ಖಾಸಗಿ ಬಸ್ ನಿಲ್ದಾಣದ ಸಮಸ್ಯೆ ನಿವಾರಿಸಿ: ರೈ
ಅಧಿಕಾರಿಗಳ ಸಭೆೆ

ಬಂಟ್ವಾಳ, ಎ.1: ಬಿ.ಸಿ.ರೋಡ್‌ನಲ್ಲಿ ನಿರ್ಮಿಸಲು ಉದ್ದೇಶಿಸಿರುವ ಖಾಸಗಿ ಬಸ್ ನಿಲ್ದಾಣಕ್ಕೆ ಸಂಬಂಧಿಸಿದಂತೆ ಉಂಟಾಗ ಬಹುದಾದ ಎಲ್ಲ ಸಮಸ್ಯೆಗಳನ್ನು ಒಂದು ವಾರದೊಳಗೆ ನಿವಾರಿಸಿ ಯೋಜನೆಯನ್ನು ರೂಪಿಸುವಂತೆ ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಅಧಿಕಾರಿಗಳಿಗೆ ನಿರ್ದೇಶಿಸಿದರು.
ಶನಿವಾರ ಬಂಟ್ವಾಳ ಪ್ರವಾಸಿ ಮಂದಿರದಲ್ಲಿ ವಿವಿಧ ಇಲಾಖೆಯ ಅಧಿಕಾರಿಗಳ ಸಭೆೆ ನಡೆಸಿದ ಸಚಿವರು, ಬಿ.ಸಿ.ರೋಡ್‌ನ ಹಳೆ ತಾಪಂ ಕಟ್ಟಡ ಮತ್ತು ಪಕ್ಕದ ಉಪ ನೋಂದಣಿ ಕಚೇರಿಯನ್ನು ತೆರವುಗೊಳಿಸಿ ಇಲ್ಲಿ ಸುಸಜ್ಜಿತವಾದ ಖಾಸಗಿ ಬಸ್ ನಿಲ್ದಾಣವನ್ನು ನಿರ್ಮಿಸಲು ಉದ್ದೇಶಿಸಲಾಗಿದೆ. ಬಸ್ ನಿಲ್ದಾಣ ನಿರ್ಮಾಣಕ್ಕೆ ಇರುವ ಎಲ್ಲ ಸಮಸ್ಯೆಗಳನ್ನು ನಿವಾರಿಸುವ ನಿಟ್ಟಿನಲ್ಲಿ ಇಲಾಖೆಗಳ ಮಧ್ಯೆ ಸಮನ್ವಯತೆ ಸಾಧಿಸಲು ಬಂಟ್ವಾಳ ತಾಪಂ ಕಾರ್ಯನಿರ್ವಹಣಾಧಿಕಾರಿ ಸಿಪ್ರಿಯಾ ಮಿರಾಂದರನ್ನು ಈ ಸಂದರ್ಭ ನೋಡಲ್ ಅಧಿಕಾರಿಯನ್ನಾಗಿ ಸಭೆಯಲ್ಲಿ ನಿಯುಕ್ತಿಗೊಳಿಸಲಾಯಿತು. ರಸ್ತೆ ಅಗಲೀಕರಣ: ನಾಲ್ಕು ಮಾರ್ಗಗಳನ್ನು ಸಂಧಿಸುವ ಬಂಟ್ವಾಳದ ಬೈಪಾಸ್ ತುಂಬೆ ಜಂಕ್ಷನ್‌ನ್ನು ಅಗಲೀಕರಣಗೊಳಿಸಿ ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ಭೂ ಸ್ವಾಧೀನಕ್ಕೆ ಪ್ರಸ್ತಾವ ಕಳುಹಿಸುವಂತೆ ಸಚಿವರು ಅಧಿಕಾರಿಗಳಿಗೆ ಸೂಚಿಸಿದರು. ತುಂಬೆ ಜಂಕ್ಷನ್‌ನ ರಸ್ತೆಯನ್ನು ಅಗಲೀಕರಣಗೊಳಿಸಿ ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ಪರಿಸರದ ಭೂ ಸ್ವಾಧೀನಗೊಳಿಸಿ ಪ್ರಸ್ತಾಪವನ್ನು ಸರಕಾರಕ್ಕೆ ಸಲ್ಲಿಸುವಂತೆ ಸಲಹೆ ನೀಡಿದರು. ನಾಲ್ಕು ಮಾರ್ಗಗಳನ್ನು ಸಂಧಿಸುವ ತುಂಬೆ ಜಂಕ್ಷನ್‌ನಲ್ಲಿ ವಾಹನಗಳ ದಟ್ಟನೆಯಿಂದ ಪ್ರತಿನಿತ್ಯವೂ ಟ್ರಾಫಿಕ್ ಜಾಮ್ ಉಂಟಾಗಿ ಸಾರ್ವಜನಿಕರು ತೊಂದರೆ ಅನುಭವಿಸುತ್ತಿದ್ದಾರೆ. ಈ ನಿಟ್ಟಿನಲ್ಲಿ ರಸ್ತೆಯನ್ನು ಅಗಲೀಕರಗೊಳಿಸಲು ಅತೀ ಶೀಘ್ರವಾಗಿ ಪಕ್ರಿಯೆಯನ್ನು ಆರಂಭಿಸಿ ಕಾಮಗಾರಿಯನ್ನು ಆಧ್ಯತೆಯ ಮೇರೆಗೆ ಕೈಗೆತ್ತಿಕೊಂಡು ಪೂರ್ಣಗೊಳಿಸುವಂತೆ ಸೂಚಿಸಿದರು. ಸಭೆಯಲ್ಲಿ ತಾಪಂ ಅಧ್ಯಕ್ಷ ಚಂದ್ರಹಾಸ ಕರ್ಕೇರ, ಉಪಾಧ್ಯಕ್ಷ ಅಬ್ಬಾಸ್ ಅಲಿ, ಪುರಸಭಾಧ್ಯಕ್ಷ ರಾಮಕೃಷ್ಣ ಆಳ್ವ, ಉಪಾಧ್ಯಕ್ಷ ಮುಹಮ್ಮದ್ ನಂದರಬೆಟ್ಟು, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಸದಾಶಿವ ಬಂಗೇರ, ಅಕ್ರಮ ಸಕ್ರಮ ಸಮಿತಿಯ ಅಧ್ಯಕ್ಷ ಮಾಯಿಲಪ್ಪಸಾಲ್ಯಾನ್, ಎಪಿಎಂಸಿ ಅಧ್ಯಕ್ಷ ಪದ್ಮನಾಭ ರೈ, ಸಹಾಯಕ ಕಮಿಷನರ್ ರೇಣುಕಾ , ತಹಶೀಲ್ದಾರ್ ಪುರಂದರ ಹೆಗ್ಡೆ, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಪ್ರಸನ್ನ, ರಾಷ್ಟ್ರೀಯ ಹೆದ್ದಾರಿಯ ಕಾರ್ಯಪಾಲ ಇಂಜಿನಿಯರ್ ರಮೇಶ್, ಸಹಾಯಕ ಕಾರ್ಯ ಪಾಲಕ ಅಬ್ದುರ್ರಹ್ಮಾನ್, ಬಂಟ್ವಾಳ ಪಿಡಬ್ಲುಡಿ ಸಹಾಯಕ ಇಂಜಿನಿಯರ್ ಉಮೇಶ್ ಭಟ್, ಇಂಜಿನಿಯರ್ ಅರುಣ್ ಪ್ರಕಾಶ್, ಕೆಯುಡಬ್ಲು ಎಸ್‌ನ ಶೋಭಾ ಲಕ್ಷ್ಮೀ, ಮುಖ್ಯಾಧಿಕಾರಿ ಸುಧಾಕರ್ ಉಪಸ್ಥಿತರಿದ್ದರು.





