ಮುಂಬೈನ ಜಿನ್ನಾ ಹೌಸ್ ಒಪ್ಪಿಸುವಂತೆ ಭಾರತಕ್ಕೆ ಪಾಕಿಸ್ತಾನದ ಆಗ್ರಹ
ಇಸ್ಲಾಮಾಬಾದ್,ಮಾ.31: ಒಂದು ಕಾಲದಲ್ಲಿ ಪಾಕಿಸ್ತಾನದ ಸ್ಥಾಪಕ ಮೊಹಮ್ಮದ್ ಅಲಿ ಜಿನ್ನಾ ಅವರ ಒಡೆತನದಲ್ಲಿದ್ದ ಮುಂಬೈನ ಅವರ ವಿಶಾಲ ನಿವಾಸ ಜಿನ್ನಾ ಹೌಸ್‌ನ್ನು ನೆಲಸಮಗೊಳಿಸುವಂತೆ ಬಿಜೆಪಿ ಶಾಸಕರೋರ್ವರು ಆಗ್ರಹಿಸಿರುವ ಹಿನ್ನೆಲೆಯಲ್ಲಿ, ಅದರ ಮೇಲಿನ ತನ್ನ ‘ಮಾಲಕತ್ವದ ಹಕ್ಕುಗಳನ್ನು ’ಗೌರವಿಸುವಂತೆ ಪಾಕ್ ಸರಕಾರವು ಭಾರತವನ್ನು ಆಗ್ರಹಿಸಿದೆ.
ಮುಂಬೈನ ಮಲಬಾರ್ ಹಿಲ್ಸ್‌ನಲ್ಲಿ ಎರಡೂವರೆ ಎಕರೆ ಜಾಗದಲ್ಲಿ ಹರಡಿಕೊಂಡಿರುವ ಭವ್ಯ ಕಟ್ಟಡವು ಅಂದಾಜು 400 ಮಿ.ಡಾ. ವೌಲ್ಯದ್ದಾಗಿದೆ. ಈ ಕಟ್ಟಡದ ಒಡೆತನ ಕುರಿತು ಜಿನ್ನಾರ ಪುತ್ರಿ ದೀನಾ ವಾಡಿಯಾ ಹಾಗೂ ಭಾರತ ಮತ್ತು ಪಾಕ್ ಸರಕಾರಗಳ ನಡುವೆ ಸುದೀರ್ಘ ಕಾಲದಿಂದ ಕಾನೂನು ತಿಕ್ಕಾಟ ನಡೆಯುತ್ತಿದೆ.
ಜಿನ್ನಾ ಹೌಸ್‌ನ್ನು ತನ್ನ ವಶಕ್ಕೆ ಪಡೆದುಕೊಳ್ಳುವ ತನ್ನ ಇಚ್ಛೆಯನ್ನು ಪಾಕಿಸ್ತಾನವು ಪದೇಪದೇ ವ್ಯಕ್ತಪಡಿಸಿದೆ. ಈ ವಿಷಯದಲ್ಲಿ ಪಾಕ್ ಸರಕಾರದ ಮಾಲಕತ್ವದ ಹಕ್ಕುಗಳನ್ನು ಭಾರತ ಸರಕಾರವು ಗೌರವಿಸಬೇಕಾಗಿದೆ ಎಂದು ಪಾಕಿಸ್ತಾನದ ವಿದೇಶಾಂಗ ಕಚೇರಿಯ ವಕ್ತಾರ ನಫೀಸ್ ಝಕಾರಿಯಾ ಅವರು ಗುರುವಾರ ಇಲ್ಲಿ ಸಾಪ್ತಾಹಿಕ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಜಿನ್ನಾರ ಆಸ್ತಿಯನ್ನು ರಕ್ಷಿಸುವ ಮತ್ತು ಅದನ್ನು ಸುಸ್ಥಿತಿಯಲ್ಲಿರಿಸುವ ತನ್ನ ಬಾಧ್ಯತೆಯನ್ನು ಭಾರತ ಸರಕಾರವು ಈಡೇರಿಸುತ್ತದೆ ಎಂದೂ ನಾವು ನಿರೀಕ್ಷಿಸಿದ್ದೇವೆ ಎಂದರು.
ಜಿನ್ನಾ ಹೌಸ್ ವಿಭಜನೆಯ ಸಂಕೇತವಾಗಿದೆ ಮತ್ತು ಭಾರತ ಉಪಖಂಡವನ್ನು ಒಡೆಯುವ ಸಂಚು ಅಲ್ಲಿಯೇ ನಡೆದಿತ್ತು. ಹೀಗಾಗಿ ಅದನ್ನು ನೆಲಸಮಗೊಳಿಸಬೇಕು ಮತ್ತು ಅಲ್ಲಿ ಸಾಂಸ್ಕೃತಿಕ ಕೇಂದ್ರವೊಂದನ್ನು ಸ್ಥಾಪಿಸಬೇಕು ಎಂಬ ಮುಂಬೈನ ಮಲಬಾರ್ ಹಿಲ್ಸ್‌ನ ಬಿಜೆಪಿ ಶಾಸಕ ಮಂಗಲ್ ಲೋಧಾ ಅವರ ಆಗ್ರಹ ಕುರಿತಂತೆ ಪ್ರಶ್ನೆಗೆ ಅವರು ಉತ್ತರಿಸುತ್ತಿದ್ದರು.







