‘ಬೀದಿ ಕಾಮಣ್ಣ’ರ ಸುಧಾರಣೆಗೆ ಮ.ಪ್ರದೇಶದ ಪಣ,ಅತ್ಯಾಚಾರಿಗಳಿಗೆ ಮರಣ ದಂಡನೆ ವಿಧಿಸಲು ಚಿಂತನೆ

ಭೋಪಾಲ,ಎ.1: ಸಾರ್ವಜನಿಕ ಸ್ಥಳಗಳಲ್ಲಿ ಮಹಿಳೆಯರಿಗೆ ಚುಡಾವಣೆ ಮತ್ತು ಕಿರುಕುಳದಿಂದ ರಕ್ಷಣೆ ನೀಡಲು ನೆರೆಯ ಉತ್ತರ ಪ್ರದೇಶ ಸರಕಾರವು ರಚಿಸಿರುವ ಆ್ಯಂಟಿ ರೋಮಿಯೊ ದಳಗಳನ್ನು ಮಾದರಿಯಾಗಿ ಸ್ವೀಕರಿಸಿರುವ ಮಧ್ಯಪ್ರದೇಶದ ಬಿಜೆಪಿ ಸರಕಾರವು ಸಹ ಬೀದಿ ಕಾಮಣ್ಣರ ವಿರುದ್ಧ ಕಾರ್ಯಾಚರಣೆಗೆ ನಿರ್ಧರಿಸಿದೆ.
ಮಹಿಳೆಯರಿಗೆ ಕಿರುಕುಳ ನೀಡುವ ಪುರುಷರಲ್ಲಿ ಸುಧಾರಣೆ ತರುವುದಾಗಿ ಮತ್ತು ಅಪ್ರಾಪ್ತ ವಯಸ್ಕ ಬಾಲಕಿಯರ ಮೇಲೆ ಅತ್ಯಾಚಾರವೆಸಗಿದವರಿಗೆ ಗಲ್ಲುಶಿಕ್ಷೆ ವಿಧಿಸಲು ಕ್ರಿಮಿನಲ್ ಕಾನೂನಿನ ತಿದ್ದುಪಡಿಗೆ ಮಸೂದೆಯೊಂದನ್ನು ಶೀಘ್ರವೇ ವಿಧಾನಸಭೆಯಲ್ಲಿ ಮಂಡಿಸುವುದಾಗಿ ಮುಖ್ಯಮಂತ್ರಿ ಶಿವರಾಜ ಸಿಂಗ್ ಚೌಹಾಣ್ ಅವರು ಭರವಸೆ ನೀಡಿದ್ದಾರೆ.
ಮಹಿಳೆಯರಿಗೆ ಯಾವುದೇ ತೊಂದರೆಗಳಾಗದಂತೆ ಬಾಲಕಿಯರ ಹಾಸ್ಟೆಲ್‌ನಂತಹ ಸ್ಥಳಗಳ ಬಳಿ ಪೊಲೀಸರು ಹೆಚ್ಚಿನ ಎಚ್ಚರಿಕೆ ವಹಿಸಬೇಕೆಂದ ಅವರು, ಮಹಿಳೆಯರು ಯಾವುದೇ ಭೀತಿಯಲ್ಲದೆ ಸ್ವತಂತ್ರರಾಗಿ ಓಡಾಡಬಹುದಾದ ವಾತಾವರಣವನ್ನು ಪೊಲೀಸರು ಸೃಷ್ಟಿಸಬೇಕು ಮತ್ತು ಕ್ರಿಮಿನಲ್ ಶಕ್ತಿಗಳ ವಿರುದ್ಧ ಕಠೋರ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಹೇಳಿದರು.





