ಮಕ್ಕಳು ಮತ್ತು ಮಹಿಳೆ ಹಕ್ಕು ರಕ್ಷಣೆಗೆ 'ಉಡುಪಿ ಮಾಡೆಲ್'

ಉಡುಪಿ, ಎ.1: ಮಕ್ಕಳ ಸಮಗ್ರ ಸಂರಕ್ಷಣೆಗೆ ಸಂಬಂಧಿಸಿದಂತೆ ಸರಕಾರ ಸಮರ್ಪಕವಾದ ನೀತಿಯೊಂದನ್ನು ರೂಪಿಸಿದೆ. ಇದಕ್ಕೆ ಪೂರಕವಾಗಿ ಹಾಗೂ ಅನುಷ್ಠಾನಕ್ಕೆ ಒತ್ತು ಕೊಟ್ಟು ಉಡುಪಿಯಲ್ಲಿ ಮಕ್ಕಳು ಮತ್ತು ಮಹಿಳೆಗೆ ಸಂಬಂಧಿಸಿ ನೀತಿಯೊಂದನ್ನು ರೂಪಿಸುವ ನಿರ್ಧಾರವನ್ನು ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಅಧ್ಯಕ್ಷತೆಯಲ್ಲಿ ಶುಕ್ರವಾರ ನಡೆದ ಸಭೆಯಲ್ಲಿ ಕೈಗೊಳ್ಳಲಾಯಿತು.
ಮಕ್ಕಳ ಸಂರಕ್ಷಣೆಗೆ ಒತ್ತು ನೀಡಿ ಗ್ರಾಮ, ತಾಲೂಕು ಮತ್ತು ಜಿಲ್ಲಾ ಮಟ್ಟದಲ್ಲಿ ಮೂರು ಹಂತದ ಸಮಿತಿಯನ್ನು ರಚಿಸಿ ಜಿಲ್ಲೆಯ ಮಕ್ಕಳ ರಕ್ಷಣಾಧಿಕಾರಿ ವಿದ್ಯಾಂಗ ಇಲಾಖೆಯ ರಾಮಚಂದ್ರ ರಾಜೇ ಅರಸ್ ಅವರನ್ನು ನೋಡಲ್ ಅಧಿಕಾರಿಯನ್ನಾಗಿ ನೇಮಿಸಲಾಯಿತು. ಮೂರು ತಿಂಗಳಿಗೊಮ್ಮೆ ಈ ಸಂಬಂಧ ಸಭೆ ಕರೆಯಲೂ ಜಿಲ್ಲಾಧಿಕಾರಿ ನಿರ್ದೇಶನ ನೀಡಿದರು.
ಬೇಸಿಗೆ ರಜೆಯಲ್ಲಿ ವಿವಿಧ ಕಾರಣಗಳಿಂದ ದುಡಿಯುವ ಮಕ್ಕಳನ್ನು ಮಾನವೀಯವಾಗಿ ನೋಡಲು ಹಾಗೂ ಹೆತ್ತವರೊಂದಿಗೆ ಹೊಲಗದ್ದೆಗಳಲ್ಲಿ ದುಡಿಯುವ ಮಕ್ಕಳ ಜೊತೆ ನಿಷ್ಠುರವಾಗಿ ವರ್ತಿಸದಂತೆ ಮಕ್ಕಳ ಬಗ್ಗೆ ಸವಿವರ ಮಾಹಿತಿ ನೀಡಿದ ನಮ್ಮ ಭೂಮಿ ಸಂಸ್ಥೆಯ ಪ್ರತಿನಿಧಿ ಕೋರಿದರು.
