ಐಪಿಎಲ್: ತಂಡಗಳಿಗೆ ಕಾಡುತ್ತಿದೆ ಗಾಯಾಳು ಆಟಗಾರರ ಸಮಸ್ಯೆ

ಹೊಸದಿಲ್ಲಿ, ಎ.1: ಹತ್ತನೆ ಆವೃತ್ತಿಯ ಐಪಿಎಲ್ ಆರಂಭಕ್ಕೆ ದಿನಗಣನೆ ಆರಂಭವಾಗಿರುವಂತೆಯೇ ಹಲವು ಐಪಿಎಲ್ ತಂಡಗಳ ಆಟಗಾರರ ಗಾಯಾಳು ಪಟ್ಟಿಯು ದಿನೇ ದಿನೇ ಬೆಳೆಯುತ್ತಿದೆ. ಭಾರತದ ಆಫ್-ಸ್ಪಿನ್ನರ್ ಆರ್. ಅಶ್ವಿನ್ ಹಾಗೂ ಅಗ್ರ ಕ್ರಮಾಂಕದ ಬ್ಯಾಟ್ಸ್‌ಮನ್ ಕೆ.ಎಲ್. ರಾಹುಲ್ ಗಾಯದ ಸಮಸ್ಯೆಯಿಂದಾಗಿ ಕ್ರಮವಾಗಿ ಪುಣೆ ಹಾಗೂ ಬೆಂಗಳೂರು ತಂಡದಲ್ಲಿ ಅಲಭ್ಯರಾಗಿದ್ದಾರೆ.
ಈಗಾಗಲೇ ಆಸ್ಟ್ರೇಲಿಯದ ಆಲ್‌ರೌಂಡರ್ ಮಿಚೆಲ್ ಮಾರ್ಷ್ ಸೇವೆಯಿಂದ ವಂಚಿತರಾಗಿದ್ದ ಪುಣೆಗೆ ಅಶ್ವಿನ್ ಅಲಭ್ಯತೆಯು ಭಾರೀ ಹಿನ್ನಡೆಯಾಗಿ ಪರಿಣಮಿಸಿತ್ತು. ಅಶ್ವಿನ್ ಕಳೆದ ವರ್ಷದ ಐಪಿಎಲ್‌ನಲ್ಲಿ 14 ಪಂದ್ಯಗಳಲ್ಲಿ ಒಟ್ಟು 10 ವಿಕೆಟ್‌ಗಳನ್ನು ಕಬಳಿಸಿದ್ದರು.
ಕಳೆದ ವರ್ಷ ರನ್ನರ್-ಅಪ್ ಪ್ರಶಸ್ತಿ ಪಡೆದಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಈ ವರ್ಷ ಪ್ರಮುಖ ಆಟಗಾರ ರಾಹುಲ್ ಅನುಪಸ್ಥಿತಿಯಲ್ಲಿ ಕಣಕ್ಕಿಳಿಯಲಿದೆ. ವಿಕೆಟ್‌ಕೀಪರ್-ಬ್ಯಾಟ್ಸ್‌ಮನ್ ರಾಹುಲ್ ಕಳೆದ ವರ್ಷ 397ರನ್ ಗಳಿಸಿದ್ದರು. 24ರ ಹರೆಯದ ರಾಹುಲ್ ಬಲಭುಜದ ಶಸ್ತ್ರಚಿಕಿತ್ಸೆಗಾಗಿ ಮುಂದಿನ ವಾರ ಲಂಡನ್‌ಗೆ ತೆರಳಲಿದ್ದಾರೆ.
ಆರ್‌ಸಿಬಿ ನಾಯಕ ವಿರಾಟ್ ಕೊಹ್ಲಿ ಭುಜನೋವಿನಿಂದ ಚೇತರಿಸಿಕೊಳ್ಳುತ್ತಿದ್ದು ಐಪಿಎಲ್‌ನ ಮೊದಲ 10 ದಿನ ದೂರ ಉಳಿಯುವ ಸಾಧ್ಯತೆಯಿದೆ.
