ಕಾರಂತರ ಚಿಂತನೆಗಳ ಮರುಹುಟ್ಟು ಅಗತ್ಯ: ಮಾಧವ ಆಚಾರ್ಯ

ಉಡುಪಿ, ಎ.1: ಶಿವರಾಮ ಕಾರಂತರ ಚಿಂತನೆಗಳ ಮರುಹುಟ್ಟು ಆಗ ಬೇಕಾಗಿದೆ. ಆ ಮೂಲಕ ಅವರಿಗೆ ಗೌರವ ನೀಡಬೇಕು. ಅವರ ಬ್ಯಾಲೆಯು ಯಕ್ಷಗಾನಕ್ಕೆ ಪೂರಕ ಹಾಗೂ ಪುನರುಜ್ಜೀವನದ ಸಾರ್ಥಕತೆಯಾಗಿದೆ ಎಂದು ಹಿರಿಯ ಸಾಹಿತಿ, ರಂಗಕರ್ಮಿ ಪ್ರೊ.ಉದ್ಯಾವರ ಮಾಧವ ಆಚಾರ್ಯ ಹೇಳಿದ್ದಾರೆ.
ಕರ್ನಾಟಕ ಕಲಾದರ್ಶಿನಿ ಬೆಂಗಳೂರು ಪ್ರಸ್ತುತ ಪಡಿಸಿ ಸಾಲಿಗ್ರಾಮ ಡಾ.ಕೆ. ಶಿವರಾಮ ಕಾರಂತ ಸಂಶೋಧನೆ ಮತ್ತು ಅಧ್ಯಯನ ಸಂಸ್ಥೆಯ ಸಹಯೋಗ ದೊಂದಿಗೆ ಅಂಬಲಪಾಡಿ ದೇವಳದ ಭವಾನಿ ಮಂಟಪದಲ್ಲಿ ಶನಿವಾರ ಆಯೋಜಿಸಲಾದ ಶಿವರಾಮ ಕಾರಂತರ ಯಕ್ಷಗಾನ ಬ್ಯಾಲೆ 'ನಳದಮಯಂತಿ' ಪ್ರದರ್ಶನದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡುತಿದ್ದರು.
ಶಿವರಾಮ ಕಾರಂತರನ್ನು ಇಂದು ನಾವು ಮರೆತುಬಿಟ್ಟಿದ್ದೇವೆ. ಕಾರಂತರ ಮೂಲಕ ಕಲೆಯಲ್ಲಿ ನೆಲೆ ಕಂಡುಕೊಂಡವರು ಕೂಡ ಅವರ ಬಗ್ಗೆ ಮಾತ ನಾಡುತ್ತಿಲ್ಲ. ರಾಷ್ಟ್ರಮಟ್ಟದಲ್ಲಿಯೂ ಅವರನ್ನು ನೆನಪಿಸುವ ಕಾರ್ಯ ಆಗುತ್ತಿಲ್ಲ. ಕಾರಂತರ ರೂಪಕ ವಸ್ತುಗಳು ಇಂದು ಮರೆಯಾಗಿದೆ ಎಂದು ಅವರು ವಿಷಾದ ವ್ಯಕ್ತಪಡಿಸಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಅಂಬಲಪಾಡಿ ದೇವಳದ ಧರ್ಮದರ್ಶಿ ಡಾ.ನಿ.ಬೀ.ವಿಜಯ ಬಲ್ಲಾಳ್ ಮಾತನಾಡಿ, ಯಕ್ಷಗಾನ ಕರಾವಳಿಯ ಮಣ್ಣಿನ ಕಲೆ. ಇದರ ಚೌಕಟ್ಟನ್ನು ಮೀರಿ ಬಹಳಷ್ಟು ಮಂದಿ ಹೊಸ ಹೊಸ ಪ್ರಯೋಗ ಗಳನ್ನು ಮಾಡಿದ್ದಾರೆ. ಆದರೆ ಪ್ರೇಕ್ಷಕರು ಅದಕ್ಕೆ ಮನ್ನಣೆ ನೀಡಿಲ್ಲ. ಆದರೆ ಶಿವ ರಾಮ ಕಾರಂತರು ಚೌಕಟ್ಟಿನೊಳಗೆಯೇ ಹೊಸ ರೀತಿಯ ಬ್ಯಾಲೆಯನ್ನು ಪರಿ ಚಯಿಸಿದರು. ಈ ವಿಶಿಷ್ಟ ಸಂಪ್ರದಾಯವನ್ನು ಉಳಿಸಿಕೊಳ್ಳಬೇಕಾಗಿದೆ ಎಂದು ಹೇಳಿದರು.
ಕಲಾದರ್ಶಿನಿಯ ಗೌರವಾಧ್ಯಕ್ಷೆ ಶಾರದಾ ಸ್ವಾಗತಿಸಿದರು. ಸುಧೀರ್ ರಾವ್ ಕೊಡವೂರು ಕಾರ್ಯಕ್ರಮ ನಿರೂಪಿಸಿದರು. ಬಳಿಕ ಸುಧೀರ್ ರಾವ್ ಮರು ನಿರ್ದೇಶನದಲ್ಲಿ ನಳ ದಮಯಂತಿ ಪ್ರದರ್ಶನಗೊಂಡಿತು.







