ಸೌಹಾರ್ದಯುತ ನಾಳೆಗಾಗಿ ಚಿಣ್ಣರ ಹಬ್ಬ
ಮಂಗಳೂರು, ಎ.1: ಕಸಬಾ ಬೆಂಗರೆಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಎ.6ರಿಂದ 8ರವರೆಗೆ ಸೌಹಾರ್ದಯುತ ನಾಳೆಗಾಗಿ ಚಿಣ್ಣರ ಹಬ್ಬವನ್ನು ಆಯೋಜಿಸಲಾಗಿದೆ. ಈ ಪ್ರಯುಕ್ತ ಎ. 2ರಂದು ಬೆಳಗ್ಗೆ 7 ಗಂಟೆಗೆ ಸೌಹಾರ್ದಯುತ ನಾಳೆಗಾಗಿ ಚಿಣ್ಣರ ನಡಿಗೆ ತೋಟಬೆಂಗ್ರೆಯಿಂದ ಭಾರತ್ ಶಿಪ್‌ಯಾರ್ಡ್‌ವರೆಗೆ ನಡೆಯಲಿದೆ. ಸುದ್ದಿಗೋಷ್ಠಿಯಲ್ಲಿಂದು ಚಿಣ್ಣರ ಹಬ್ಬದ ಅಧ್ಯಕ್ಷ ಚೇತನ್ ತೋಟಬೆಂಗರೆ ಕಾರ್ಯಕ್ರಮದ ಬಗ್ಗೆ ಮಾಹಿತಿ ನೀಡಿದರು. ಎ.2ರಂದು ಬೆಳಗ್ಗೆ 7 ಗಂಟೆಗೆ ನಡೆಯುವ ನಡಿಗೆ ಕಾರ್ಯಕ್ರಮಕ್ಕೆ ನಿವೃತ್ತ ಸೈನಿಕ ವಿಶ್ವನಾಥ್ ಪ್ರಕಾಶ್ ಕಾರ್ವಿ ಚಾಲನೆ ನೀಡಲಿದ್ದಾರೆ. ಧರ್ಮ, ಜಾತಿಗಳ ಭೇದವಿಲ್ಲದೆ ಎಲ್ಲರೂ ಒಟ್ಟಾಗಿ ಪರಸ್ಪರ ಬೆರೆಯುವ, ಬೆರೆತು ಆಡುವ ನಿಟ್ಟಿನಲ್ಲಿ ಈ ಕಾರ್ಯಕ್ರಮದ ಮೂಲಕ ವೇದಿಕೆಯನ್ನು ಕಲ್ಪಿಸಲಾಗುತ್ತದೆ. ಮಕ್ಕಳಲ್ಲಿ ಸೌಹಾರ್ದದ ಪ್ರಜ್ಞೆ ಬೆಳೆಸುವುದು, ನೈತಿಕ ಪ್ರಜ್ಞೆಯನ್ನು ತುಂಬುವುದು ಹಾಗೂ ಪ್ರತಿಭಾ ಪ್ರದರ್ಶನಕ್ಕೆ ಅವಕಾಶ ನೀಡುವುದು ಈ ಕಾರ್ಯಕ್ರಮದ ಉದ್ದೇಶವಾಗಿದೆ ಎಂದವರು ಹೇಳಿದರು. ಎ.6ಮತ್ತು 7ರಂದು ಸಂಜೆ 4ರಿಂದ 7ಗಂಟೆಯವರೆಗೆ ಹಾಗೂ 8ರಂದು ಸಂಜೆ 4ರಿಂದ 8 ಗಂಟೆಯವರೆಗೆ ಆಟೋಟ ಸ್ಪರ್ಧೆಗಳು, ಸಭಾ ಕಾರ್ಯಕ್ರಮ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ ಎಂದವರು ವಿವರಿಸಿದರು. ಗೋಷ್ಠಿಯಲ್ಲಿ ಗೌರವಾಧ್ಯಕ್ಷ ಹಾಗೂ ಸ್ಥಳೀಯ ಕಾರ್ಪೊರೇಟರ್ ರಘುವೀರ್, ಉಪಾಧ್ಯಕ್ಷರಾದ ಹಮೀದ್ ಹುಸೈನ್, ನವೀನ್ ಚಂದ್ರ ಸುವರ್ಣ, ಕಾರ್ಯದರ್ಶಿ ಅಬ್ದುಲ್ ಕರೀಂ ಉಪಸ್ಥಿತರಿದ್ದರು.





