ಮಿಯಾಮಿ ಓಪನ್: ಫೆಡರರ್, ನಡಾಲ್ ಪ್ರಶಸ್ತಿ ಸುತ್ತಿಗೆ ಲಗ್ಗೆ

ಮಿಯಾಮಿ, ಎ.1: ಆಸ್ಟ್ರೇಲಿಯದ ನಿಕ್ ಕಿರ್ಗಿಯೊಸ್‌ರನ್ನು ಮಣಿಸಿದ ಸ್ವಿಸ್‌ನ ಹಿರಿಯ ಆಟಗಾರ ರೋಜರ್ ಫೆಡರರ್ ಮಿಯಾಮಿ ಓಪನ್‌ನ ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಫೈನಲ್ ತಲುಪಿದ್ದಾರೆ.
ಇಲ್ಲಿ ಶುಕ್ರವಾರ ನಡೆದ ಸೆಮಿಫೈನಲ್ ಪಂದ್ಯದಲ್ಲಿ ಕಿರ್ಗಿಯೊಸ್ ವಿರುದ್ಧ 7-6(11/9), 6-7(9/11), 7-6(7/5) ಸೆಟ್‌ಗಳ ಅಂತರದಿಂದ ಜಯ ಸಾಧಿಸಿದ ಫೆಡರರ್ ಪ್ರಶಸ್ತಿ ಸುತ್ತಿಗೆ ತೇರ್ಗಡೆಯಾದರು. ಫೈನಲ್‌ನಲ್ಲಿ ಸ್ಪೇನ್‌ನ ರಫೆಲ್ ನಡಾಲ್‌ರನ್ನು ಎದುರಿಸಲಿದ್ದಾರೆ.
ಫೆಡರರ್ ಮೂರನೆ ಟೈ-ಬ್ರೇಕ್‌ನಲ್ಲಿ ಜಯ ಸಾಧಿಸಿದಾಗ ಕಿರ್ಗಿಯೊಸ್ ತನ್ನ ರಾಕೆಟ್‌ನ್ನು ನೆಲಕ್ಕೆ ಬಡಿದು ಹತಾಶೆ ವ್ಯಕ್ತಪಡಿಸಿದರು.
ಮತ್ತೊಂದು ಸೆಮಿ ಫೈನಲ್‌ನಲ್ಲಿ ನಡಾಲ್ ಅವರು ಇಟಲಿಯ ಫ್ಯಾಬಿಯೊ ಫೊಗ್ನಿನಿ ಅವರನ್ನು 6-1, 7-5 ಸೆಟ್‌ಗಳ ಅಂತರದಿಂದ ಮಣಿಸಿದ್ದಾರೆ.
ಶ್ರೇಯಾಂಕರಹಿತ ಫೋಗ್ನಿನಿ ಮೊದಲ ಸೆಟ್‌ನಲ್ಲಿ ಪರದಾಟ ನಡೆಸಿದ್ದು, ಐದನೆ ಶ್ರೇಯಾಂಕದ ನಡಾಲ್ ಸಂಪೂರ್ಣ ಪ್ರಾಬಲ್ಯ ಸಾಧಿಸಿದರು. ಮೊದಲ ಸೆಟ್‌ನಲ್ಲಿ ಮಣಿಗಂಟು ನೋವಿನ ಸಮಸ್ಯೆ ಎದುರಿಸಿದ್ದ ಇಟಲಿ ಆಟಗಾರ ಫೋಗ್ನಿನಿ ಎರಡನೆ ಸೆಟ್‌ನಲ್ಲಿ ಒಂದಷ್ಟು ಹೋರಾಟ ನೀಡಿದರು.
ಫೋಗ್ನಿನಿ ಅವರನ್ನು ಮಣಿಸಿ ಮಿಯಾಮಿ ಓಪನ್‌ನಲ್ಲಿ ಐದನೆ ಬಾರಿ ಫೈನಲ್‌ಗೆ ತಲುಪಿದ ನಡಾಲ್ ಮಾಸ್ಟರ್ ಸಿರೀಸ್‌ನಲ್ಲಿ ಚೊಚ್ಚಲ ಪ್ರಶಸ್ತಿ ಜಯಿಸುವ ವಿಶ್ವಾಸದಲ್ಲಿದ್ದಾರೆ.
ಫೆಡರರ್ ಹಾಗೂ ನಡಾಲ್ ಜನವರಿಯಲ್ಲಿ ನಡೆದಿದ್ದ ಆಸ್ಟ್ರೇಲಿಯನ್ ಓಪನ್ ಫೈನಲ್‌ನಲ್ಲಿ ಮುಖಾಮುಖಿಯಾಗಿದ್ದು, ಆ ಪಂದ್ಯದಲ್ಲಿ ನಡಾಲ್‌ರನ್ನು ರೋಚಕವಾಗಿ ಮಣಿಸಿದ ಫೆಡರರ್ 18ನೆ ಬಾರಿ ಗ್ರಾನ್‌ಸ್ಲಾಮ್ ಪ್ರಶಸ್ತಿಯನ್ನು ಜಯಿಸಿದ್ದರು.
