"ಪೌರಕಾರ್ಮಿಕರನ್ನು ಮ್ಯಾನ್‌ಹೋಲ್‌ಗೆ ಇಳಿಸಿದರೆ ಕ್ರಿಮಿನಲ್ ಪ್ರಕರಣ"
ಕೊರಗರ ಆರೋಗ್ಯ ಸಮೀಕ್ಷೆಗೆ ಸಮಿತಿ ಸಜ್ಜು

ಉಡುಪಿ, ಎ.1: ಪೌರ ಕಾರ್ಮಿಕರನ್ನಾಗಲೀ, ಇತರೆ ಕಾರ್ಮಿಕರನ್ನಾಗಲೀ ಮ್ಯಾನ್‌ಹೋಲ್‌ನಲ್ಲಿ ಇಳಿಸಿದರೆ ಇಳಿಸಿದವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲಾಗುವುದು ಎಂದು ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದ್ದಾರೆ.
ಮಣಿಪಾಲದ ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣದ ಜಿಲ್ಲಾಧಿಕಾರಿ ಕೋರ್ಟ್ ಹಾಲ್‌ನಲ್ಲಿ ಶುಕ್ರವಾರ ಆಯೋಜಿಸಲಾದ ಕೊರಗ ಸಮುದಾಯದ ಆರೋಗ್ಯ ಮತ್ತು ಶೈಕ್ಷಣಿಕ ಸಮೀಕ್ಷೆ ಸಭೆಯನ್ನುದ್ದೇಶಿಸಿ ಅವರು ಮಾತನಾಡುತ್ತಿದ್ದರು.
ಕೊರಗ ಸಮುದಾಯದ ಸುಶೀಲಾ ನಾಡ ಮತ್ತು ಗಣೇಶ ಕೊರಗ ಅವರು ಕೊರಗರ ಆರೋಗ್ಯ ಸಮಸ್ಯೆಯ ಬಗ್ಗೆ ಜಿಲ್ಲಾಧಿಕಾರಿಗಳ ಗಮನ ಸೆಳೆದರು. ನಗರಸಭೆ ಅಥವಾ ಪುರಸಭಾ ವ್ಯಾಪ್ತಿಯ ಮ್ಯಾನ್‌ಹೋಲ್‌ನಲ್ಲಿ ಕಾರ್ಮಿಕರನ್ನು ಇಳಿಸುವುದು ಕ್ರಿಮಿನಲ್ ಅಪರಾಧ. ಅಲ್ಲದೇ ಅವರಿಗೆ ನೀಡಿರುವ ಬೂಟು ಮತ್ತು ಕೈಗವಚಗಳನ್ನು ಉಪಯೋಗಿಸದೆ ಸ್ವಚ್ಛತಾ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬಾರದು ಎಂಬ ಸ್ಪಷ್ಟ ನಿರ್ದೇಶನ ನೀಡಿ ಎಂದು ಜಿಲ್ಲಾಧಿಕಾರಿ ಸೂಚಿಸಿದರು. ನೀಡಿದ ಎಲ್ಲಾ ಮೂಲಸೌಕರ್ಯಗಳನ್ನು ಬಳಸಿಕೊಂಡು ಕಡ್ಡಾಯವಾಗಿ ಕರ್ತವ್ಯ ನಿರ್ವಹಿಸುವಂತೆ ನಿರ್ದೇಶನ ನೀಡಲು ನಗರಾಭಿವೃದ್ಧಿ ಯೋಜನಾ ಕೋಶದ ನಿರ್ದೇಶಕರಿಗೆ ಅವರು ಸೂಚನೆ ನೀಡಿದರು.
ಎಲ್ಲ ಯೋಜನೆಗಳನ್ನು ಪಡೆದುಕೊಳ್ಳಲು ಆಧಾರ್ ಈಗ ಕಡ್ಡಾಯವಾಗಿದ್ದು, ಎಲ್ಲಾ ಕೊರಗರಿಗೂ ಆಧಾರ್ ಮಾಡಿಸಿ ಎಂದೂ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಹೇಳಿದರು.