ಮುರಳಿ ವಿಜಯ್ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡಕ್ಕೆ ಚಿಂತೆಯಾಗಿ ಕಾಡುತ್ತಿದ್ದಾರೆ. ಮಣಿಗಂಟು ಗಾಯದಿಂದ ಬಳಲುತ್ತಿರುವ ಮುರಳಿ 10ನೆ ಆವೃತ್ತಿಯ ಐಪಿಎಲ್‌ನಿಂದ ದೂರ ಉಳಿಯುವ ಸಾಧ್ಯತೆಯಿದೆ ಎನ್ನಲಾಗಿದೆ.
ಡೆಲ್ಲಿ ಡೇರ್ ಡೆವಿಲ್ಸ್ ತಂಡದ ನಾಯಕ ಜೆಪಿ ಡುಮಿನಿ ವೈಯಕ್ತಿಕ ಕಾರಣದಿಂದ ಈ ವರ್ಷದ ಐಪಿಎಲ್‌ನಿಂದ ಹೊರಗುಳಿಯುವುದಾಗಿ ಈಗಾಗಲೇ ಘೋಷಿಸಿದ್ದಾರೆ. ಇತ್ತೀಚೆಗೆ ನ್ಯೂಝಿಲೆಂಡ್ ವಿರುದ್ಧ ಸರಣಿಯ ವೇಳೆ ಬೆರಳು ಗಾಯಕ್ಕೆ ತುತ್ತಾಗಿದ್ದ ಕ್ವಿಂಟನ್ ಡಿಕಾಕ್ ಐಪಿಎಲ್ ಟೂರ್ನಿಯಿಂದ ಹೊರಗುಳಿಯಲು ಬಯಸಿದ್ದಾರೆ.
ರವೀಂದ್ರ ಜಡೇಜ ಹಾಗೂ ಉಮೇಶ್ ಯಾದವ್‌ಗೆ ಬಿಸಿಸಿಐ ವೈದ್ಯಕೀಯ ತಂಡ ಐಪಿಎಲ್‌ನ ಮೊದಲೆರಡು ವಾರ ವಿಶ್ರಾಂತಿ ಪಡೆಯುವಂತೆ ಸಲಹೆ ನೀಡಿದೆ. ಎರಡು ಬಾರಿಯ ಚಾಂಪಿಯನ್ ಕೋಲ್ಕತಾ ನೈಟ್ ರೈಡರ್ಸ್ ತಂಡದ ಪ್ರಮುಖ ಆಟಗಾರನಾಗಿರುವ ಯಾದವ್ ಈ ಋತುವಿನಲ್ಲಿ ಭಾರತದ ಪರ 12 ಟೆಸ್ಟ್ ಪಂದ್ಯಗಳನ್ನು ಆಡಿದ್ದು, ಸಾಕಷ್ಟು ಓವರ್‌ಗಳ ಬೌಲಿಂಗ್ ಮಾಡಿದ್ದರು.
ಗುಜರಾತ್ ಲಯನ್ಸ್ ತಂಡವನ್ನು ಪ್ರತಿನಿಧಿಸುತ್ತಿರುವ ಜಡೇಜ ಈ ಋತುವಿನ ಟೆಸ್ಟ್‌ನಲ್ಲಿ 500ಕ್ಕೂ ಅಧಿಕ ರನ್ ಹಾಗೂ 71 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಈಗಾಗಲೇ ಸಾಕಷ್ಟು ಕ್ರಿಕೆಟ್ ಆಡಿ ದಣಿದಿರುವ ಜಡೇಜ-ಯಾದವ್‌ಗೆ ಬಿಸಿಸಿಐ ಸ್ವಲ್ಪ ಸಮಯ ವಿಶ್ರಾಂತಿ ಪಡೆಯಲು ಸಲಹೆ ನೀಡಿದೆ.