ಈ ಸಂದರ್ಭದಲ್ಲಿ ಮಾತನಾಡಿದ ಕಾರ್ಮಿಕ ಅಧಿಕಾರಿಗಳು, ಮಕ್ಕಳ ಜೊತೆ ಉತ್ತಮ ರೀತಿಯಲ್ಲೇ ವ್ಯವಹರಿಸುತ್ತಿರುವುದಾಗಿ ನುಡಿದರು. ಡಾ.ಸತೀಶ್ ನಾಯಕ್ ಮಾತನಾಡಿ, ಮಕ್ಕಳ ರಕ್ಷಣೆ ಬಗ್ಗೆ ನೀತಿ ನಿರೂಪಣೆಗಳು ಅತ್ಯುತ್ತಮ ವಾಗಿದ್ದು, ಸಂವಹನವೋ ಅಥವಾ ಇನ್ನಾವುದೋ ಕೊರತೆಯಿಂದಾಗಿ ಅನುಷ್ಠಾನದಲ್ಲಿ ತೊಂದರೆಯಾಗುತ್ತಿದೆ. ಇದಕ್ಕೆ ಸಮಾಜದ ಸಾಮಾಜಿಕ ಸಂಘಟನೆಗಳ ಸಹಕಾರ ಅಗತ್ಯ ಎಂದರು.
ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷ ಬಿ. ಕೆ. ನಾರಾಯಣ ಮಾತನಾಡಿ, ಮಕ್ಕಳ ದುಡಿಮೆ ಮತ್ತು ದೌರ್ಜನ್ಯದ ಕುರಿತು ತಮ್ಮ ಅಭಿಪ್ರಾಯವನ್ನು ಮಂಡಿಸಿದರು. ಮಾಧ್ಯಮಗಳು ಮಕ್ಕಳ ಪೋಟೋಗಳನ್ನು, ಗುರುತುಗಳನ್ನು ಬಹಿರಂಗಪಡಿಸಬಾರದೆಂದು ಹೇಳಿದರು.
ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಮಾತನಾಡಿ, ಜಿಲ್ಲೆಯಾದ್ಯಂತ ಇರುವ ಅಪಾಯಕಾರಿ ತೆರೆದ ಹೊಂಡ, ಕೊಜೆ ಹೊಂಡಗಳು, ಕೃಷಿ ಹೊಂಡಗಳು, ಮದಗಗಳು, ಅನಾಥವಾಗಿರುವ ಕೋರೆ ಗುಂಡಿಗಳನ್ನು ಗುರುತಿಸಿ ಬೇಲಿ ಹಾಕಲು, ಎಚ್ಚರಿಕೆ ಬೋರ್ಡ್‌ಗಳನ್ನು ಹಾಕುವಂತೆ ಕೆಆರ್‌ಐಡಿಎಲ್‌ಗೆ ಸೂಚಿಸಿದರು. ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗಕ್ಕೆ ಇದರ ಹೊಣೆಯನ್ನು ವಹಿಸಲಾಯಿತು.
ಸಭೆಯಲ್ಲಿ ಭಾಗವಹಿಸಿದ್ದ ಕುಂದಾಪುರದ ಮಹಿಳೆಯರು ಅಕ್ರಮ ಮದ್ಯ ಎಲ್ಲೆಡೆ ವ್ಯಾಪಕವಾಗಿ ದೊರೆಯುತ್ತಿರುವ ಬಗ್ಗೆ ಜಿಲ್ಲಾಧಿಕಾರಿಗಳಲ್ಲಿ ದೂರಿದರು. ಈ ಸಂಬಂಧ ಪ್ರತ್ಯೇಕ ಸಭೆ ಕರೆದು ಸಂಬಂಧಪಟ್ಟ ಇಲಾಖೆಗಳ ಮುಖ್ಯಸ್ಥ ರೊಂದಿಗೆ ಚರ್ಚಿಸುವುದಾಗಿ ಜಿಲ್ಲಾಧಿಕಾರಿ ಹೇಳಿದರು.
ಸಭೆಯಲ್ಲಿ ಸಹಾಯಕ ಆಯುಕ್ತೆ ಶಿಲ್ಪಾ ನಾಗ್, ಅಪರ ಜಿಲ್ಲಾಧಿಕಾರಿ ಅನುರಾಧ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ರೋಹಿಣಿ, ಕೆಆರ್‌ಐಡಿಎಲ್‌ನ ಕೃಷ್ಣ ಹೆಬ್ಸೂರ್, ಪಿಆರ್ ಇಡಿಯ ರಾಜು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿ ಗ್ರೇಸಿ ಗೊನ್ಸಾಲ್ವೀಸ್ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.







