ಬಿಜೆಪಿಗೆ ‘ಯಮ್ಮಿ ಮಮ್ಮಿ’ ಸಮಸ್ಯೆ:ಉವೈಸಿ

ಹೊಸದಿಲ್ಲಿ.ಎ.1: ಬಿಜೆಪಿ ಮತ್ತು ಅದರ ಗೋರಕ್ಷಣೆ ಅಜೆಂಡಾವನ್ನು ಶನಿವಾರ ಟೀಕಿಸಿದ ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಉವೈಸಿ ಅವರು, ಬಿಜೆಪಿಯ ಪಾಲಿಗೆ ಉತ್ತರ ಪ್ರದೇಶದಲ್ಲಿ ಗೋವು ‘ಮಮ್ಮಿ (ಮಾತೆ)’ಯಾಗಿದ್ದರೆ, ಈಶಾನ್ಯ ಭಾರತದಲ್ಲಿ ಅದು ‘ಯಮ್ಮಿ (ಸ್ವಾದಿಷ್ಟ)’ಯಾಗಿದೆ. ಇದು ಬಿಜೆಪಿಯ ಬೂಟಾಟಿಕೆ ಯಾಗಿದೆ ಎಂದು ಹೇಳಿದರು.
ಬಿಜೆಪಿ ಆಡಳಿತದ ಗುಜರಾತ್ ಮತ್ತು ಉತ್ತರ ಪ್ರದೇಶಗಳಲ್ಲಿನ ಇತ್ತೀಚಿನ ಕಠಿಣ ಗೋರಕ್ಷಣೆ ಕ್ರಮಗಳು ಮತ್ತು ಇತ್ತೀಚಿಗಷ್ಟೇ ಅದು ಸಮ್ಮಿಶ್ರ ಸರಕಾರವನ್ನು ರಚಿಸಿರುವ, ಕ್ರೈಸ್ತರು ಹೆಚ್ಚಿನ ಸಂಖ್ಯೆಯಲ್ಲಿರುವ ಮಣಿಪುರದಲ್ಲಿ ಬೀಫ್ ಸೇವನೆಗೆ ಸಂಬಂಧಿಸಿದಂತೆ ಅದು ಎದುರಿಸಬಹುದಾದ ಸಂದಿಗ್ಧತೆಯ ಕುರಿತು ಉವೈಸಿ ಸುದ್ದಿಸಂಸ್ಥೆಯ ಜೊತೆಗೆ ಮಾತನಾಡುತ್ತಿದ್ದರು.
ಉತ್ತರ ಪ್ರದೇಶದಲ್ಲಿ ಆದಿತ್ಯನಾಥ ಸರಕಾರವು ಅಕ್ರಮ ಕಸಾಯಿಖಾನೆಗಳ ಮೇಲೆ ಮುಗಿಬಿದ್ದಿದ್ದು, ಮುಖ್ಯಮಂತ್ರಿಗಳ ಕ್ರಮವು ಸಾರ್ವತ್ರಿಕವಾಗಿ ಮಾಂಸ ವ್ಯಾಪಾರಿಗಳನ್ನು ಗುರಿಯಾಗಿಸಿಕೊಂಡಿದೆಯಾದರೂ ಅದು ಮುಸ್ಲಿಂ ಸಮುದಾಯಕ್ಕೂ ಅನ್ವಯಿಸುತ್ತದೆ ಎಂಬ ಟೀಕೆಗಳು ಕೇಳಿಬಂದಿವೆ. ಗುಜರಾತ್ ಶುಕ್ರವಾರವಷ್ಟೇ ಗೋಹತ್ಯೆ ಅಪರಾಧಕ್ಕೆ ಜೀವಾವಧಿ ಶಿಕ್ಷೆಯನ್ನು ವಿಧಿಸುವ ಮಸೂದೆಯನ್ನು ಅಂಗೀಕರಿಸಿದೆ.
ಹೀಗಾಗಿ ಬಿಜೆಪಿ ಮಣಿಪುರದಲ್ಲಿ ಏನು ಮಾಡಲಿದೆ ಎನ್ನುವುದು ಉವೈಸಿ ಮತ್ತು ಇತರ ಬಿಜೆಪಿ ಟೀಕಾಕಾರರ ಪ್ರಶ್ನೆಯಾಗಿದೆ.
ಈಶಾನ್ಯ ಭಾರತದಲ್ಲಿ ಬೀಫ್ ನಿಷೇಧಿಸುವುದಿಲ್ಲ ಎಂಬ ಬಿಜೆಪಿಯ ಇತ್ತೀಚಿನ ಹೇಳಿಕೆಯೊಂದು ವರದಿಯಾಗಿರುವ ಹಿನ್ನೆಲೆಯಲ್ಲಿ ಆ ಪಕ್ಷವು ಬೂಟಾಟಿಕೆಯಲ್ಲಿ ತೊಡಗಿದೆ ಎಂದು ಉವೈಸಿ ಮತ್ತು ಇತರ ಟೀಕಾಕಾರರು ಕುಟುಕಿದ್ದಾರೆ.
ಉತ್ತರ ಪ್ರದೇಶ ಮಾದರಿಯ ಬೀಫ್ ರಾಜಕೀಯಕ್ಕೆ ಈಶಾನ್ಯ ಭಾರತದಲ್ಲಿ ಅವಕಾಶವಿಲ್ಲ ಎಂದು ಮೇಘಾಲಯ, ನಾಗಾಲ್ಯಾಂಡ್ ಮತ್ತು ಮಿರೆರಾಂ ರಾಜ್ಯಗಳ ಬಿಜೆಪಿ ನಾಯಕರು ಹೇಳಿರುವುದನ್ನು ದಿಲ್ಲಿಯ ದೈನಿಕವೊಂದು ತನ್ನ ವರದಿಯಲ್ಲಿ ಉಲ್ಲೇಖಿಸಿದೆ.
ಇವು ಮೂರೂ ಕ್ರೈಸ್ತರು ಬಹುಸಂಖ್ಯಾತರಾಗಿರುವ ರಾಜ್ಯಗಳಾಗಿದ್ದು, 2018ರಲ್ಲಿ ವಿಧಾನಸಭಾ ಚುನಾವಣೆಗಳು ನಡೆಯಲಿವೆ. ನಾಗಾ ಪೀಪಲ್ಸ್ ಫ್ರಂಟ್ ಮಣಿಪುರದ ಬಿಜೆಪಿ ನೇತೃತ್ವದ ಸರಕಾರದಲ್ಲಿ ಪಾಲುದಾರನಾಗಿದೆ.