ಫೇಸ್‌ಬುಕ್‌ನಲ್ಲಿ ಸುಳ್ಳು ಆರೋಪ : ಮಹಿಳೆಗೆ 3.2 ಕೋಟಿ ರೂ. ದಂಡ

ನ್ಯೂಯಾರ್ಕ್, ಎ. 1: ತನ್ನ ಮಾಜಿ ಗೆಳತಿಯೊಬ್ಬಳು ಆಕೆಯ ಮಗನನ್ನು ಕೊಂದಿದ್ದಾಳೆ ಎಂಬ ಸುಳ್ಳು ಮಾಹಿತಿಯನ್ನು ಫೇಸ್‌ಬುಕ್‌ನಲ್ಲಿ ಹಾಕಿರುವುದಕ್ಕಾಗಿ 5 ಲಕ್ಷ ಡಾಲರ್ (ಸುಮಾರು 3.2 ಕೋಟಿ ರೂಪಾಯಿ) ಪರಿಹಾರ ನೀಡುವಂತೆ ನಾರ್ತ್ ಕ್ಯಾರಲೈನ ರಾಜ್ಯದ ನ್ಯಾಯಾಧೀಶರೊಬ್ಬರು ಮಹಿಳೆಯೊಬ್ಬರಿಗೆ ಆದೇಶಿಸಿದ್ದಾರೆ.
ಆ್ಯಶ್‌ವಿಲ್‌ನ ಜ್ಯಾಕಲಿನ್ ಹ್ಯಾಮಂಡ್ ಎಂಬ ಮಹಿಳೆ ತನ್ನ ಮಾಜಿ ಗೆಳತಿ ಡ್ಯಾವೈನ್ ಡಯಲ್ ಎಂಬವರನ್ನು ಕುರಿತು 2015ರಲ್ಲಿ ‘‘ನಾನು ಮದ್ಯದ ಅಮಲಿನಲ್ಲಿ ನನ್ನದೇ ಮಗುವನ್ನು ಕೊಂದಿಲ್ಲ’’ ಎಂಬುದಾಗಿ ಫೇಸ್‌ಬುಕ್‌ನಲ್ಲಿ ಬರೆದಿದ್ದರು.
ಆದರೆ, ತನ್ನ ಮಗನ ಸಾವಿನಲ್ಲಿ ತನ್ನ ಪಾತ್ರವೇನೂ ಇಲ್ಲ ಎಂದು ಹೇಳಿರುವ ಡಯಲ್, ಮಾನನಷ್ಟ ಮತ್ತು ಉದ್ದೇಶಪೂರ್ವಕವಾಗಿ ಮಾನಸಿಕ ಕ್ಲೇಶ ಉಂಟು ಮಾಡಿರುವುದಕ್ಕಾಗಿ ಹ್ಯಾಮಂಡ್ ವಿರುದ್ಧ ಮೊಕದ್ದಮೆ ಹೂಡಿದ್ದರು.
ರೇಡಿಯೊ ನಿಲಯವೊಂದರಲ್ಲಿ ಜೊತೆಯಾಗಿ ಕೆಲಸ ಮಾಡುವ ಯತ್ನ ಕೈಗೂಡದ ಹಿನ್ನೆಲೆಯಲ್ಲಿ ಹ್ಯಾಮಂಡ್ ಮತ್ತು ಡಯಲ್ ನಡುವಿನ ಸ್ನೇಹ ಹಳಸಿತ್ತು.
‘‘ಸಾಮಾಜಿಕ ಮಾಧ್ಯಮಗಳಲ್ಲಿ ಸೋಸುವಿಕೆ ಇಲ್ಲದಿರುವುದರಿಂದ ನೀವು ಸುರಕ್ಷಿತ ಸ್ಥಾನದಲ್ಲಿ ನಿಂತು ನಿಮಗೆ ತೋಚಿದ್ದನ್ನೆಲ್ಲ ಹೇಳುವ ಹಾಗಿಲ್ಲ. ಹಿಂದೆಯೂ ಅವರು ಹಲವಾರು ಸುಳ್ಳು ಹೇಳಿಕೆಗಳನ್ನು ನೀಡುತ್ತಾ ಬಂದಿದ್ದಾರೆ. ಆದರೆ, ಈ ಹೇಳಿಕೆಯಿಂದ ನನಗೆ ತುಂಬಾ ನೋವಾಗಿದೆ’’ ಎಂದು ಡಯಲ್ ನ್ಯಾಯಾಲಯದಲ್ಲಿ ಹೇಳಿದರು.
ಕಳೆದ ತಿಂಗಳು ತೀರ್ಪು ನೀಡಿದ ನ್ಯಾಯಾಲಯ, ವಾಸ್ತವಿಕ ಹಾನಿಗಾಗಿ 2.5 ಲಕ್ಷ ಡಾಲರ್ ಮತ್ತು ದಂಡ ರೂಪದಲ್ಲಿ 2.5 ಲಕ್ಷ ಡಾಲರ್, ಒಟ್ಟು 5 ಲಕ್ಷ ಡಾಲರ್ ಪರಿಹಾರ ನೀಡುವಂತೆ ಹ್ಯಾಮಂಡ್‌ಗೆ ಆದೇಶಿಸಿದೆ.
‘‘ನಿಮಗೆ ತೋಚಿದ್ದನ್ನು ಏನು ಬೇಕಾದರು ಬರೆಯಬಹುದು ಎಂಬ ಕಾರಣಕ್ಕಾಗಿ ನೀವು ಹಾಗೆ ಮಾಡಬಾರದು. ಇತರರ ನಡತೆ ಮತ್ತು ಪ್ರತಿಷ್ಠೆಗೆ ಹಾನಿ ಮಾಡುವ ಸುಳ್ಳು ಹೇಳಿಕೆಯೊಂದು ಯಾವಾಗ ಬೇಕಾದರೂ ನಿಮ್ಮನ್ನು ತೊಂದರೆಯಲ್ಲಿ ಸಿಕ್ಕಿಸಬಹುದು’’ ಎಂದು ನಾರ್ತ್ ಕ್ಯಾರಲೈನದ ವಕೀಲೆ ಮಿಸ್ ಓವನ್ ಹೇಳಿದರು.







