ಮಗಳ ಅನಾರೋಗ್ಯ: ರೈನಾ ಸ್ಪರ್ಧಾತ್ಮಕ ಕ್ರಿಕೆಟ್‌ನಿಂದ ದೂರ

ಹೊಸದಿಲ್ಲಿ, ಎ.1: ಆಲ್‌ರೌಂಡರ್ ಸುರೇಶ್ ರೈನಾ ಕಳೆದ ಕೆಲವು ತಿಂಗಳಿನಿಂದ ಸ್ಪರ್ಧಾತ್ಮಕ ಕ್ರಿಕೆಟ್‌ನಿಂದ ದೂರವಾಗಿದ್ದಾರೆ. ಕ್ರಿಕೆಟ್‌ನಲ್ಲಿ ಆಸಕ್ತಿ ಕಳೆದುಕೊಳ್ಳಲು ಮಗಳ ಅನಾರೋಗ್ಯವೇ ಕಾರಣ ಎಂದು ರೈನಾ ಸ್ಪಷ್ಟನೆ ನೀಡಿದ್ದಾರೆ.
30ರ ಹರೆಯದ ರೈನಾ ಆಂಗ್ಲ ಪತ್ರಿಕೆಯೊಂದಕ್ಕೆ ನೀಡಿರುವ ಹೇಳಿಕೆಯಲ್ಲಿ ತನ್ನ ಕ್ರಿಕೆಟ್ ವೈಫಲ್ಯದ ಗುಟ್ಟನ್ನು ಹೊರಗೆಡವಿದ್ದಾರೆ.
‘‘ನಾನು ಸ್ಪರ್ಧಾತ್ಮಕ ಕ್ರಿಕೆಟ್‌ನಲ್ಲಿ ಕಾಣಿಸಿಕೊಳ್ಳದಿರುವ ವಿಚಾರದಲ್ಲಿ ಜನರು ನಾನಾ ರೀತಿಯಲ್ಲಿ ಮಾತನಾಡಿಕೊಳ್ಳುತ್ತಿದ್ದಾರೆ. ಆದರೆ ನನ್ನ ಸಮಸ್ಯೆ ಏನೆಂದು ಯಾರಿಗೂ ಗೊತ್ತಿಲ್ಲ. ಮಗಳು ಅನಾರೋಗ್ಯದಿಂದ ಬಳಲುತ್ತಿದ್ದಾಳೆ ಇದರಿಂದಾಗಿ ನನಗೆ ಆಗಾಗ ಆಸ್ಪತ್ರೆಗೆ ಕರೆದುಕೊಂಡು ಹೋಗಬೇಕಾಗುತ್ತದೆ. ಇದರ ಜೊತೆಗೆ ಮನೆಯಲ್ಲಿಯೂ ಕೆಲಸವಿದೆ. ಈ ಕಾರಣದಿಂದಾಗಿ ಜನರು ಏನು ಹೇಳುತ್ತಿದ್ದಾರೆ ಎಂದು ಕೇಳಲು ನನಗೆ ಕಾಲಾವಕಾಶ ಸಿಕ್ಕಿರಲಿಲ್ಲ’’ ಎಂದು ರೈನಾ ಹೇಳಿದ್ದಾರೆ.
ಕಳೆದ ಫೆಬ್ರವರಿಯಿಂದ ರೈನಾ ಸ್ಪರ್ಧಾತ್ಮಕ ಕ್ರಿಕೆಟ್‌ನಲ್ಲಿ ಕಾಣಿಸಿಕೊಂಡಿಲ್ಲ. ರೈನಾ ಕ್ರಿಕೆಟ್‌ನಲ್ಲಿ ಆಸಕ್ತಿ ಕಳೆದುಕೊಂಡಿರುವ ಹಿನ್ನೆಲೆಯಲ್ಲಿ ಬಿಸಿಸಿಐ ಅವರನ್ನು ವಾರ್ಷಿಕ ಒಪ್ಪಂದದ ಪಟ್ಟಿಯಿಂದ ಕೈ ಬಿಟ್ಟಿತ್ತು.
ಸುರೇಶ್ ರೈನಾ ‘‘ಆಸಕ್ತಿಯಿಲ್ಲದ ಕ್ರಿಕೆಟಿಗ ’’ಎಂದು ಅವರ ಉತ್ತರ ಪ್ರದೇಶ ಕ್ರಿಕೆಟ್ ತಂಡದ ಕೋಚ್ ಬಣ್ಣಿಸಿದ್ದರು. ಆದರೆ ರೈನಾ ಅವರು ಕೋಚ್ ಹೇಳಿಕೆಯನ್ನು ನಿರಾಕರಿಸಿದ್ದಾರೆ.
