ಮುಲಾಯಂ ಪುತ್ರನ ಆಹ್ವಾನ: ಗೋಶಾಲೆಗೆ ಸಿಎಂ ಆದಿತ್ಯನಾಥ್ ಭೇಟಿ

ಲಕ್ನೋ, ಎ.1: ಮುಲಾಯಂ ಸಿಂಗ್ ಯಾದವ್ ಅವರ ಪುತ್ರ ಪ್ರತೀಕ್ ಹಾಗೂ ಸೊಸೆ ಅಪರ್ಣಾ ಯಾದವ್ ಅವರ ಆಹ್ವಾನದ ಮೇರೆಗೆ ಉತ್ತರ ಪ್ರದೇಶ ಮುಖ್ಯಮಂತ್ರಿ ಆದಿತ್ಯನಾಥ್ ಶುಕ್ರವಾರ ನಗರದ ಹೊರವಲಯದಲ್ಲಿರುವ ಕನ್ಹಾ ಉಪವನ ಗೋಶಾಲೆಗೆ ಭೇಟಿ ನೀಡಿದರು.
ಇತ್ತೀಚೆಗೆ ಲಕ್ನೋ ಕಂಟೋನ್ಮೆಂಟ್ ಕ್ಷೇತ್ರದಿಂದ ಸ್ಪರ್ಧಿಸಿ ಪರಾಜಿತರಾಗಿದ್ದ ಅಪರ್ಣಾ, ಜೀವ ಆಶ್ರಯ ಎಂಬ ಸ್ವಯಂಸೇವಾ ಸಂಸ್ಥೆ ನಡೆಸುವ ಗೋಶಾಲೆಗೆ ಭೇಟಿ ನೀಡುವಂತೆ ಮುಖ್ಯಮಂತ್ರಿಯನ್ನು ಆಹ್ವಾನಿಸಿದ್ದರು. ಈ ಸ್ವಯಂಸೇವಾ ಸಂಸ್ಥೆಗೆ ಅಪರ್ಣಾ ದಂಪತಿ ನೆರವು ನೀಡುತ್ತಿದ್ದಾರೆ. ಉಪಮುಖ್ಯಮಂತ್ರಿ ದಿನೇಶ್ ಶರ್ಮಾ, ನಗರಾಭಿವೃದ್ಧಿ ಸಚಿವ ಸುರೇಶ್ ಖನ್ನಾ ಹಾಗೂ ರಾಜ್ಯ ಖಾತೆ ಸಚಿವೆ ಸ್ವಾತಿ ಸಿಂಗ್ ಜತೆಗಿದ್ದರು.
ಕಳ್ಳಸಾಗಾಣೆದಾರರಿಂದ ರಕ್ಷಿಸಲ್ಪಟ್ಟ ಮತ್ತು ಬೀಡಾಡಿ ಹಸುಗಳಿಗೆ ರಕ್ಷಣೆ ನೀಡುವ ಸಲುವಾಗಿ ಇಂಥ ವ್ಯವಸ್ಥೆಯನ್ನು ಎಲ್ಲ ನಗರಗಳಲ್ಲೂ ಆರಂಭಿಸುವಂತೆ ಮುಖ್ಯಮಂತ್ರಿ ತಮ್ಮ ಸಹೋದ್ಯೋಗಿ ಖನ್ನಾ ಅವರಿಗೆ ಈ ಸಂದರ್ಭ ಸೂಚಿಸಿದರು. ಇದಕ್ಕೂ ಮುನ್ನ ಅಪರ್ಣಾ ದಂಪತಿ, ಅತಿಗಣ್ಯರ ಅತಿಥಿಗೃಹದಲ್ಲಿ ಮುಖ್ಯಮಂತ್ರಿಯನ್ನು ಭೇಟಿ ಮಾಡಿ, ಆಹ್ವಾನ ನೀಡಿದ್ದರು.
ಈ ಭೇಟಿಯನ್ನು ರಾಜಕೀಯ ಸೌಜನ್ಯದ ಭೇಟಿ ಎಂದು ಅಪರ್ಣಾ ಬಣ್ಣಿಸಿದ್ದಾರೆ. "ಅವರು ಮುಖ್ಯಮಂತ್ರಿ; ರಾಜ್ಯದ ಎಲ್ಲ ನಿವಾಸಿಗಳಿಗೆ ಅವರು ತಂದೆ ಸಮಾನ. ಇದನ್ನು ನಾನು ಹೇಳುತ್ತಿಲ್ಲ. ದೇಶದ ಸಂವಿಧಾನ ಹೇಳುತ್ತದೆ. ನಮ್ಮ ಆಹ್ವಾನವನ್ನು ಸ್ವೀಕರಿಸಿ ಭೇಟಿ ನೀಡಿರುವುದಕ್ಕೆ ನಾನು ಕೃತಜ್ಞತೆ ಸಲ್ಲಿಸುತ್ತೇನೆ ಎಂದು ಅಪರ್ಣಾ ಹೇಳಿದ್ದಾರೆ.
"ಹೊಸ ಸರ್ಕಾರ ಉತ್ತಮ ಕೆಲಸ ಮಾಡುತ್ತಿದೆ" ಎಂದು ಶಹಾಬ್ಬಾಸ್‌ಗಿರಿ ನೀಡಿದರು. ಆದಿತ್ಯನಾಥ್ ಅವರ ಮೂಲ ಹೆಸರು ಅಜಯ್ ಸಿಂಗ್ ಬಿಷ್ಟ್ ಎಂದಾಗಿದ್ದು, ಅಪರ್ಣಾ ಅವರ ಮೊದಲ ಹೆಸರು ಕೂಡಾ ಬಿಷ್ಟ್ ಎಂದಿತ್ತು.
ಲಕ್ನೋ ಪಾಲಿಕೆ 2010ರಲ್ಲಿ ಈ ಗೋಶಾಲೆ ಆರಂಭಿಸಿದ್ದು, 1850 ಹಸುಗಳು ಇಲ್ಲಿ ಆಶ್ರಯ ಪಡೆದಿವೆ.







