ಲಿಯೊನ್ ಚಾಲೆಂಜರ್: ಪ್ರಶಸ್ತಿ ಗೆಲ್ಲುವತ್ತ ಪೇಸ್

ಲಿಯೊನ್(ಮೆಕ್ಸಿಕೊ), ಎ.1: ಭಾರತದ ಡೇವಿಸ್‌ಕಪ್ ತಂಡದಲ್ಲಿ ಮೀಸಲು ಆಟಗಾರನಾಗಿ ನೇಮಕಗೊಂಡಿರುವ ಲಿಯಾಂಡರ್ ಪೇಸ್ ಕೆನಡಾದ ಜೊತೆಗಾರ ಆದಿಲ್ ಶಂಸುದ್ದೀನ್ ಜೊತೆಗೂಡಿ ಲಿಯೊನ್ ಚಾಲೆಂಜರ್ ಟೂರ್ನಿಯಲ್ಲಿ ಫೈನಲ್‌ಗೆ ತಲುಪಿದ್ದು, ಈ ವರ್ಷ ಮೊದಲ ಪ್ರಶಸ್ತಿ ಗೆಲ್ಲುವತ್ತ ಚಿತ್ತವಿರಿಸಿದ್ದಾರೆ.
75,000 ಡಾಲರ್ ಬಹುಮಾನ ಮೊತ್ತದ ಟೂರ್ನಿಯ ಸೆಮಿ ಫೈನಲ್‌ನಲ್ಲಿ ಮೂರನೆ ಶ್ರೇಯಾಂಕದ ಪೇಸ್-ಸಂಶುದ್ದೀನ್ ಜೋಡಿ ಆಸ್ಟ್ರೇಲಿಯದ ಲೂಕ್ ಸವಿಲ್ಲೆ ಹಾಗೂ ಜಾನ್-ಪ್ಯಾಟ್ರಿಕ್ ಸ್ಮಿತ್‌ರನ್ನು 6-7(1), 6-4, 10-5 ಸೆಟ್‌ಗಳ ಅಂತರದಿಂದ ಮಣಿಸಿತು.
ಪೇಸ್-ಸಂಶುದ್ದೀನ್ ಮುಂದಿನ ಸುತ್ತಿನಲ್ಲಿ ಸ್ವಿಟ್ಜರ್‌ಲೆಂಡ್‌ನ ಲೂಕಾ ಮಾರ್ಗರೊಲಿ ಹಾಗೂ ಬ್ರೆಝಿಲ್‌ನ ಕ್ಯಾರೊ ಝಾಂಪಿಯೆರಿ ಅವರನ್ನು ಎದುರಿಸಲಿದ್ದಾರೆ.
ಪೇಸ್ ಈ ಋತುವಿನಲ್ಲಿ ಮೊದಲ ಬಾರಿ ಫೈನಲ್‌ಗೆ ತಲುಪಿದ್ದಾರೆ. ಪೇಸ್ ದುಬೈ ಚಾಂಪಿಯನ್‌ಶಿಪ್ ಹಾಗೂ ಡೆಲ್‌ರೆ ಬೀಚ್ ಓಪನ್‌ನಲ್ಲಿ ಸೆಮಿ ಫೈನಲ್‌ಗೆ ತಲುಪಿದ್ದರು.
ಪೇಸ್ 2015ರ ಎಟಿಪಿ ವರ್ಲ್ಡ್ ಟೂರ್‌ನಲ್ಲಿ ಕೊನೆಯ ಬಾರಿ ಪ್ರಶಸ್ತಿ ಜಯಿಸಿದ್ದರು. ಪೇಸ್ 2013ರಲ್ಲಿ ರಾಡೆಕ್ ಸ್ಟೆಪ್ನೆಕ್ ಜೊತೆಗೂಡಿ ಯುಎಸ್ ಓಪನ್‌ನ ಪುರುಷರ ಡಬಲ್ಸ್‌ನಲ್ಲಿ ಕೊನೆಯ ಬಾರಿ ಗ್ರಾನ್‌ಸ್ಲಾಮ್ ಪ್ರಶಸ್ತಿಯನ್ನು ಗೆದ್ದುಕೊಂಡಿದ್ದರು. ಪೇಸ್ ಮಿಶ್ರ ಡಬಲ್ಸ್ ವಿಭಾಗದಲ್ಲಿ ಮಾರ್ಟಿನಾ ಹಿಂಗಿಸ್ ಜೊತೆಗೂಡಿ 3 ಗ್ರಾನ್‌ಸ್ಲಾಮ್ ಪ್ರಶಸ್ತಿಯನ್ನು ಜಯಿಸಿದ್ದರು. 2015ರಲ್ಲಿ ಎರಡು ಹಾಗೂ 2016ರಲ್ಲಿ ಒಂದು ಪ್ರಶಸ್ತಿಯನ್ನು ಜಯಿಸಿದ್ದರು.