ಕೊರಗ ಜನಾಂಗದ ಪ್ರಮುಖ ಬೇಡಿಕೆಗಳಾದ ಶಿಕ್ಷಣ ಮತ್ತು ಆರೋಗ್ಯಕ್ಕೆ ಸಂಬಂಧಿಸಿದಂತೆ ಶೈಕ್ಷಣಿಕ ಸಮೀಕ್ಷೆ ಅಂತಿಮ ಹಂತದಲ್ಲಿದ್ದು, ಆರೋಗ್ಯ ಸಮೀಕ್ಷೆ ಆರಂಭಿಕ ಹಂತದಲ್ಲಿದೆ. ಆರೋಗ್ಯ ಸಮೀಕ್ಷೆಗೆ ಪ್ರಶ್ನಾವಳಿಗಳು ಸಿದ್ಧವಾಗಿದ್ದು, ಹೆಚ್‌ಐವಿ ಹಾಗೂ ಹೆಪಟೈಟಿಸ್ ಱಬಿೞರೋಗ ಪತ್ತೆಯನ್ನೂ ಇದರಲ್ಲಿ ಸೇರಿಸಲು ಸಭೆಯಲ್ಲಿ ಸಲಹೆ ನೀಡಲಾಯಿತು.
ಜಿಲ್ಲಾ ಆರೋಗ್ಯ ಸಮಿತಿಯಲ್ಲಿ ಕೈಗೊಂಡ ಕ್ರಮಗಳ ಕುರಿತು ಕೆಎಂಸಿಯ ಸಮುದಾಯ ಆರೋಗ್ಯ ವಿಭಾಗದ ಡಾ.ಅವಿನಾಶ್ ಶೆಟ್ಟಿ ಮಾಹಿತಿ ನೀಡಿದರು. ಶೈಕ್ಷಣಿಕ ಸಮೀಕ್ಷೆ ಮಾಹಿತಿಯನ್ನು ವಿದ್ಯಾಂಗ ಇಲಾಖೆ ಉಪನಿರ್ದೇಶಕ ದಿವಾಕರ ಶೆಟ್ಟಿ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅಶೋಕ್ ಕುಮಾರ್ ಶೆಟ್ಟಿ ಮತ್ತು ಗಣೇಶ ಬಾರ್ಕೂರು, ಮಡಿಕೇರಿಯಲ್ಲಿ ಆರಂಭಿಸಿರುವ ಇ-ಶಿಕ್ಷಣ ಮತ್ತು ಮಗು ಕೇಂದ್ರಿತ ಶಿಕ್ಷಣದಿಂದ ಕೊರಗ ಮಕ್ಕಳು ಕಲಿಯಲು ಸಾಧ್ಯವಿದೆ ಎಂದರು. ಬೇಸಿಗೆ ರಜೆಯಲ್ಲಿ ಬ್ರಿಡ್ಜ್ ಕೋರ್ಸ್‌ಗಳನ್ನು ಆರಂಭಿಸಬೇಕೆಂದೂ ಅವರು ಸಲಹೆ ನೀಡಿದರು.
ಜಿಲ್ಲೆಯ ಎಲ್ಲ ಗ್ರಾಮಗಳಲ್ಲಿ ಪಹಣಿ ವಿತರಣೆ, ಆರ್‌ಟಿಸಿ ವಿತರಣೆಗೆ ಕ್ರಮಕೈಗೊಳ್ಳಲಾಗಿದೆ. ಇದಕ್ಕೆ ಕೊರಗ ಮುಖಂಡರ ಸಹಕಾರಬೇಕಾಗಿದೆ ಎಂದು ಕುಂದಾಪುರದ ಸಹಾಯಕ ಆಯುಕ್ತೆ ಶಿಲ್ಪಾನಾಗ್ ಹೇಳಿದರು. ಸಾಮಾಜಿಕ ದ್ರತೆ ಯೋಜನೆಗಳು, ತೋಟಗಾರಿಕೆ, ಕೃಷಿ ಚಟುವಟಿಕೆ, ಸ್ವಉದ್ಯೋಗ ಬಗ್ಗೆ ಕೈಗೊಂಡ ಕ್ರಮಗಳನ್ನು ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಸಬೆಯಲ್ಲಿ ಮಂಡಿಸಿದರು.
ಕೊರಗರು ತಯಾರಿಸುವ ಬುಟ್ಟಿಗಳಿಗೆ ಮಾರ್ಕೆಟಿಂಗ್ ಮಾಡುವ ಬಗ್ಗೆಯೂ ಅವರಿಗೆ ಕೌಶಲ್ಯ ತರಬೇತಿ ನೀಡುವ ಕುರಿತು ಚರ್ಚೆ ನಡೆಯಿತು.ಅಪರ ಜಿಲ್ಲಾಧಿಕಾರಿ ಅನುರಾಧ, ಐಟಿಡಿಪಿ ಅಧಿಕಾರಿ ಹರೀಶ್ ಗಾಂವ್ಕರ್ ಉಪಸ್ಥಿತರಿದ್ದರು.







