‘ ಹಳ್ಳಿಗೊಬ್ಬ ಪೊಲೀಸ್’ ಬೀಟ್ ವ್ಯವಸ್ಥೆಗೆ ಚಾಲನೆ

ಬಂಟ್ವಾಳ, ಎ.1: ರಾಜ್ಯ ಪೊಲೀಸ್ ಇಲಾಖೆ ನೂತನವಾಗಿ ಜಾರಿಗೆ ತಂದಿರುವ ಹಳ್ಳಿಗೊಬ್ಬ ಪೊಲೀಸ್ ಕಾರ್ಯಕ್ರಮದ ಬೀಟ್ ವ್ಯವಸ್ಥೆಯನ್ನು ದ.ಕ. ಜಿಲ್ಲೆಯಲ್ಲಿ ಪ್ರಥಮವಾಗಿ ಬಂಟ್ವಾಳ ಪುರಸಭಾ ವ್ಯಾಪ್ತಿಯ ಪಾಣೆಮಂಗಳೂರಿನ ಗೂಡಿನಬಳಿಯಲ್ಲಿರುವ ರೋಟರಿ ಬಾಲಭವನದಲ್ಲಿ ದ.ಕ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಭೂಷಣ್ ಜಿ. ಬೊರಸೆ ಶನಿವಾರ ರಾತ್ರಿ ಚಾಲನೆ ನೀಡಿದರು.
ಬಳಿಕ ಮಾತನಾಡಿದ ಅವರು, ಈ ಬೀಟ್ ವ್ಯವಸ್ಥೆಗೆ ಗ್ರಾಮದ ಎಲ್ಲ ಧರ್ಮದ ಮುಖಂಡರನ್ನು, ಶೇ.30ರಷ್ಟು ಮಹಿಳೆಯರನ್ನು ಸೇರಿಸಿಕೊಂಡು 50 ಮಂದಿಯ ತಂಡವನ್ನು ರಚಿಸಲಾಗುತ್ತಿದ್ದು ಅದಕ್ಕೆ ಓರ್ವ ಪೊಲೀಸ್ ಕಾನ್‌ಸ್ಟೇಬಲ್‌ನನ್ನು ಮುಖ್ಯಸ್ಥರನ್ನಾಗಿ ನಿಯುಕ್ತಿಗೊಳಿಸಲಾಗುತ್ತಿದೆ. ಅವರು ತಿಂಗಳ ಮೊದಲ ಮತ್ತು ಮೂರನೆ ವಾರದಂದು ತಮ್ಮ ಹಳ್ಳಿಗೆ ಆಗಮಿಸಿ ಅಲ್ಲೇ ವಾಸ್ತವ್ಯ ಹೂಡಿ ಸಮಸ್ಯೆಗಳನ್ನು ಆಲಿಸಲಿದ್ದಾರೆ. ಬಳಿಕ ಪೊಲೀಸ್ ಇಲಾಖೆಗೆ ಸಂಬಂಧಿಸಿದ ಸಮಸ್ಯೆಗಳನ್ನು ನಮ್ಮ ಗಮನಕ್ಕೆ ತರಲಿದ್ದು ತಾವು ಅದನ್ನು ಪರಿಹರಿಸಲು ಕ್ರಮ ಕೈಗೊಳ್ಳುತ್ತೇವೆ. ಉಳಿದ ಸಮಸ್ಯೆಯನ್ನು ಪರಿಹರಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲು ಆಯಾಯ ಇಲಾಖೆಗೆ ರವಾನಿಸಿ ಒತ್ತಡ ಹಾಕಲಾಗುವುದು ಎಂದರು.
