ಬಿಸಿಲಿಗೆ ಚಿಕ್ಕಮಗಳೂರು ಜಿಲ್ಲೆ ತತ್ತರ
ಒಣಗುತ್ತಿರುವ ಕಾಫಿ ಗಿಡಗಳು, ಮೆಣಸು ಬಳ್ಳಿಗಳು

ಚಿಕ್ಕಮಗಳೂರು,ಎ.1: ಬಿಸಿಲಿನ ಧಗೆಗೆ ಚಿಕ್ಕಮಗಳೂರು ಜಿಲ್ಲೆ ಅಕ್ಷರಶಃ ತತ್ತರಿಸಿ ಹೋಗಿದೆ. ಹಚ್ಚ ಹಸುರಿನಿಂದ ವರ್ಷಂಪ್ರತೀ ಕಂಗೊಳಿಸುವ ಪಶ್ಚಿಮಘಟ್ಟ ಪ್ರದೇಶದಲ್ಲಿ ತಂಗಾಳಿ ಬೀಸುವ ಬದಲು ವ್ಯತಿರಿಕ್ತ ವಾತಾವರಣ ನಿರ್ಮಾಣವಾಗಿದೆ. ಬಿಸಿಲ ಧಗೆಗೆ ಇಲ್ಲಿನ ಪ್ರಮುಖ ವಾಣಿಜ್ಯ ಬೆಳೆಯಾದ ಕಾಫಿಗಿಡಗಳು, ಕಾಳು ಮೆಣಸಿನ ಬಳ್ಳಿಗಳು ಒಣಗಲು ಶುರುವಾಗಿದ್ದು ಬೆಳೆಗಾರರಲ್ಲಿ ಆತಂಕದ ಕಾರ್ಮೋಡ ಕವಿದಿದೆ.
ಜಿಲ್ಲೆಯ ವಿವಿಧ ಕಡೆಗಳಲ್ಲಿ ಸುಟ್ಟು ಹೋಗಿರುವ ಕಾಫಿಗಿಡ ಮತ್ತು ಮೆಣಸಿನ ಬಳ್ಳಿಗಳನ್ನು ಕಾಣಬಹುದು. ಇದನ್ನು ಗಮನಿಸಿದರೆ ಬೆಂಕಿ ಅವಘಡ ಸಂಭವಿಸಿರುವ ಭಾವನೆ ಬರುತ್ತದೆ. ಆದರೆ ಮಲೆನಾಡಿನಲ್ಲಿ ಇದು ಬಿಸಿಲ ಝಳಕ್ಕೆ ತತ್ತರಿಸಿ ಒಣಗಿ ಹೋಗಿರುವ ಮೆಣಸು ಬಳ್ಳಿ, ಕಾಫಿ ಗಿಡಗಳ ಮನಕಲಕುವ ಸಂಗತಿಗಳಿವು.
ಕಾಫಿ ಬೆಳೆಯುವ ಪ್ರದೇಶದಲ್ಲಿ ಅರ್ಧ ಡಿಗ್ರಿಯಷ್ಟು ಉಷ್ಣಾಂಶದ ಏರುಪೇರಾದರೂ ಕಾಫಿಬೆಳೆಯನ್ನು ಕುಂಠಿತಗೊಳಿಸುತ್ತದೆ. ಈಗಾಗಲೇ ಒಂದು ಸುತ್ತು ನೀರು ಪಡೆದಿರುವ ಕಾಫಿ ಗಿಡಗಳಲ್ಲಿ ಬಂದಿರುವ ಹೂ ಅಧಿಕ ತಾಪಮಾನಕ್ಕೆ ಒಣಗಲು ಆರಂಭವಾಗಿ ಉದುರಿ ಹೋಗುತ್ತಿವೆ. ಮಳೆ ಇನ್ನೂ ವಿಳಂಬವಾದಲ್ಲಿ ಶೇ.50ರಷ್ಷು ಕಾಫಿ ಫಸಲು ಕಡಿಮೆಯಾಗುವ ಆತಂಕದ ಛಾಯೆ ಬೆಳೆಗಾರರಲ್ಲಿ ಮೂಡಿದೆ. ಮಲೆನಾಡಿನಲ್ಲಿ ಉರಿಬಿಸಿಲು ಹೆಚ್ಚಾಗಿದ್ದು ಬಯಲು ಸೀಮೆಯ ವಾತಾವರಣವನ್ನು ನೆನಪಿಸುವಷ್ಟು ಪ್ರಖರವಾಗಿದೆ. ಚಿಕ್ಕಮಗಳೂರಿನಲ್ಲಿ ಫೆಬ್ರವರಿಯಲ್ಲಿ 35 ಡಿಗ್ರಿ ಉಷ್ಣಾಂಶ ದಾಖಲಾಗಿದ್ದ ತಾಪವಾನ ಈಚೆಗೆ 38 ಡಿಗ್ರಿ ಗಡಿ ಮುಟ್ಟಿದೆ. ಪ್ರತಿನಿತ್ಯ ಬಿಸಿಲ ತಾಪ ಹೆಚ್ಚುತ್ತಿದೆ. ತೋಟಗಳ ಆಸುಪಾಸಿನಲ್ಲಿ ಹರಿಯುತ್ತಿದ್ದ ಹಳ್ಳ-ಕೊಳ್ಳಗಳು ಬತ್ತಿಹೋಗಿವೆ.
