ಆಸ್ಪತ್ರೆಯಲ್ಲಿ ಆರ್‌ಎಸ್‌ಎಸ್ ಕಾರ್ಯಕರ್ತನ ಸಾವು: ಬಂಧುಗಳಿಂದ ಆಸ್ಪತ್ರೆಯಲ್ಲಿ ದಾಂಧಲೆ

ಇಂದೋರ್, ಎ.1: ಇಲ್ಲಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಆರ್‌ಎಸ್‌ಎಸ್ ಕಾರ್ಯಕರ್ತನೋರ್ವ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ ಹಿನ್ನೆಲೆಯಲ್ಲಿ ಆತನ ಬಂಧುಗಳು ಆಸ್ಪತ್ರೆಯಲ್ಲಿ ದಾಂಧಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.
ಆರ್‌ಎಸ್‌ಎಸ್ ಕಾರ್ಯಕರ್ತರಾಗಿರುವ ಹಿಮ್ಮತ್‌ಸಿಂಗ್ ರಾಥೋರ್(41 ವರ್ಷ) ಕ್ಯಾನ್ಸರ್‌ನಿಂದ ಬಳಲುತ್ತಿದ್ದು ಮೂರು ದಿನದ ಹಿಂದೆ ಇಲ್ಲಿಯ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗೆಂದು ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಶುಕ್ರವಾರ ಮೃತಪಟ್ಟಿರುವುದಾಗಿ ಪೊಲೀಸ್ ಅಧಿಕಾರಿ ದಿಲೀಪ್ ಸಿಂಗ್ ಚೌಧರಿ ತಿಳಿಸಿದ್ದಾರೆ. ಇದರಿಂದ ಆಕ್ರೋಶಿತರಾದ ಮೃತ ವ್ಯಕ್ತಿಯ ಬಂಧುಗಳು, ಈ ಸಾವಿಗೆ ವೈದ್ಯರ ಮತ್ತು ಆಸ್ಪತ್ರೆಯ ಸಿಬ್ಬಂದಿಗಳ ನಿರ್ಲಕ್ಷವೇ ಕಾರಣ ಎಂದು ಆರೋಪಿಸಿ ಆಸ್ಪತ್ರೆಯ ಗಾಜಿನ ದ್ವಾರಗಳನ್ನು ಹಾಗೂ ಪೀಠೋಪಕರಣಗಳನ್ನು ದ್ವಂಸ ಮಾಡಿದ್ದಾರೆ ಎನ್ನಲಾಗಿದೆ.
ಘಟನೆಯ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸ್ಥಳೀಯ ಆರ್‌ಎಸ್‌ಎಸ್ ವಕ್ತಾರ ಸಾಗರ್ ಚೌಕ್ಸೆ, ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ ನಡೆಸಿದ ಬಳಿಕ ರೋಗಿಯ ಆರೋಗ್ಯಸ್ಥಿತಿ ಚಿಂತಾಜನಕ ಮಟ್ಟಕ್ಕೆ ತಲುಪಿತು. ಈ ಸ್ಥಿತಿಯಲ್ಲಿದ್ದ ರೋಗಿಯ ಶುಷ್ರೂಷೆಗೆ ಎರಡು ಗಂಟೆ ಹೊತ್ತು ಯಾವ ವೈದ್ಯರೂ ಮುಂದಾಗಲಿಲ್ಲ ಎಂದು ಆರೋಪಿಸಿದ್ದಾರೆ. ಘಟನೆಯಿಂದ ಆಕ್ರೋಶಿತರಾದ ಬಂಧುಗಳನ್ನು ಸಮಾಧಾನ ಪಡಿಸಲು ಆರ್‌ಎಸ್‌ಎಸ್ ಕಾರ್ಯಕರ್ತರು ಸ್ಥಳಕ್ಕೆ ಬಂದಿದ್ದರೇ ಹೊರತು ಅವರು ದಾಂಧಲೆ ನಡೆಸಿಲ್ಲ ಎಂದವರು ತಿಳಿಸಿದ್ದಾರೆ. ನಿರ್ಲಕ್ಷದ ವರ್ತನೆಗಾಗಿ ಆಸ್ಪತ್ರೆಯ ಸಿಬ್ಬಂದಿಗಳ ವಿರುದ್ಧ ಪೊಲೀಸರು ಕ್ರಮ ಕೈಗೊಳ್ಳಬೇಕು ಎಂದವರು ಆಗ್ರಹಿಸಿದರು.
ಘಟನೆಯ ಬಗ್ಗೆ ಸಿಸಿಟಿವಿ ದೃಶ್ಯಾವಳಿ ಸಹಿತ ಆಸ್ಪತ್ರೆಯ ಆಡಳಿತ ವರ್ಗ ಪೊಲೀಸರಿಗೆ ದೂರು ನೀಡಿದೆ.







