ಖಿನ್ನತೆಯಿಂದ ಬಳಲುತ್ತಿರುವವರು 30 ಕೋಟಿ : ಡಬ್ಲುಎಚ್‌ಒ

ಲಂಡನ್, ಎ. 1: ಮಾನಸಿಕ ಖಿನ್ನತೆಯಿಂದ ಜಗತ್ತಿನಾದ್ಯಂತ 30 ಕೋಟಿಗೂ ಅಧಿಕ ಮಂದಿ ಬಳಲುತ್ತಿದ್ದಾರೆ ಹಾಗೂ ಅನಾರೋಗ್ಯಕ್ಕೆ ಇದು ಪ್ರಮುಖ ಕಾರಣವಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲುಎಚ್‌ಒ) ಹೇಳಿದೆ.
ಮಾನಸಿಕ ಖಿನ್ನತೆ ದರ 2005ರ ಬಳಿಕ 18 ಶೇಕಡದಷ್ಟು ಹೆಚ್ಚಾಗಿದೆ, ಆದರೆ ಮಾನಸಿಕ ಆರೋಗ್ಯದ ಕುರಿತಂತೆ ಇರುವ ನಿಷ್ಕಾಳಜಿ ಹಾಗೂ ಅದಕ್ಕೆ ಅಂಟಿಕೊಂಡಿರುವ ಕಳಂಕದಿಂದಾಗಿ ಆರೋಗ್ಯಯುತವಾಗಿ ಬದುಕಲು ಅಗತ್ಯವಿರುವ ಚಿಕಿತ್ಸೆಯನ್ನು ಹೆಚ್ಚಿನವರು ಪಡೆಯುತ್ತಿಲ್ಲ ಎಂದು ವಿಶ್ವ ಆರೋಗ್ಯ ದಿನದ ಮುನ್ನಾ ದಿನದಂದು ಅದು ಹೇಳಿದೆ.
‘‘ಈ ನೂತನ ಅಂಕಿಸಂಖ್ಯೆಗಳು ಎಲ್ಲ ದೇಶಗಳಿಗೆ ಎಚ್ಚರಿಕೆಯ ಕರೆಗಂಟೆಯಾಗಿದೆ. ಮಾನಸಿಕ ಆರೋಗ್ಯದ ಬಗೆಗಿನ ತಮ್ಮ ಧೋರಣೆಗಳನ್ನು ಮರುಪರಿಶೀಲಿಸಿ, ಅದರ ಚಿಕಿತ್ಸೆಗಾಗಿ ತುರ್ತು ಕ್ರಮಗಳನ್ನು ಅವುಗಳು ತೆಗೆದುಕೊಳ್ಳಬೇಕಾಗಿದೆ’’ ಎಂದು ಸಂಸ್ಥೆಯ ಮಹಾ ನಿರ್ದೇಶಕಿ ಮಾರ್ಗರೆಟ್ ಚಾನ್ ಹೇಳಿದರು.
ಮಾನಸಿಕ ಆರೋಗ್ಯದ ಕುರಿತ ಕಳಂಕ ಮತ್ತು ತಪ್ಪು ಕಲ್ಪನೆಗಳನ್ನು ನಿವಾರಿಸಲು ವಿಶ್ವ ಆರೋಗ್ಯ ಸಂಸ್ಥೆಯು ಮಾನಸಿಕ ಆರೋಗ್ಯ ಅಭಿಯಾನವೊಂದನ್ನು ನಡೆಸುತ್ತಿದೆ.
‘‘ಮಾನಸಿಕ ಖಿನ್ನತೆಯಿಂದ ಬಳಲುತ್ತಿರುವವರು ತಾವು ನಂಬುವ ಜನರೊಡನೆ ಮಾತನಾಡುವಂತೆ ಮಾಡುವುದು ಚಿಕಿತ್ಸೆಯ ಮೊದಲ ಹಂತವಾಗಿರುತ್ತದೆ’’ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಮಾನಸಿಕ ಆರೋಗ್ಯ ಇಲಾಖೆಯ ನಿರ್ದೇಶಕ ಶೇಖರ್ ಸಕ್ಸೇನಾ ಹೇಳಿದರು.