ಇಂಡಿಯನ್ ವೆಲ್ಸ್ ಟೂರ್ನಿಯ ನಾಲ್ಕನೆ ಸುತ್ತಿನಲ್ಲಿ ನಡಾಲ್‌ರನ್ನು ಎದುರಿಸಿದ್ದ ಫೆಡರರ್ ನೇರ ಸೆಟ್‌ಗಳಿಂದ ಸೋಲಿಸಿದ್ದರು.
ಸಾನಿಯಾ-ಸ್ಟ್ರೈಕೊವಾ ಫೈನಲ್‌ಗೆ ಲಗ್ಗೆ
ಮಿಯಾಮಿ, ಎ.1: ಮೂರನೆ ಶ್ರೇಯಾಂಕದ ಸಾನಿಯಾ ಮಿರ್ಝಾ ಹಾಗೂ ಬಾರ್ಬೊರ ಸ್ಟ್ರೈಕೊವಾ ಮಿಯಾಮಿ ಓಪನ್‌ನ ಮಹಿಳೆಯರ ಡಬಲ್ಸ್ ವಿಭಾಗದಲ್ಲಿ ಫೈನಲ್‌ಗೆ ಲಗ್ಗೆ ಇಟ್ಟಿದ್ದಾರೆ.
ಇಲ್ಲಿ ಶುಕ್ರವಾರ ನಡೆದ ಸೆಮಿಫೈನಲ್‌ನಲ್ಲಿ ಸಾನಿಯಾ-ಸ್ಟ್ರೈಕೊವಾ ಜೋಡಿ ಮಾರ್ಟಿನಾ ಹಿಂಗಿಸ್ ಹಾಗೂ ಚಾನ್ ಯಂಗ್-ಜಾನ್‌ರನ್ನು 6-7, 6-1, 10-4 ಸೆಟ್‌ಗಳ ಅಂತರದಿಂದ ಮಣಿಸಿದರು.
ಸಾನಿಯಾ-ಸ್ಟ್ರೈಕೊವಾ ಮುಂದಿನ ಸುತ್ತಿನಲ್ಲಿ ಶ್ರೇಯಾಂಕರಹಿತ ಗಾಬ್ರೆಲಾ ದಾಬ್ರೊವ್‌ಸ್ಕಿ ಹಾಗೂ ಕ್ಸೂ ಯಿಫಾನ್‌ರನ್ನು ಎದುರಿಸಲಿದ್ದಾರೆ.
ಜನವರಿಯಲ್ಲಿ ನಡೆದಿದ್ದ ಸಿಡ್ನಿ ಇಂಟರ್‌ನ್ಯಾಶನಲ್ ಟೂರ್ನಿಯಲ್ಲಿ ರನ್ನರ್-ಅಪ್ ಪ್ರಶಸ್ತಿ ಗೆದ್ದುಕೊಂಡಿದ್ದ ಸಾನಿಯಾ-ಸ್ಟ್ರೈಕೋವಾ ಈ ವರ್ಷ ಎರಡನೆ ಬಾರಿ ಫೈನಲ್‌ಗೆ ತಲುಪಿದ್ದಾರೆ. ಅಮೆರಿಕದ ಬೆಥಾನಿ ಮ್ಯಾಟೆಕ್-ಸ್ಯಾಂಡ್ಸ್‌ರೊಂದಿಗೆ ಬ್ರಿಸ್ಬೇನ್ ಇಂಟರ್‌ನ್ಯಾಶನಲ್ ಪ್ರಶಸ್ತಿಯನ್ನು ಗೆದ್ದುಕೊಂಡಿರುವ ಸಾನಿಯಾ ಈ ವರ್ಷ ಎರಡನೆ ಪ್ರಶಸ್ತಿಯ ಮೇಲೆ ಕಣ್ಣಿಟ್ಟಿದ್ದಾರೆ.
ಒಂದೂವರೆ ಗಂಟೆಯಲ್ಲಿ ಕೊನೆಗೊಂಡ ಸೆಮಿ ಫೈನಲ್ ಪಂದ್ಯದಲ್ಲಿ ಇಂಡೋ-ಝೆಕ್ ಜೋಡಿ ಮೊದಲ ಸೆಟ್‌ನಲ್ಲಿ ಏಕಾಗ್ರತೆ ಕಾಯ್ದುಕೊಳ್ಳಲು ವಿಫಲವಾಗಿ 6-7 ಅಂತರದಿಂದ ಸೋತಿತ್ತು. ಎರಡನೆ ಸೆಟ್‌ನಲ್ಲಿ ಆರಂಭದಲ್ಲೇ 4-0 ಮುನ್ನಡೆ ಸಾಧಿಸಿದ ಸಾನಿಯಾ ಜೋಡಿ 6-1 ರಿಂದ ಸುಲಭವಾಗಿ ಗೆದ್ದುಕೊಂಡಿತು. ಮೂರನೆ ಸೆಟ್‌ನಲ್ಲೂ ಉತ್ತಮ ಪ್ರದರ್ಶನ ಮುಂದುವರಿಸಿದ ಸಾನಿಯಾ-ಸ್ಟ್ರೈಕೊವಾ 10-4 ಅಂತರದಿಂದ ಗೆಲುವು ಸಾಧಿಸಿದ್ದಾರೆ.







