ಲಾರಿ ಮಾಲಕರ ಮುಷ್ಕರ 3ನೆ ದಿನಕ್ಕೆ
ಅಗತ್ಯ ವಸ್ತುಗಳ ಪೂರೈಕೆಯಲ್ಲಿ ವ್ಯತ್ಯಯ: ಜನರ ಪರದಾಟ

ಬೆಂಗಳೂರು, ಎ.1: ವಿಮೆ ಮೊತ್ತ ಏರಿಕೆ ರದ್ದುಗೊಳಿಸಿ ಸರಕಾರ ಆದೇಶ ಹೊರಡಿಸಬೇಕು ಹಾಗೂ ಟೋಲ್ ದರಗಳನ್ನು ಕಡಿತ ಮಾಡಬೇಕು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಲಾರಿ ಮಾಲಕರು ಮತ್ತು ಏಜೆಂಟರ ಸಂಘದ ಒಕ್ಕೂಟ ಕಳೆದ ಮೂರು ದಿನಗಳಿಂದ ನಡೆಸುತ್ತಿರುವ ಲಾರಿ ಮುಷ್ಕರಕ್ಕೆ ಲಾರಿ ಮಾಲಕರ ಸಂಘಗಳ ಒಕ್ಕೂಟ ಕೂಡ ಕೈ ಜೋಡಿಸಿದ್ದು, ಮುಷ್ಕರ ಮತ್ತಷ್ಟು ತೀವ್ರತೆ ಪಡೆದುಕೊಂಡಿದೆ.
ಇದರ ಪರಿಣಾಮದಿಂದಾಗಿ ಭಾರಿ ಪ್ರಮಾಣದಲ್ಲಿ ಅಗತ್ಯ ವಸ್ತುಗಳ ಪೂರೈಕೆ ವ್ಯತ್ಯಯ ಉಂಟಾಗಿದೆ. ಪಡಿತರ ಆಹಾರ ಧಾನ್ಯ, ತರಕಾರಿ ಸೇರಿದಂತೆ ವಿವಿಧ ದಿನನಿತ್ಯ ಬಳಕೆ ವಸ್ತುಗಳನ್ನು ಸಾಗಿಸುತ್ತಿದ್ದ ಲಾರಿಗಳು ರಸ್ತೆ ಬದಿಯಲ್ಲಿ ನಿಂತುಕೊಂಡಿದ್ದು, ನಗರದಾದ್ಯಂತ ಅಗತ್ಯ ವಸ್ತುಗಳು ಸಿಗದೇ ಸಾರ್ವಜನಿಕರು ಪರದಾಡುವ ಸ್ಥಿತಿ ತಲುಪಿದೆ.
ಥರ್ಡ್‌ಪಾರ್ಟಿ ಪ್ರೀಮಿಯಂ ದರವನ್ನು ರದ್ದು ಪಡಿಸದಿದ್ದರೆ ಎ.3ರಿಂದ ಲಾರಿ ಮುಷ್ಕರವನ್ನು ಮತ್ತಷ್ಟು ತೀವ್ರಗೊಳಿಸಲು ಎರಡು ಸಂಘಟನೆಗಳು ಜಂಟಿ ನಿರ್ಣಯ ಕೈಗೊಂಡಿದ್ದು, ಸೋಮವಾರದಿಂದ ಪೆಟ್ರೋಲ್, ಡೀಸೆಲ್, ಗ್ಯಾಸ್, ಪಡಿತರ ಆಹಾರ ಸಾಮಗ್ರಿ, ತರಕಾರಿ ಸೇರಿದಂತೆ ವಿವಿಧ ವಸ್ತುಗಳ ಪೂರೈಕೆಯಲ್ಲಿ ಮತ್ತಷ್ಟು ಸಮಸ್ಯೆಯಾಗಲಿದೆ.
