ಪೆಂಟಗನ್ ಮೇಲೆ 2001ರ ಭಯೋತ್ಪಾದಕ ದಾಳಿಯ ಹೊಸ ಚಿತ್ರಗಳ ಬಿಡುಗಡೆ

ವಾಶಿಂಗ್ಟನ್, ಎ. 1: ಅಮೆರಿಕದ ರಕ್ಷಣಾ ಇಲಾಖೆಯ ಪ್ರಧಾನ ಕಚೇರಿ ಪೆಂಟಗನ್ ಮೇಲೆ 2001 ಸೆಪ್ಟಂಬರ್ 11ರಂದು ನಡೆದ ಭಯೋತ್ಪಾದಕ ದಾಳಿಗೆ ಸಂಬಂಧಿಸಿದ ಹಿಂದೆ ನೋಡಿರದ ಚಿತ್ರಗಳನ್ನು ತನಿಖಾ ಸಂಸ್ಥೆ ಎಫ್‌ಬಿಐ ಬಿಡುಗಡೆ ಮಾಡಿದೆ.
ಆ ದಿನ ತೆಗೆದ 27 ಚಿತ್ರಗಳು ಪೆಂಟಗನ್‌ನ ಧ್ವಂಸಗೊಂಡ ಗೋಡೆಗಳು, ಬೆಂಕಿಯ ಬೃಹತ್ ಜ್ವಾಲೆಗಳು ಮತ್ತು ಸುಟ್ಟು ಹೋದ ಕೋಣೆಗಳನ್ನು ತೋರಿಸುತ್ತವೆ.
ಆ ದಿನ ಅಲ್-ಖಾಯಿದ ಭಯೋತ್ಪಾದಕರು ಅಪಹರಿಸಿದ ಒಟ್ಟು ನಾಲ್ಕು ವಿಮಾನಗಳ ಪೈಕಿ ಒಂದಾದ ಅಮೆರಿಕನ್ ಏರ್‌ಲೈನ್ಸ್ ವಿಮಾನ ಪೆಂಟಗನ್‌ಗೆ ಅಪ್ಪಳಿಸಿತ್ತು.
ಅದಕ್ಕೂ ಮೊದಲು ಎರಡು ವಿಮಾನಗಳು ನ್ಯೂಯಾರ್ಕ್‌ನ ವರ್ಲ್ಡ್ ಟ್ರೇಡ್ ಸೆಂಟರ್‌ಗೆ ಅಪ್ಪಳಿಸಿದ್ದವು ಹಾಗೂ ನಾಲ್ಕನೆ ವಿಮಾನದ ಪ್ರಯಾಣಿಕರು ಅಪಹರಣಕಾರರ ಮೇಲೆ ಮುಗಿಬಿದ್ದ ಹಿನ್ನೆಲೆಯಲ್ಲಿ ಪೆನ್ಸಿಲೇನ್ವಿಯದ ಹೊಲವೊಂದಕ್ಕೆ ಅಪ್ಪಳಿಸಿತು.
ಪೆಂಟಗನ್‌ಗೆ ಅಮೆರಿಕನ್ ಏರ್‌ಲೈನ್ಸ್ ವಿಮಾನ ಅಪ್ಪಳಿಸಿದಾಗ ಐವರು ಭಯೋತ್ಪಾದಕರು ಸೇರಿದಂತೆ ವಿಮಾನದಲ್ಲಿದ್ದ ಎಲ್ಲ 64 ಮಂದಿ ಹಾಗೂ ನೆಲದಲ್ಲಿದ್ದ 125 ಮಂದಿ ಮೃತಪಟ್ಟರು.
ಅಂದಿನ ಚಿತ್ರಗಳು ದಾಳಿಯ ಕೆಲವೇ ಕ್ಷಣಗಳ ಬಳಿಕ ಅಲ್ಲಿ ಸೇರಿದ್ದ ಜನರ ಪ್ರತಿಕ್ರಿಯೆಗಳನ್ನು ತೋರಿಸುತ್ತಿವೆ. ರಕ್ಷಣಾ ಕಾರ್ಯಕರ್ತರು ಹಾಗೂ ಶ್ವಾನಗಳು ಕಾರ್ಯಾಚರಣೆಯಲ್ಲಿ ತೊಡಗಿರುವುದನ್ನು ಚಿತ್ರಗಳಲ್ಲಿ ಕಾಣಬಹುದಾಗಿದೆ.
ಒಟ್ಟು ದಾಳಿಗಳಲ್ಲಿ ಸುಮಾರು 3,000 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.







