ಏಕದಿನ: ಸತತ ಸೋಲಿನಿಂದ ಹೊರಬಂದ ಶ್ರೀಲಂಕಾ
ಬಾಂಗ್ಲಾದೇಶ ವಿರುದ್ಧ ಸರಣಿ ಸಮಬಲ

ಕೊಲಂಬೊ, ಎ.1: ಆಲ್‌ರೌಂಡ್ ಪ್ರದರ್ಶನ ನೀಡಿದ ಆತಿಥೇಯ ಶ್ರೀಲಂಕಾ ತಂಡ ಬಾಂಗ್ಲಾದೇಶ ವಿರುದ್ಧದ ಮೂರನೆ ಏಕದಿನ ಪಂದ್ಯವನ್ನು 70 ರನ್‌ಗಳ ಅಂತರದಿಂದ ಗೆದ್ದುಕೊಂಡಿತು. ಈ ಮೂಲಕ ಮೂರು ಪಂದ್ಯಗಳ ಏಕದಿನ ಸರಣಿಯನ್ನು 1-1 ರಿಂದ ಸಮಬಲಗೊಳಿಸಿದ್ದಲ್ಲದೆ ಸತತ ಏಳು ಪಂದ್ಯಗಳ ಸೋಲಿನಿಂದ ಹೊರಬಂದಿತು.
ಸರಣಿಯ ಮೊದಲ ಪಂದ್ಯವನ್ನು ಬಾಂಗ್ಲಾದೇಶ 90 ರನ್‌ಗಳ ಅಂತರದಿಂದ ಗೆಲುವು ಸಾಧಿಸಿತ್ತು. 2ನೆ ಪಂದ್ಯ ಮಳೆಗಾಹುತಿಯಾಗಿತ್ತು.
ಇಲ್ಲಿನ ಎಸ್‌ಎಸ್‌ಸಿ ಮೈದಾನದಲ್ಲಿ ಶನಿವಾರ ನಡೆದ ಪಂದ್ಯದಲ್ಲಿ ಗೆಲುವಿಗೆ 281 ರನ್ ಕಠಿಣ ಗುರಿ ಪಡೆದಿದ್ದ ಬಾಂಗ್ಲಾದೇಶ ತಂಡ ಶ್ರೀಲಂಕಾದ ಹಿರಿಯ ವೇಗದ ಬೌಲರ್ ನುವಾನ್ ಕುಲಶೇಖರ(4-37), ಸುರಂಗ ಲಕ್ಮಲ್(2-38) ಹಾಗೂ ದಿಲ್‌ರುವಾನ್ ಪೆರೇರ(2-47) ದಾಳಿಗೆ ತತ್ತರಿಸಿ 44.3 ಓವರ್‌ಗಳಲ್ಲಿ 210 ರನ್‌ಗೆ ಆಲೌಟಾಗಿ ಸೋಲೊಪ್ಪಿಕೊಂಡಿತು.
ಬಾಂಗ್ಲಾದೇಶದ ಪರ ಶಾಕಿಬ್ ಅಲ್ ಹಸನ್(54) ಹಾಗೂ ಮೆಹದಿ ಹಸನ್ ಮಿರಾಝ್(51) ಒಂದಷ್ಟು ಪ್ರತಿರೋಧ ಒಡ್ಡಿದರು. ನಿರಂತರವಾಗಿ ವಿಕೆಟ್‌ಗಳನ್ನು ಕಳೆದುಕೊಂಡ ಬಾಂಗ್ಲಾ ಆರಂಭಿಕ ಆಘಾತದಿಂದ ಚೇತರಿಸಿಕೊಳ್ಳಲು ವಿಫಲವಾಯಿತು. ಬಾಂಗ್ಲಾ 11 ರನ್ ಗಳಿಸುವಷ್ಟರಲ್ಲಿ 3 ವಿಕೆಟ್‌ಗಳನ್ನು ಕಳೆದುಕೊಂಡು ಕಳಪೆ ಆರಂಭ ಪಡೆದಿತ್ತು.