‘‘ ನನ್ನ ಮಗಳ ಆರೋಗ್ಯದ ಕಡೆಗೆ ನಿಗಾ ವಹಿಸಲು ಮತ್ತು ಮನೆಯ ಕೆಲಸಗಳಿಗಾಗಿ ರಣಜಿ ಟ್ರೋಫಿ ಟೂರ್ನಿಯ ಕೆಲವು ಪಂದ್ಯಗಳಲ್ಲಿ ಆಡಿರಲಿಲ್ಲ. ದುಲೀಪ್ ಟ್ರೋಫಿ ಕ್ರಿಕೆಟ್‌ನಿಂದಲೂ ದೂರ ಉಳಿದಿದ್ದೆ. ನನ್ನ ಆರೋಗ್ಯವೂ ಚೆನ್ನಾಗಿರಲಿಲ್ಲ. ಇದೀಗ ಚೇತರಿಸಿಕೊಳ್ಳ್ಳುತ್ತಿದ್ದೇನೆ. ನನ್ನ ಸಮಸ್ಯೆಯನ್ನು ಅರ್ಥ ಮಾಡಿಕೊಳ್ಳದೆ ನನ್ನನ್ನು ಟೀಕಿಸಿದರೆ ನನಗೇನು ಮಾಡಲು ಸಾಧ್ಯವಿಲ್ಲ ’’ ಎಂದು ರೈನಾ ಹೇಳಿದ್ದಾರೆ.
‘‘ಕೆಲವು ಸಮಯಗಳಿಂದ ಅನಾರೋಗ್ಯದ ಹಿನ್ನೆಲೆಯಲ್ಲಿ ನನಗೆ ಅಭ್ಯಾಸ ನಡೆಸಲು ಸಾಧ್ಯವಾಗಲಿಲ್ಲ. ಇದೀಗ ಚೇತರಿಸಿಕೊಂಡು ಕ್ರಿಕೆಟ್‌ನ ಆಭ್ಯಾಸ ನಡೆಸುತ್ತಿದ್ದೇನೆ ’’ ಎಂದು ಮಾಹಿತಿ ನೀಡಿದ್ದಾರೆ.
‘‘ ಬಿಸಿಸಿಐನ ಒಪ್ಪಂದದಲ್ಲಿ ಸೇರಿಕೊಳ್ಳಲು ಆರು ತಿಂಗಳಿನಿಂದ ಕ್ರಿಕೆಟ್ ಪಂದ್ಯಗಳಲ್ಲಿ ಆಡಿರಬೇಕು. ಆಡಿದ್ದರೆ ಕನಿಷ್ಠ ‘ಸಿ ’ ಗ್ರೂಪ್‌ನಲ್ಲಿ ಅವಕಾಶ ಪಡೆಯಲು ಅವಕಾಶ ಇದೆ.ಆದರೆ ನಾನು ಆರು ತಿಂಗಳಲ್ಲಿ ಒಂದು ಪಂದ್ಯದಲ್ಲಿ ಆಡಿದ್ದೆ ’’ಎಂದು ರೈನಾ ಅಭಿಪ್ರಾಯಪಟ್ಟಿದ್ದಾರೆ.
ಸುರೇಶ್ ರೈನಾ ಐಪಿಎಲ್‌ನಲ್ಲಿ ಗುಜರಾತ್ ಲಯನ್ಸ್ ತಂಡದ ನಾಯಕರಾಗಿದ್ದಾರೆ. ಐಪಿಎಲ್‌ನಲ್ಲಿ ಗರಿಷ್ಠ ಸ್ಕೋರ್ ದಾಖಲಿಸಿರುವ ಆಟಗಾರರ ಪೈಕಿ ಎರಡನೆ ಸ್ಥಾನದಲ್ಲಿರುವ ರೈನಾಗೆ ತನ್ನ ಸಾಮರ್ಥ್ಯವನ್ನು ಸಾಬೀತುಪಡಿಸಲು ಮುಂಬರುವ ಐಪಿಎಲ್ ಟೂರ್ನಿಯಲ್ಲಿ ಉತ್ತಮ ಅವಕಾಶ ದೊರೆಯಲಿದೆ .
ರೈನಾ 2015, ಅಕ್ಟೋಬರ್‌ನಿಂದ ಟೀಮ್ ಇಂಡಿಯಾದ ಏಕದಿನ ತಂಡದಲ್ಲಿ ಆಡಿಲ್ಲ. 2015 ಜನವರಿಯಿಂದ ಟೆಸ್ಟ್ ತಂಡದಲ್ಲೂ ಸ್ಥಾನ ಪಡೆದಿರಲಿಲ್ಲ.ಉತ್ತರ ಪ್ರದೇಶ ತಂಡದ ಪರ ರಣಜಿ ಟ್ರೋಫಿಯ ಕೆಲವು ಪಂದ್ಯಗಳಲ್ಲಿ ಆಡಿದ್ದರು.
ಇಂಗ್ಲೆಂಡ್ ವಿರುದ್ಧದ ಟ್ವೆಂಟಿ -20ಯ ಮೂರು ಪಂದ್ಯಗಳಲ್ಲಿ ಆಡಿದ್ದರೂ, ಕ್ರಮವಾಗಿ 34, 7 ಮತ್ತು 63 ರನ್ ಗಳಿಸಿದ್ದರು





