ಸಿದ್ದಗಂಗಾ ಶ್ರೀಗಳ 110ನೆ ಜನ್ಮ ಜಯಂತಿ: ಸಾವಿರಾರು ಭಕ್ತರಿಂದ ಶ್ರೀಗಳ ದರ್ಶನ

ತುಮಕೂರು, ಎ.1: ಶತಾಯುಷಿ ಸಿದ್ಧಗಂಗಾ ಸಿದ್ದಿಪುರುಷ, ಭಕ್ತರ ಪಾಲಿನ ನಡೆದಾಡುವ ದೇವರು ಡಾ.ಶ್ರೀ ಶಿವಕುಮಾರ ಸ್ವಾಮೀಜಿಗಳು 109 ವಸಂತಗಳನ್ನು ಪೂರೈಸಿ 110 ನೆ ವರ್ಷಕ್ಕೆ ಕಾಲಿರಿಸಿದ ಈ ಸಂದರ್ಭದಲ್ಲಿ ನಗರದ ಎಲ್ಲಾ ಭಾಗಗಳಲ್ಲಿ ಸಂಭ್ರಮದಿಂದ ಜನ್ಮದಿನೋತ್ಸವವನ್ನು ಆಚರಿಸಿದ್ದು, ಶ್ರೀಮಠಕ್ಕೆ ಬೆಳಗ್ಗೆಯಿಂದಲೇ ಸಾವಿರಾರು ಭಕ್ತರು ಭಾಗವಹಿಸಿ ಸ್ವಾಮೀಜಿಗಳ ಆಶೀರ್ವಾದ ಪಡೆಯುತ್ತಿದ್ದುದು ಸಾಮಾನ್ಯವಾಗಿತ್ತು.
ತುಮಕೂರು ನಗರದ ಮುಖ್ಯರಸ್ತೆಗಳು ಬಾಳೆಕಂದು, ಮಾವಿನಸೊಪ್ಪಿನ ತಳಿರು ತೋರಣಗಳಿಂದ ಸಿಂಗಾರಗೊಂಡಿದ್ದರೆ. ಇಡೀ ನಗರದ ತುಂಬಾ ಸ್ವಾಮೀಜಿಗಳ ಭಾವಚಿತ್ರವಿರುವ ಬೃಹತ್ ಕಟೌಟ್‌ಗಳು, ಫ್ಲೆಕ್ಸ್‌ಗಳು ರಾರಾಜಿಸಿದವು. ಶನಿವಾರ ಬೆಳಿಗ್ಗೆಯಿಂದ ಸಂಜೆಯವರೆಗೆ ಎಲ್ಲೆಡೆ ಸ್ವಾಮೀಜಿಗಳ ಹುಟ್ಟುಹಬ್ಬದ ನಿಮಿತ್ತ ಸಿದ್ದಗಂಗಾ ಶ್ರೀಗಳ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಪುಷ್ಪಾರ್ಚನೆ ಮಾಡಿ ಭಕ್ತಿ ಸಮರ್ಪಣೆ ಮಾಡುತ್ತಿದ್ದುದು ಕಂಡುಬಂದಿತು.
ಶ್ರೀಮಠದಲ್ಲಿ ಸಂಭ್ರಮಿಸಿದ ವೈಭವ:
ಡಾ.ಶ್ರೀ ಶಿವಕುಮಾರಸ್ವಾಮೀಜಿಗಳು 109 ವರ್ಷಗಳನ್ನು ಪೂರೈಸಿ 110ನೆ ವರ್ಷಕ್ಕೆ ಪಾದಾರ್ಪಣೆ ಮಾಡಿದ್ದ ಈ ಸಂದರ್ಭದಲ್ಲಿ ನಿರೀಕ್ಷೆಗೂ ಮೀರಿದ ಭಕ್ತರು ಬೆಳಗ್ಗೆಯಿಂದಲೇ ಶ್ರೀಮಠಕ್ಕೆ ಬಂದಿದ್ದರು.
ಶ್ರೀಮಠದಲ್ಲಿ ನಡೆದ ವೈಭವದ ಜನ್ಮದಿನೋತ್ಸವ ಸಮಾರಂಭದಲ್ಲಿ ನಾಡಿನ ವಿವಿಧ ಮಠಾಧೀಶರರು ರಾಜಕೀಯ ಮುಖಂಡರು ವಿವಿದ ಅಧಿಕಾರಿಗಳು ಸೇರಿದಂತೆ ಅನೇಕ ಗಣ್ಯರು ಹಾಗೂ ಭಕ್ತಾಧಿಗಳು ಭಾಗವಹಿಸಿ ಶ್ರೀಗಳಿಗೆ ಗುರುವಂದನೆ ಸಲ್ಲಿಸಿ ಆಶೀರ್ವಾದ ಪಡೆದರು.
