ಮುಂಬೈ ಇಂಡಿಯನ್ಸ್‌ನ ಮೊದಲ ಪಂದ್ಯಕ್ಕೆ ಮಾಲಿಂಗ ಅಲಭ್ಯ

ಹೊಸದಿಲ್ಲಿ, ಎ.1: ಮುಂಬೈ ಇಂಡಿಯನ್ಸ್‌ನ ಪ್ರಮುಖ ವೇಗದ ಬೌಲರ್ ಲಸಿತ್ ಮಾಲಿಂಗ ಐಪಿಎಲ್‌ನಲ್ಲಿ ರೈಸಿಂಗ್ ಪುಣೆ ಸೂಪರ್ ಜೈಂಟ್ಸ್ ವಿರುದ್ಧದ ಮೊದಲ ಪಂದ್ಯದಲ್ಲಿ ಆಡುವುದಿಲ್ಲ ಎಂದು ಮೂಲಗಳು ತಿಳಿಸಿವೆ.
ಮುಂಬೈ ತಂಡದ ಇನ್ನೋರ್ವ ಆಟಗಾರ, ಮಾಲಿಂಗರ ಸಹ ಆಟಗಾರ ಅಸೆಲಾ ಗುಣರತ್ನೆ ಕೂಡ ಐಪಿಎಲ್‌ನ ಮೊದಲ ಪಂದ್ಯದಲ್ಲಿ ಲಭ್ಯವಿರುವುದಿಲ್ಲ. ಈ ಇಬ್ಬರು ಆಟಗಾರರು ಬಾಂಗ್ಲಾದೇಶ ವಿರುದ್ಧದ ಟ್ವೆಂಟಿ-20 ಸರಣಿಯಲ್ಲಿ ಆಡುತ್ತಿರುವ ಕಾರಣ ಐಪಿಎಲ್‌ನ ಮೊದಲ ಪಂದ್ಯದಿಂದ ಹೊರಗುಳಿಯಲಿದ್ದಾರೆ. ಶ್ರೀಲಂಕಾ-ಬಾಂಗ್ಲಾ ನಡುವಿನ ಟ್ವೆಂಟಿ-20 ಸರಣಿ ಎ.6ರಂದು ಕೊನೆಗೊಳ್ಳಲಿದ್ದು, ಅದೇ ದಿನ ಮುಂಬೈ ತಂಡ ಪುಣೆ ತಂಡವನ್ನು ಎದುರಿಸಲಿದೆ.
ಮಾಲಿಂಗ ಮಂಡಿನೋವಿನಿಂದಾಗಿ ಕಳೆದ ವರ್ಷದ ಐಪಿಎಲ್ ಟೂರ್ನಿಯಲ್ಲಿ ಆಡಿರಲಿಲ್ಲ. ಸುಮಾರು ಒಂದು ವರ್ಷ ಸಕ್ರಿಯ ಕ್ರಿಕೆಟ್‌ನಿಂದ ದೂರ ಉಳಿದಿದ್ದ ಮಾಲಿಂಗ ಈ ವರ್ಷದ ಫೆಬ್ರವರಿಯಲ್ಲಿ ಆಸ್ಟ್ರೇಲಿಯ ವಿರುದ್ಧದ ಟ್ವೆಂಟಿ-20 ಸರಣಿಯಲ್ಲಿ ಶ್ರೀಲಂಕಾ ತಂಡಕ್ಕೆ ವಾಪಸಾಗಿದ್ದರು. 33ರ ಹರೆಯದ ಮಾಲಿಂಗ ಮುಂಬೈನ ಪರ 98 ಪಂದ್ಯಗಳಲ್ಲಿ 143 ವಿಕೆಟ್‌ಗಳನ್ನು ಕಬಳಿಸಿ ಐಪಿಎಲ್ ಪರ ಗರಿಷ್ಠ ವಿಕೆಟ್‌ಗಳನ್ನು ಪಡೆದ ಸಾಧನೆ ಮಾಡಿದ್ದಾರೆ.
31ರ ಹರೆಯದ ಆಲ್‌ರೌಂಡರ್ ಗುಣರತ್ನೆ ಫೆಬ್ರವರಿಯಲ್ಲಿ ನಡೆದ ಐಪಿಎಲ್ ಆಟಗಾರರ ಹರಾಜಿನಲ್ಲಿ ಮುಂಬೈ ತಂಡಕ್ಕೆ ಹರಾಜಾಗಿದ್ದರು. ಶ್ರೀಲಂಕಾದ ಪರ ಸೀಮಿತ ಓವರ್ ಕ್ರಿಕೆಟ್‌ನಲ್ಲಿ ನೀಡಿರುವ ಉತ್ತಮ ಪ್ರದರ್ಶನ ಗುಣರತ್ನೆಗೆ ವರವಾಗಿ ಪರಿಣಮಿಸಿದೆ. 42 ಬ್ಯಾಟಿಂಗ್ ಸರಾಸರಿ ಹೊಂದಿರುವ ಗುಣರತ್ನೆ ಏಳು ಟ್ವೆಂಟಿ-20 ಪಂದ್ಯಗಳನ್ನು ಆಡಿದ್ದು 2 ಅರ್ಧಶತಕ ಬಾರಿಸಿದ್ದಾರೆ.







