ಸತತ 36 ಗಂಟೆಗಳ 'ಸ್ಮಾರ್ಟ್ ಇಂಡಿಯಾ ಹ್ಯಾಕಥಾನ್' ಗೆ ಚಾಲನೆ

ಮಣಿಪಾಲ, ಎ.1: ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿ ನಿರ್ವಹಿಸುವ ಸತತ 36 ಗಂಟೆಗಳ 'ಸ್ಮಾರ್ಟ್ ಇಂಡಿಯಾ ಹ್ಯಾಕಥಾನ್' ಕಾರ್ಯಕ್ರಮಕ್ಕೆ ಮಣಿಪಾಲ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಗ್ರಂಥಾಲಯ ಸಭಾಂಗಣದಲ್ಲಿ ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಶನಿವಾರ ಬೆಳಗ್ಗೆ ಚಾಲನೆ ನೀಡಿದರು.
ದೇಶಾದ್ಯಂತ ಒಟ್ಟು 26 ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಶನಿವಾರ ಬೆಳಗ್ಗೆ 7:30ರಿಂದ ರವಿವಾರ ರಾತ್ರಿ 8:30ರವರೆಗೆ ನಿರಂತರವಾಗಿ ಈ ಕಾರ್ಯಕ್ರಮ ನಡೆಯಲಿದೆ. ಕರ್ನಾಟಕದಲ್ಲಿ ಮಣಿಪಾಲದ ಎಂಐಟಿ ಅಲ್ಲದೇ ಬೆಂಗಳೂರು ಹಾಗೂ ಹುಬ್ಬಳ್ಳಿಯ ಒಂದೊಂದು ಕಾಲೇಜುಗಳಲ್ಲೂ ಹ್ಯಾಕಥಾನ್ ನಡೆಯುತ್ತಿದೆ.
ಮಣಿಪಾಲದಲ್ಲಿ, ವಿಶ್ವವಿದ್ಯಾನಿಲಯ ಧನಸಹಾಯ ಆಯೋಗ (ಯುಜಿಸಿ) ನೀಡಿದ ಸಮಸ್ಯೆಗಳಿಗೆ ದೇಶಾದ್ಯಂತದಿಂದ ಬರುವ ಆಯ್ದ ತಾಂತ್ರಿಕ ಕಾಲೇಜುಗಳ ವಿದ್ಯಾರ್ಥಿಗಳ ತಂಡ ಪರಿಹಾರವನ್ನು 36 ಗಂಟೆಗಳಲ್ಲಿ ಕಂಡು ಹಿಡಿಯಲು ಪ್ರಯತ್ನಿಸುತ್ತಿದೆ. ಮಣಿಪಾಲದಲ್ಲಿ ತಲಾ ಆರು ಮಂದಿ ವಿದ್ಯಾರ್ಥಿ ಗಳು ಹಾಗೂ ಇಬ್ಬರು ಮಾರ್ಗದರ್ಶಕರಿರುವ ಒಟ್ಟು 42 ತಂಡಗಳಿದ್ದು, ಇವುಗಳಲ್ಲಿ ಸುಮಾರು 350ಕ್ಕೂ ಅಧಿಕ ಮಂದಿ ಸಮಸ್ಯೆಗಳ ಪರಿಹಾರಕ್ಕೆ ಕಾರ್ಯೋನ್ಮುಖರಾಗಿದ್ದಾರೆ.
ದೇಶದಲ್ಲಿ 26 ಕಾಲೇಜುಗಳಲ್ಲಿ ಒಟ್ಟು 10,000ಕ್ಕೂ ಅಧಿಕ ವಿದ್ಯಾರ್ಥಿಗಳು ಕೇಂದ್ರ ಸರಕಾರದ ವಿವಿಧ ಇಲಾಖೆಗಳು ಮುಂದಿಟ್ಟಿರುವ ಡಿಜಿಟಲ್ ಇಂಡಿಯಾದ ವಿವಿಧ ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಕೊಳ್ಳಲು ಶ್ರಮಿಸುತಿದ್ದಾರೆ. ಇದರಲ್ಲಿ ಇಸ್ರೋ, ರಕ್ಷಣೆ, ಪ್ರವಾಸೋದ್ಯಮ ಇತ್ಯಾದಿ ಇಲಾಖೆಗಳ ಸಮಸ್ಯೆಗಳಿವೆ.
ಮಣಿಪಾಲದಲ್ಲಿರುವ 42 ತಂಡಗಳು ಯುಜಿಸಿ ಮುಂದೊಡ್ಡಿರುವ ಸಮಸ್ಯೆಗಳಿಗೆ ಪರಿಹಾರ ನೀಡಲು ಪ್ರಯತ್ನದಲ್ಲಿದೆ. ಮಣಿಪಾಲ ಎಂಐಟಿಯ ಎರಡು ತಂಡಗಳು (12 ಮಂದಿ) ರಾಜಸ್ತಾನದ ಉದಯಪುರಕ್ಕೆ ಹಾಗೂ ಕೇರಳದ ಕೊಚ್ಚಿನ್‌ನಲ್ಲಿ ಪ್ರವಾಸೋದ್ಯಮ ಇಲಾಖೆಯ ಸಮಸ್ಯೆಗಳಿಗೆ ಉತ್ತರ ಕಂಡು ಹಿಡಿಯುತ್ತಿವೆ ಎಂದು ಕಾರ್ಯಕ್ರಮದ ಸಂಯೋಜಕ ಡಾ.ಪ್ರೀತಮ್‌ಕುಮಾರ್ ತಿಳಿಸಿದರು.