ಕೊಳವೆ ಬಾವಿಯಲ್ಲೂ ಅಂತರ್ಜಲ ಮಟ್ಟ ಕುಸಿದಿದೆ. ಮೆಣಸನ್ನು ಉಪಬೆಳೆಯನ್ನಾಗಿ ಮಾಡಿಕೊಂಡಿರುವ ಬೆಳೆಗಾರರಿಗೆ ಕಾಫಿ ಮತ್ತು ಮೆಣಸು ಎರಡೂ ಬೆಳೆಗಳನ್ನು ಕಳೆದುಕೊಳ್ಳುವ ಆತಂಕ ಎದುರಾಗಿದೆ. ನೀರಿನ ಸಮಸ್ಯೆಯಿಂದಾಗಿ ಬೆಳೆಗಾರರು ಕಾಫಿ ಹಾಗೂ ಮೆಣಸು ಬಳ್ಳಿಗಳು ಸೇರಿದಂತೆ ಈ ಬೆಳೆಗಳಿಗೆ ಆಶ್ರಯವಾಗಿರುವ ಇನ್ನಿತರ ಗಿಡ ಮರಗಳಿಗೆ ನೀರು ನೀಡಲು ಕಷ್ಟದಾಯಕವಾಗಿದೆ. ಮಳೆಬಾರದಿದ್ದರೆ ಬೆಳೆಗಾರರು ಇನ್ನಷ್ಟು ಕಂಗೆಡುವ ದಿನಗಳು ದೂರವಿಲ್ಲ.
ಕಳೆದ ಜನವರಿಯಿಂದ ಮಾರ್ಚ್‌ವರಗೆ ವಾಡಿಕೆಗೂ ಮೀರಿ ಮಳೆ ಬಿದ್ದಿತ್ತು. ಆಗ ಅವಧಿಗೂ ಮುನ್ನ ಕಾಫಿಗಿಡಗಳು ಹೂವು ಬಿಟ್ಟಿದ್ದವು. ಪ್ರಸಕ್ತ ವರ್ಷ ವ್ಯತಿರಿಕ್ತ ಸ್ಥಿತಿ ನಿರ್ಮಾಣವಾಗಿದೆ. ಉರಿಬಿಸಿಲು, ಕಾಫಿ ತೋಟದಲ್ಲಿ ಉಪಬೆಳೆಯಾಗಿರುವ ಕಾಳು ಮೆಣಸಿನ ಬಳ್ಳಿಯ ಬೇರುಗಳನ್ನು ಹಾಳುಗೆಡುವ ಜೊತೆಗೆ ಸಿಲ್ವರ್ ಮರಕ್ಕೂ ಇದು ಹಾನಿಕಾರಕ, ಕಾಫಿಗಿಡಗಳಿಗಿಂತ ಹೆಚ್ಚಿನ ತೇವಾಂಶವನ್ನು ಮೆಣಸಿನ ಬಳ್ಳಿಗಳು ಹಿಡಿದಿಟ್ಟುಕೊಂಡಿವೆ. ಹೀಗಾಗಿ ಗೆದ್ದಲು ಹುಳುಗಳ ಕಾಟ ಹೆಚ್ಚಾಗಿದೆ.
ರಾಘವೇಂದ್ರ, ಬೆಳೆಗಾರರು, ಚಿಕ್ಕಮಗಳೂರು