ಈಗಾಗಲೇ ಮುಷ್ಕರ ಆರಂಭಿಸಿದ್ದು ಇಂದಿಗೆ ಮೂರು ದಿನಕ್ಕೆ ಕಾಲಿರಿಸಿದೆ. ಹೀಗಿದ್ದರೂ ಸರಕಾರ ಲಾರಿ ಮಾಲೀಕರ ಸಮಸ್ಯೆಯ ಇತ್ಯರ್ಥಕ್ಕೆ ಯಾವುದೇ ಕ್ರಮ ಕೈಗೊಳ್ಳಲು ಮುಂದಾಗದಿರುವುದು ಬೇಸರ ತರಿಸಿದೆ. ದಕ್ಷಿಣ ಭಾರತದಲ್ಲಿ ಈಗಾಗಲೇ 22 ಲಕ್ಷ ವಾಹನಗಳ ಸಂಚಾರ ಸ್ಥಗಿತಗೊಳಿಸಲಾಗಿದೆ. ಇದರಿಂದ ದಿನ ನಿತ್ಯ ಐದು ಸಾವಿರ ಕೋಟಿಗೂ ಹೆಚ್ಚು ನಷ್ಟವಾಗುತ್ತಿದೆ. ಇನ್ನೂ ಎ.3 ರಿಂದ ಮತ್ತೆ 7 ಲಕ್ಷ ವಾಹನಗಳು ಮುಷ್ಕರದಲ್ಲಿ ಭಾಗಿಯಾಗಲಿವೆ ಎಂದು ದಕ್ಷಿಣ ರಾಜ್ಯಗಳ ವಾಣಿಜ್ಯ ಮಾಲಕರ ಸಂಘದ ಪ್ರಧಾನ ಕಾರ್ಯದರ್ಶಿ ಜಿ.ಆರ್ ಷಣ್ಮುಗಪ್ಪ ಮಾಹಿತಿ ನೀಡಿದ್ದಾರೆ.
ಈ ವೇಳೆ ಅವರು ಸರಕು ಸಾಗಾಣೆಯ ವಾಹನಗಳಿಗೆ ಹೆಚ್ಚಿಸಿರುವ ಪ್ರೀಮಿಯಂ ದರವನ್ನು ಕೂಡಲೇ ರದ್ದು ಪಡಿಸಬೇಕು ಹಾಗೂ 19 ರಾಜ್ಯ ಹೆದ್ದಾರಿಗಳಲ್ಲಿ ಸಂಗ್ರಹ ಮಾಡಲಾಗುತ್ತಿರುವ ಟೋಲ್ ದರ ರದ್ದು ಪಡಿಸಬೇಕೆಂದು ಒತ್ತಾಯಿಸಿದ್ದಾರೆ. ಈ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಲಾರಿ ಮಾಲೀಕರ ಸಂಘದ ಪ್ರಧಾನ ಕಾರ್ಯದರ್ಶಿ ಕೆ.ಎಂ ಗೋಪಾಲಸ್ವಾಮಿ ಪ್ರತಿಕ್ರಿಯೆ ನೀಡಿ, ಬೆಂಗಳೂರಿನಲ್ಲಿ 2.5 ಲಕ್ಷಕ್ಕೂ ಅಧಿಕ ಲಾರಿಗಳನ್ನು ಸ್ಥಗಿತಗೊಳಿಸಲಾಗಿದೆ. ಜೊತೆಗೆ, ರಾಜ್ಯದಲ್ಲಿ 9 ಲಕ್ಷ ಲಾರಿಗಳು ಮುಷ್ಕರದಲ್ಲಿ ಭಾಗಿಯಾಗಿವೆ, ಮುಂದಿನ ದಿನಗಳಲ್ಲಿ ಮತ್ತಷ್ಟು ಲಾರಿಗಳು ಮುಷ್ಕರದಲ್ಲಿ ಭಾಗಿಯಾಗಲಿದೆ ಎಂದು ಮಾಹಿತಿ ನೀಡಿದ್ದಾರೆ.