ಮಣಿಪಾಲದಲ್ಲಿ ದೂರದ ಪಂಜಾಬ್, ಹಿಮಾಚಲ ಪ್ರದೇಶ, ರಾಜಸ್ತಾನ ಸೇರಿದಂತೆ ವಿವಿದೆಡೆಗಳಿಂದ ಬಂದ ಇಂಜಿನಿಯರಿಂಗ್ ವಿದ್ಯಾರ್ಥಿಗಳು ಭಾಗವಹಿಸಿದ್ದಾರೆ. ಆರು ಮಂದಿ ವಿದ್ಯಾರ್ಥಿಗಳ ಪ್ರತಿ ತಂಡದಲ್ಲಿ ಓರ್ವ ವಿದ್ಯಾರ್ಥಿನಿಯೂ ಸೇರಿದ್ದಾರೆ. ಅವರಿಗೆ ಮಾರ್ಗದರ್ಶಕರಾಗಿ ಇಬ್ಬರು ವೃತ್ತಿಪರರಿರುತ್ತಾರೆ.
ರವಿವಾರ ರಾತ್ರಿ ಕಾರ್ಯಕ್ರಮ ಮುಗಿದ ಬಳಿಕ ಇವರು ವಿದ್ಯಾರ್ಥಿಗಳು ಕಂಡು ಹಿಡಿದ ಉತ್ತರದ ವೌಲ್ಯಮಾಪನ ನಡೆಯಲಿದ್ದು, ಇವುಗಳಲ್ಲಿ ಮೊದಲ ಮೂರು ಉತ್ತಮ ಸಾಧನೆಗೆ ಕ್ರಮವಾಗಿ ಒಂದು ಲಕ್ಷ ರೂ., 75,000 ಹಾಗೂ 50,000ರೂ.ಗಳ ನಗದು ಬಹುಮಾನವನ್ನು ತಂಡಕ್ಕೆ ನೀಡಲಾಗುವುದು ಎಂದು ಡಾ.ಪ್ರೀತಮ್‌ಕುಮಾರ್ ನುಡಿದರು.
ಇಂದು ಬೆಳಗ್ಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಜಿಲ್ಲಾಧಿಕಾರಿ ಪ್ರಿಯಾಂಕ ಅವರು ಮಾತನಾಡಿ, ಮುಂದಿನ ದಿನಗಳಲ್ಲಿ ಉಡುಪಿ ಜಿಲ್ಲಾ ಮಟ್ಟದ ಸಮಸ್ಯೆಗಳಿಗೂ ಪರಿಹಾರ ಕಂಡುಕೊಳ್ಳಲು ಸ್ಥಳೀಯ ತಾಂತ್ರಿಕ ಕಾಲೇಜುಗಳ ಸಹಯೋಗದೊಂದಿಗೆ ಹ್ಯಾಕಥಾನ್ ಆಯೋಜಿಸುವ ಗುರಿಯನ್ನು ಹೊಂದಿರುವುದಾಗಿ ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಮಣಿಪಾಲ ವಿವಿ ಕುಲಸಚಿವ ಡಾ.ನಾರಾಯಣ ಸಭಾಹಿತ್ ಮಾತನಾಡಿ, ಸ್ಥಳೀಯ ಸಮಸ್ಯೆಗಳಿಗೆ ಡಿಜಿಟಲ್ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಈ ಕಾರ್ಯಕ್ರಮ ಸಹಕಾರಿಯಾಗಿದೆ ಎಂದರು. ಯುಜಿಸಿ ಜೊತೆ ಕಾರ್ಯದರ್ಶಿ ಡಾ.ಎನ್.ಗೋಪಕುಮಾರ್ ಮಾತನಾಡಿದರು.
ಎಂಐಟಿಯ ನಿರ್ದೇಶಕ ಹಾಗೂ ಮಣಿಪಾಲ ವಿವಿ ಸಹಕುಲಪತಿ ಡಾ.ಜಿ. ಕೆ.ಪ್ರಭು ಸ್ವಾಗತಿಸಿದರು. ಮಾಹಿತಿ ಮತ್ತು ಸಂವಹನ ವಿಭಾಗದ ಮುಖ್ಯಸ್ಥ ಡಾ.ಬಾಲಚಂದ್ರ ಅತಿಥಿಗಳನ್ನು ಪರಿಚಯಿಸಿದರು. ಕಾರ್ಯಕ್ರಮ ಸಂಘಟಕ ಎಂಐಟಿಯ ಉಪಕುಲಸಚಿವ (ತಾಂತ್ರಿಕ ಶಿಕ್ಷಣ ವಿಭಾಗ) ಡಾ.ಪ್ರೀತಮ್ ಕುಮಾರ್ ವಂದಿಸಿದರು.