ಶತಮಾನ ಕಂಡ ಶ್ರೇಷ್ಠ ಸಂತ, ಕಾಯಕಯೋಗಿ ಕರ್ನಾಟಕ ರತ್ನ ಸಿದ್ಧಗಂಗೆಯ ಶತಾಯುಷಿ ಪದ್ಮಭೂಷಣ ಡಾ.ಶ್ರೀ ಶಿವಕುಮಾರಸ್ವಾಮೀಜಿ 110ನೆ ವಸಂತಕ್ಕೆ ಪಾದಾರ್ಪಣೆ ಮಾಡಿದ ಈ ಸಂದರ್ಭದಲ್ಲಿ ಶನಿವಾರ ನಾಡಿನ ವಿವಿಧ ಮಠಗಳ ಹರಗುರುಚರಮೂರ್ತಿಗಳು ವಿಶೇಷ ಪಾದಪೂಜೆ, ಆರತಿ ಮಾಡಿ ಭಕ್ತಿ ಸಮರ್ಪಿಸಿದರು
ಪ್ರತೀ ವರ್ಷದ ಜನ್ಮಜಯಂತಿ ಸಂದರ್ಭದಲ್ಲಿ ನಡೆಸುವ ಸಾಂಪ್ರದಾಯಿಕ ಗುರುಪೂಜೆಯನ್ನು ಈ ಬಾರಿಯೂ ಶಿವಕುಮಾರ ಸ್ವಾಮಿಗಳಿಗೆ ಭಕ್ತಾದಿಗಳು, ಮಠಾಧೀಶರುಗಳು ಸಲ್ಲಿಸಿದರು. ಹಳೇ ಮಠದಲ್ಲಿ ಬೆಳಗಿನಜಾವ 3 ಗಂಟೆಯಿಂದಲೇ ಸ್ವಾಮೀಜಿಯವರ ಇಷ್ಠಲಿಂಗ ಪೂಜೆ ನೆರವೇರಿತು. ನೂರಾರು ಮಂದಿ ಲಿಂಗಪೂಜೆಯನ್ನು ಸಾಕ್ಷೀಕರಿಸಿದರು. ಬಳಿಕ ಶ್ರೀ ಮಠದ ಆವರಣದಲ್ಲಿನ ಉತ್ಸವ ಮಂಟಪಕ್ಕೆ ಶ್ರೀಗಳನ್ನು ಸುಮಂಗಲಿಯರ 110 ಕಲಶದ ಮೆರವಣಿಗೆಯೊಂದಿಗೆ ಬಂದ ಶ್ರೀಗಳು ವೇದಿಕೆಯ ಮೇಲೆ ಕುಳಿತುಕೊಂಡರು.
ಜನ್ಮದಿನೋತ್ಸವದ ಅಂಗವಾಗಿ ಮಠದ ಆವರಣದಲ್ಲಿ ಕೊಡವರ ಕುಣಿತ,ವೀರಗಾಸೆ,ಚಂಡೆವಾದ್ಯ ಸೇರಿದಂತೆ ವಿವಿಧ ಜಾನಪದ ಕಲಾಮೇಳಗಳು ಮೇಳೈಸಿದವು.
ಕಾರ್ಯಕ್ರಮದ ನಂತರ ಶ್ರೀಮಠಕ್ಕೆ ಉಪಲೋಕಾಯುಕ್ತ ಶುಭಾಷ್ ಬಿ.ಅಡಿ, ಕೇಂದ್ರ ವಲಯದ ಐಜಿಪಿ ಸೀಮಂತ್‌ಕುಮಾರ್‌ಸಿಂಗ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಇಶಾಪಂತ್ ಸೇರಿದಂತೆ ಹವರು ಭೇಟಿ ನೀಡಿ ಶ್ರೀಗಳ ಆಶೀರ್ವಾದ ಪಡೆದು ಶುಭ ಕೋರಿದರು. ಇದೇ ಸಂದರ್ಭದಲ್ಲಿ ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯಿತಿ ವತಿಯಿಂದ ಸಿದ್ದಗಂಗಾ ಶ್ರಿಗಳಿಗೆ ಗೌರವ ಸಮರ್ಪಿಸಲಾಯಿತು.
ಡಾ.ಶಿವಕುಮಾರಸ್ವಾಮೀಜಿ ಅವರ ಜನ್ಮವರ್ದಂತಿ ಪ್ರಯುಕ್ತ ಮಠಕ್ಕೆ ಆಗಮಿಸಿದ ಭಕ್ತರಿಗೆಲ್ಲ ತಿಂಡಿಗೆ ಸಿಹಿ-ಖಾರಾ ಪೊಂಗಲ್ ಮಠದಿಂದ ವಿತರಿಸಲಾಯಿತು.ಮಧ್ಯಾಹ್ನ ಊಟಕ್ಕೆ ಸಿಹಿ ಪಾಯಸದ ಜೊತೆಗೆ ಮಾಲ್ದಿ,ಚಿತ್ರಾನ್ನ, ಅನ್ನಸಾಂಬಾರ್, ಪಲ್ಯ, ಮಜ್ಜಿಗೆ ಸೇರಿದಂತೆ ಹಲವು ರೀತಿಯ ಖಾಧ್ಯಗಳು ಭಕ್ತರಿಗೆ ಉಣಬಡಿಸಲಾಯಿತು.