ಜಿಲ್ಲೆಯಲ್ಲಿ ಒಟ್ಟು 263 ನೂತನ ಹಳ್ಳಿಗೊಬ್ಬ ಪೊಲೀಸ್ ಬೀಟ್ ವ್ಯವಸ್ಥೆಯನ್ನು ರಚಿಸಲಾಗಿದೆ. ಶನಿವಾರದಿಂದಲೇ ಈ ವ್ಯವಸ್ಥೆ ದ.ಕ. ಜಿಲ್ಲೆ ಸೇರಿದಂತೆ ರಾಜ್ಯದಲ್ಲಿ ಜಾರಿಗೆ ಬರಲಿದೆ. ಗ್ರಾಮಕ್ಕೆ ನಿಯುಕ್ತರಾಗಿರುವ ಬೀಟ್ ಪೊಲೀಸ್ ಆ ಗ್ರಾಮದ ಎಸ್ಸೈ ಆಗಿರುತ್ತಾರೆ. ಅವರು ತಾನು ಕೈಗೊಂಡ ಕ್ರಮದ ಬಗ್ಗೆ ಠಾಣಾಧಿಕಾರಿಯವರಿಗೆ ವರದಿ ಒಪ್ಪಿಸುತ್ತಾರೆ. ಬಳಿಕ ತಾನೆ ಖುದ್ದಾಗಿ ಪ್ರಗತಿ ಪರಿಶೀಲನೆ ನಡೆಸಲಿದ್ದೇನೆ. ಈ ವ್ಯವಸ್ಥೆಗೆ ಸಾರ್ವಜನಿಕರು ಕೈ ಜೋಡಿಸಬೇಕೆಂದು ಕೋರಿದರು. ಯಾವುದೇ ಅಪರಾಧ ಅಥವಾ ಇತರ ಪ್ರಕರಣಗಳು ನಡೆದಾಗ ಬೀಟ್ ಸಿಬ್ಬಂದಿಯ ಮೊಬೈಲ್ ಸಂಖ್ಯೆಗೆ ಕರೆ ಮಾಡಿ ಮಾಹಿತಿ ನೀಡಬಹುದು. ಮಾಹಿತಿ ನೀಡಿದವರ ಹೆಸರನ್ನು ಗೌಪ್ಯವಾಗಿಡಲಾಗುವುದು. ಪಾಸ್‌ಪೋರ್ಟ್ ಪರಿಶೀಲನೆಯ ಸಂದಭರ್ ಅರ್ಜಿದಾರರಿಗೆ ಆಗುವ ತೊಂದರೆಗಳನ್ನು ನಿವಾರಿಸಲಾಗಿದೆ. ಸಕಾಲದ ಮೂಲಕ 21 ದಿನದೊಳಗಾಗಿ ಪೊಲೀಸ್ ಇಲಾಖೆಯಿಂದ ಪರಿಶೀಲನೆ ನಡೆಸಿ ಸಂಬಂಧಿಸಿದವರಿಗೆ ಕಳುಹಿಸಿ ಕೊಡಲಾಗುವುದು. ಪ್ರಸ್ತುತ ತನ್ನ ಕಚೇರಿಯಲ್ಲಿ ಪಾಸ್‌ಪೋರ್ಟ್‌ಗೆ ಸಂಬಂಧಿಸಿ ಯಾವುದೇ ಅರ್ಜಿಗಳಿಲ್ಲ. ಎಲ್ಲ ಅರ್ಜಿಗಳನ್ನು ಸಕಾಲದಲ್ಲಿ ವಿಲೇ ಮಾಡಲಾಗಿದೆ ಎಂದರು.
ಡಿವೈಎಸ್ಪಿರವೀಶ್ ಸಿ.ಆರ್., ಬಿ ಮೂಡ 3ವ್ಯಾಪ್ತಿಯ ಬೀಟ್ ಪೊಲೀಸ್ ಎನ್.ಜಿ.ಬಸಪ್ಪ ವೇದಿಕೆಯಲ್ಲಿದ್ದರು. ಪುರಸಭಾಧ್ಯಕ್ಷ ರಾಮಕೃಷ್ಣ ಆಳ್ವ, ಉಪಾಧ್ಯಕ್ಷ ಮುಹಮ್ಮದ್ ನಂದರಬೆಟ್ಟು, ಸದಸ್ಯರಾದ ಇಕ್ಬಾಲ್ ಗೂಡಿನ ಬಳಿ, ಮುನೀಶ್ ಅಲಿ, ಸಾಮಾಜಿಕ ಮುಖಂಡ ಪಿ.ಎ.ರಹೀಂ, ಸತ್ತಾರ್ ಗೂಡಿನಬಳಿ ಮೊದಲಾದವರು ಉಪಸ್ಥಿರಿದ್ದರು.
ನಗರ ಠಾಣೆ ಎಸ್ಸೈ ರಕ್ಷಿತ್ ಸ್ವಾಗತಿಸಿ ವಂದಿಸಿದರು. ಎಎಸ್ಸೈ ರಘುರಾಮ ಹೆಗ್ಡೆ ಸಹಿತ ಸಿಬ್ಬಂದಿ ಸಹಕರಿಸಿದರು.







