ವ್ಯಕ್ತಿಯನ್ನು ಕೊಂದು ಅಂಗಾಂಗಗಳನ್ನು ಇಡೀ ಉತ್ತರ ದಿಲ್ಲಿಯಾದ್ಯಂತ ಎಸೆದರು!

ಹೊಸದಿಲ್ಲಿ,ಎ.1: ಗುರುವಾರ ರಾಜಘಾಟ್ ಬಳಿ ಎಸೆಯಲಾಗಿದ್ದ ಮಹಿಳೆಯೋರ್ವಳ ಶವವು ಪತ್ತೆಯಾದ ಬೆನ್ನಿಗೇ ಶುಕ್ರವಾರ ಬೆಳಿಗ್ಗೆ ಉತ್ತರ ದಿಲ್ಲಿಯ ತಿಮರ್‌ಪುರ ಸಮೀಪ ರಿಂಗ್ ರಸ್ತೆಯುದ್ದಕ್ಕೂ ಪೊದೆಗಳ ಬಳಿ ಎಸೆಯಲಾಗಿದ್ದ ಪುರುಷನೋರ್ವನ ಶರೀರದ ಹಲವಾರು ಭಾಗಗಳು ಪತ್ತೆಯಾಗಿವೆ.
ಹತ ವ್ಯಕ್ತಿಯ ಗುರುತು ಪತ್ತೆಯಾಗಿಲ್ಲವಾದರೂ, ಕೆಲವು ದಿನಗಳ ಹಿಂದೆಯೇ ಈತನನ್ನು ಕೊಂದು ದೇಹದ ಭಾಗಗಳನ್ನು ತುಂಡರಿಸಿ ಶುಕ್ರವಾರ ನಸುಕಿನಲ್ಲಿ ಚಲಿಸುತ್ತಿದ್ದ ಕಾರಿನಿಂದ ಅವುಗಳನ್ನು ಹೊರಗೆ ಎಸೆಯಲಾಗಿದೆ ಎಂದು ಪೊಲೀಸರು ಶಂಕಿಸಿದ್ದಾರೆ. ಎರಡೂ ಕೊಲೆಗಳು ಪರಸ್ಪರ ಸಂಬಂಧ ಹೊಂದಿರಬಹುದೆಂದೂ ಅವರು ಶಂಕಿಸಿದ್ದಾರೆ. ವ್ಯಕ್ತಿಯ ಗುರುತು ಪತ್ತೆ ಹಚ್ಚಲು ಶರೀರದ ಇತರ ಭಾಗಗಳನ್ನು ಹುಡುಕುವ ಪ್ರಯತ್ನ ನಡೆಯುತ್ತಿದೆ.
ಬೆಳಿಗ್ಗೆ ಆರು ಗಂಟೆಯ ಸುಮಾರಿಗೆ ಚಿಂದಿ ಆಯುವವರ ಗುಂಪೊಂದು ಗಾಂಧಿ ವಿಹಾರದ ಸಮೀಪ ರಸ್ತೆಬದಿಯಲ್ಲಿದ್ದ ಕಸದ ಚೀಲವನ್ನು ಬಿಚ್ಚಿ ನೋಡಿದಾಗ ಮೊಣಕಾಲಿನಿಂದ ಕೆಳಗೆ ತುಂಡರಿಸಲ್ಪಟ್ಟಿದ್ದ ಮಾನವ ಶರೀರದ ಭಾಗ ಕಣ್ಣಿಗೆ ಬಿದ್ದಿತ್ತು.
ಸ್ಥಳಕ್ಕೆ ಧಾವಿಸಿದ ಪೊಲೀಸರು ಅದನ್ನು ವಶಪಡಿಸಿಕೊಂಡು ಇನ್ನಷ್ಟು ಹುಡುಕಾಟ ನಡೆಸಿದಾಗ ರಸ್ತೆಯುದ್ದಕ್ಕೂ ಅಲ್ಲಲ್ಲಿ ಪ್ಲಾಸ್ಟಿಕ್ ಚೀಲಗಳಲ್ಲಿದ್ದ ಮತ್ತಷ್ಟು ಅಂಗಾಂಗಗಳು ಪತ್ತೆಯಾಗಿವೆ. ರುಂಡ ಕೆಲವು ಗಂಟೆಗಳ ಬಳಿಕ ಮಂಜು ಕಾ ತಿಲಾ ಸಮೀಪ ಪತ್ತೆಯಾಗಿತ್ತು.
ಸುಮಾರು 30 ವರ್ಷ ಪ್ರಾಯದ ವ್ಯಕ್ತಿಯ ಮುಖವನ್ನು ಗುರುತು ಸಿಗದಂತೆ ಜಜ್ಜಲಾಗಿದ್ದು, ತಲೆಯ ಮೇಲೆ ಭಾರವಾದ ವಸ್ತುವನ್ನು ಎತ್ತಿ ಹಾಕಿ ಕೊಲೆ ಮಾಡಿರುವಂತೆ ಕಂಡು ಬರುತ್ತಿದೆ. ತಲೆಬುರುಡೆ ಹಲವಾರು ಹೋಳುಗಳಾಗಿದ್ದು, ಗರಗಸದಿಂದ ದೇಹದ ಭಾಗಗಳನ್ನು ತುಂಡರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.