ಶಿರಿಯಾರ ಗ್ರಾಪಂ ಬರ್ಖಾಸ್ತು: ಆಡಳಿತಾಧಿಕಾರಿಯ ನೇಮಕ
ಉಡುಪಿ, ಎ.1: ತಾಲೂಕಿನ ಶಿರಿಯಾರ ಗ್ರಾಪಂನ್ನು ವಿಸರ್ಜಿಸಿ ಕರ್ನಾಟಕ ರಾಜ್ಯಪತ್ರದಲ್ಲಿ ಅಧಿಸೂಚನೆ ಪ್ರಕಟಗೊಂಡಿದೆ. ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್‌ರಾಜ್ ಅಧಿನಿಯಮ 1993ರ ಪ್ರಕರಣ 268(1)ರಂತೆ ರಾಜ್ಯ ಸರಕಾರ ವಿಸರ್ಜನೆಗೆ ಆದೇಶ ಹೊರಡಿಸಿದೆ.
ಇದೀಗ ಗ್ರಾಪಂನ ಆಡಳಿತಾಧಿಕಾರಿಯಾಗಿ ಉಡುಪಿ ಜಿಲ್ಲಾ ತೋಟಗಾರಿಕಾ ಇಲಾಖೆಯ ಉಪನಿರ್ದೇಶಕಿ ಭುವನೇಶ್ವರಿ ಅವರನ್ನು ನಿಯುಕ್ತಿಗೊಳಿಸಲಾಗಿದೆ. ಗ್ರಾಪಂಗೆ ಚುನಾವಣೆ ನಡೆದು ಹೊಸ ಆಡಳಿತ ಅಸ್ತಿತ್ವಕ್ಕೆ ಬರುವರೆಗೆ ಆಡಳಿತಾಧಿಕಾರಿಯಾಗಿ ಕಾರ್ಯ ನಿರ್ವಹಿಸಲಿದ್ದಾರೆ.
ಗ್ರಾಪಂ ಅಧ್ಯಕ್ಷೆ ಹಾಗೂ ಸದಸ್ಯರ ನಡುವಿನ ಹೊಂದಾಣಿಕೆ ಕೊರತೆಯಿಂದ ಗ್ರಾಮಸಭೆಗಳು ನಡೆಯದೇ, ಪಂಚಾಯತ್‌ನ ನಿಗದಿತ ಯಾವುದೇ ಕಾರ್ಯ ಚಟುವಟಿಕೆಗಳು ನಡೆಯದೇ ನಿಷ್ಕೃಿಯಗೊಂಡ ಹಿನ್ನೆಲೆಯಲ್ಲಿ ತಾಪಂನ ಶಿಫಾರಸ್ಸಿನಂತೆ ದಲಿತ ಮಹಿಳೆಯೊಬ್ಬರನ್ನು ಅಧ್ಯಕ್ಷೆಯಾಗಿಹೊಂದಿದ್ದ ಶಿರಿಯಾರ ಗ್ರಾಪಂನ್ನು ಬರ್ಖಾಸ್ತುಗೊಳಿಸುವ ಸರ್ವಾನುಮತದ ನಿರ್ಣಯವನ್ನು ಉಡುಪಿ ಜಿಪಂ ದಿನಕರಬಾಬು ಅಧ್ಯಕ್ಷತೆಯಲ್ಲಿ ಫೆಬ್ರವರಿ ತಿಂಗಳಲ್ಲಿ ನಡೆದ ಐದನೇ ಸಾಮಾನ್ಯ ಸಭೆಯಲ್ಲಿ ಕೈಗೊಂಡಿತು.
ಶಿರಿಯಾರ ಗ್ರಾಪಂನಲ್ಲಿ ಸದಸ್ಯರ ನಡುವೆ ಹೊಂದಾಣಿಕೆ ಹಾಗೂ ಸಮನ್ವಯದ ಸಮಸ್ಯೆ ಇರುವುದರಿಂದ ಗ್ರಾಪಂಗೆ ನಿಗದಿತ ಸಾರ್ವಜನಿಕ ಸೇವೆ ಒದಗಿಸಲು ಸಾಧ್ಯವಾಗುತ್ತಿಲ್ಲ. ಗ್ರಾಪಂನಿಂದ ದೊರೆಯಬೇಕಾದ ಯಾವುದೇ ಸೌಲಭ್ಯ ಗ್ರಾಮಸ್ಥರಿಗೆ ಸಿಗುತ್ತಿಲ್ಲ. ಆದುದರಿಂದ ಗ್ರಾಪಂನ ಉದ್ದೇಶಕ್ಕೆ ತಕ್ಕಂತೆ ಯಾವುದೇ ಕಾರ್ಯ ನಡೆಯದಿರುವ ಹಿನ್ನೆಲೆಯಲ್ಲಿ ಶಿರಿಯಾರ ಗ್ರಾಪಂನ ಬರ್ಖಾಸ್ತಿಗೆ ಜಿಪಂ ಸರ್ವಾನುಮತದ ನಿರ್ಣಯ ಕೈಗೊಂಡಿತ್ತು.
ಜಿಪಂನ ನಿರ್ಣಯದ ಆಧಾರದಲ್ಲಿ ಇದೀಗ ಸರಕಾರ ಶಿರಿಯಾರ ಗ್ರಾಪಂನ್ನು ಬರ್ಖಾಸ್ತುಗೊಳಿಸುವ ಬಗ್ಗೆ ಕರ್ನಾಟಕ ರಾಜ್ಯಪತ್ರದಲ್ಲಿ ಅಧಿಸೂಚನೆ ಪ್ರಕಟಿಸಿದೆ.