ಆಗ 4ನೆ ವಿಕೆಟ್‌ಗೆ 77 ರನ್ ಜೊತೆಯಾಟ ನಡೆಸಿದ ಸೌಮ್ಯ ಸರ್ಕಾರ್(38)ಹಾಗೂ ಶಾಕಿಬ್(54 ರನ್, 62 ಎಸೆತ, 7 ಬೌಂಡರಿ) ತಂಡವನ್ನು ಆಧರಿಸಿದರು. ಇನಿಂಗ್ಸ್ ಅಂತ್ಯದಲ್ಲಿ ಮೆಹದಿ ಹಸನ್(51 ರನ್, 71 ಎಸೆತ, 6 ಬೌಂಡರಿ) ಅಬ್ಬರಿಸಿದರೂ ತಂಡವನ್ನು ಗೆಲುವಿನ ದಡ ಸೇರಿಸಲು ವಿಫಲರಾದರು.
ಶ್ರೀಲಂಕಾ 280/9: ಇದಕ್ಕೆ ಮೊದಲು ಬ್ಯಾಟಿಂಗ್ ಮಾಡಿದ್ದ ಶ್ರೀಲಂಕಾ ತಂಡ ಕುಶಾಲ್ ಮೆಂಡಿಸ್(54 ರನ್, 76 ಎಸೆತ, 4 ಬೌಂಡರಿ) ಹಾಗೂ ತಿಸಾರ ಪೆರೇರ(52 ರನ್, 40 ಎಸೆತ, 4 ಬೌಂಡರಿ, 1 ಸಿಕ್ಸರ್) ಸಿಡಿಸಿದ ಆಕರ್ಷಕ ಅರ್ಧಶತಕದ ಬಲದಿಂದ ನಿಗದಿತ 50 ಓವರ್‌ಗಳಲ್ಲಿ 9 ವಿಕೆಟ್‌ಗಳ ನಷ್ಟಕ್ಕೆ 280 ರನ್ ಗಳಿಸಿತು.
ಗುಣತಿಲಕ(34) ಹಾಗೂ ನಾಯಕ ಉಪುಲ್ ತರಂಗ(35) ಮೊದಲ ವಿಕೆಟ್‌ನಲ್ಲಿ 76 ರನ್ ಜೊತೆಯಾಟ ನಡೆಸಿ ತಂಡಕ್ಕೆ ಉತ್ತಮ ಆರಂಭವನ್ನು ಒದಗಿಸಿದ್ದರು. ಗುಣರತ್ನೆ(34), ದಿನೇಶ್ ಚಾಂಡಿಮಲ್(21)ಎರಡಂಕೆಯ ಸ್ಕೋರ್ ದಾಖಲಿಸಿದರು. ಬಾಂಗ್ಲಾದೇಶದ ಪರ ಮಶ್ರಾಫೆ ಮೊರ್ತಝಾ(3-65), ಮುಸ್ತಫಿಝರ್ರಹ್ಮಾನ್(2-55) ತಮ್ಮಾಳಗೆ 5 ವಿಕೆಟ್‌ಗಳನ್ನು ಹಂಚಿಕೊಂಡರು.
ಸಂಕ್ಷಿಪ್ತ ಸ್ಕೋರ್
ಶ್ರೀಲಂಕಾ: 50 ಓವರ್‌ಗಳಲ್ಲಿ 280/9
(ಕುಶಾಲ್ ಮೆಂಡಿಸ್ 54, ಪೆರೇರ 52, ತರಂಗ 35, ಗುಣತಿಲಕ 34, ಗುಣರತ್ನೆ 34, ಮೊರ್ತಝಾ 3-65, ಮುಸ್ತಫಿಝುರ್ರಹ್ಮಾನ್ 2-55)
ಬಾಂಗ್ಲಾದೇಶ: 44.3 ಓವರ್‌ಗಳಲ್ಲಿ 210 ರನ್‌ಗೆ ಆಲೌಟ್
(ಶಾಕಿಬ್ ಅಲ್ ಹಸನ್ 54, ಮೆಹೆದಿ ಹಸನ್ ಮಿರಾಝ್ 51, ಸೌಮ್ಯ ಸರ್ಕಾರ್ 38, ಕುಲಶೇಖರ 4-37, ಲಕ್ಮಲ್ 2-38, ಪೆರೇರ 2-47)
ಪಂದ್ಯಶ್ರೇಷ್ಠ: ತಿಸಾರ ಪೆರೇರ
ಸರಣಿಶ್ರೇಷ್ಠ: ಕುಶಾಲ್ ಮೆಂಡಿಸ್.







