುರುಷರ ತಂಡದಲ್ಲಿ 2016ರಲ್ಲಿ ಹರ್ಮನ್‌ಪ್ರೀತ್ ಅತ್ಯುತ್ತಮ ಪ್ರದರ್ಶನ ನೀಡಿದ್ದು, ಭಾರತ ಲಕ್ನೋದಲ್ಲಿ ಜೂನಿಯರ್ ವಿಶ್ವಕಪ್‌ನ್ನು ಜಯಿಸಲು ನೆರವಾಗಿದ್ದರು. 2016ರ ರಿಯೋ ಒಲಿಂಪಿಕ್ಸ್ ಹಾಗೂ ಲಂಡನ್‌ನಲ್ಲಿ ನಡೆದ ಎಫ್‌ಐಎಚ್ ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತದ ಹಿರಿಯರ ತಂಡದಲ್ಲಿ ಸ್ಥಾನ ಪಡೆದಿದ್ದರು. ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತ ಬೆಳ್ಳಿ ಪದಕ ಜಯಿಸಿ ಐತಿಹಾಸಿಕ ಜಯ ಸಾಧಿಸಿತ್ತು.
ಕಳೆದ ವರ್ಷ ಲಂಡನ್‌ನಲ್ಲಿ ನಡೆದಿದ್ದ ಎಫ್‌ಐಎಚ್ ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತದ ಯಶಸ್ವಿ ಪ್ರದರ್ಶನಕ್ಕೆ ಸುನೀಲ್ ಪ್ರಮುಖ ಪಾತ್ರವಹಿಸಿದ್ದರು. ಹಾಕಿ ಪಿಚ್‌ನಲ್ಲಿ ಅತ್ಯಂತ ವೇಗದ ಆಟಗಾರನಾಗಿರುವ ಸುನೀಲ್ ತಂಡದ ಉಪ ನಾಯಕನಾಗಿ ಕಾರ್ಯನಿರ್ವಹಿಸುತ್ತಿದ್ದಾರೆ







