ಗುಜರಾತನ್ನು ಸಸ್ಯಾಹಾರಿ ರಾಜ್ಯ ಮಾಡುವುದು ನಮ್ಮ ಗುರಿ: ಸಿಎಂ ರುಪಾನಿ
ಅಹ್ಮದಾಬಾದ್, ಎ.1: ಗುಜರಾತ್ ರಾಜ್ಯವನ್ನು ಸಸ್ಯಾಹಾರಿಯನ್ನಾಗಿಸುವುದು ನಮ್ಮ ಗುರಿ ಎಂದು ಗುಜರಾತ್ ಮುಖ್ಯಮಂತ್ರಿ ವಿಜಯ್ ರುಪಾನಿ ಹೇಳಿದ್ದಾರೆ.
ಗೋಹತ್ಯೆಗೆ ಗರಿಷ್ಠ ಜೀವಾವಧಿ ಶಿಕ್ಷೆ ಹಾಗೂ ಕನಿಷ್ಠ 10 ವರ್ಷಗಳ ಸಜೆ ವಿಧಿಸುವ ರಾಜ್ಯ ಪ್ರಾಣಿ ಸಂರಕ್ಷಣಾ ಮಸೂದೆಯ ತಿದ್ದುಪಡಿಗೆ ಗುಜರಾತ್ ವಿಧಾನಸಭೆ ಶುಕ್ರವಾರ ವಿಪಕ್ಷ ಕಾಂಗ್ರೆಸ್ ಸದಸ್ಯರ ಅನುಪಸ್ಥಿತಿಯಲ್ಲಿ ಹಾಗೂ ವೀಕ್ಷಕರ ಗ್ಯಾಲರಿಯಲ್ಲಿ ಕಿಕ್ಕಿರಿದು ತುಂಬಿದ್ದ ಕೇಸರಿಧಾರಿ ಹಿಂದು ಅರ್ಚಕರ ಸಮ್ಮುಖದಲ್ಲಿ ಅನುಮೋದಿಸಿದ ಆನಂತರ ರುಪಾನಿ ಮಾತನಾಡುತ್ತಿದ್ದರು.
ಗುಜರಾತ್ ಒಂದು ವಿಶಿಷ್ಟ ರಾಜ್ಯ ಹಾಗೂ ಅದು ಮಹಾತ್ಮಾ ಗಾಂಧಿಯವರ ತತ್ವಗಳನ್ನು ಪಾಲಿಸುವ ರಾಜ್ಯವೆಂದು ಬಣ್ಣಿಸಿದ ರುಪಾನಿ, ಇದು ಗಾಂಧಿಯ ಗುಜರಾತ್, ಸರ್ದಾರ್ ಅವರ ಗುಜರಾತ್ ಮತ್ತು ಪ್ರಧಾನಿ ನರೇಂದ್ರ ಮೋದಿಯ ಗುಜರಾತ್ ಎಂದರು.
ಸ್ವಘೋಷಿತ ಗೋರಕ್ಷಕರಿಂದ ಉನಾದಲ್ಲಿ ಏಳು ಮಂದಿ ದಲಿತ ಯುವಕರು ಬರ್ಬರವಾಗಿ ಹಲ್ಲೆಗೀಡಾದ ಘಟನೆ ನಡೆದು ಎಂಟು ತಿಂಗಳುಗಳ ಆನಂತರ ಈ ತಿದ್ದುಪಡಿಗೊಂಡ ಮಸೂದೆಗೆ ಅಂಕಿತ ದೊರಕಿದೆ. ಈ ಹಿಂದಿನ ಕಾನೂನಿನಂತೆ ಗೋಹತ್ಯೆ ಆರೋಪ ಸಾಬೀತಾದಲ್ಲಿ ತಪ್ಪಿತಸ್ಥರಿಗೆ ಮೂರು ವರ್ಷಗಳಿಂದ ಏಳು ವರ್ಷಗಳ ತನಕ ಶಿಕ್ಷೆಯಾಗಬಹುದಾಗಿದೆ. ಆದರೆ ಹೊಸ ಕಾನೂನಿನಂತೆ ಕಠಿಣ ಸಜೆ ಕಾದಿದೆಯಲ್ಲದೆ ಆರೋಪಿಗಳ ಬಂಧನ ಜಾಮೀನುರಹಿತವಾಗಿರುತ್ತದೆ.
ಮಸೂದೆ ಅನುಮೋದನೆಗೊಳ್ಳುವ ಮೊದಲು ಕಾಂಗ್ರೆಸ್ ಸದಸ್ಯರು ಸದನದಲ್ಲಿ ಗದ್ದಲವೆಬ್ಬಿಸಿದ ಹಿನ್ನೆಲೆಯಲ್ಲಿ ಅವರನ್ನು ವಜಾಗೊಳಿಸಲಾಯಿತು.
ಈ ತಿದ್ದುಪಡಿಗೊಂಡ ಮಸೂದೆಯಂತೆ ಗೋಮಾಂಸವನ್ನು ಅಕ್ರಮವಾಗಿ ಸಾಗಾಟ ಮಾಡುವ ವಾಹನಗಳನ್ನೂ ರಾಜ್ಯ ಸರಕಾರ ಮುಟ್ಟುಗೋಲು ಹಾಕಬಹುದು ಹಾಗೂ ತಪ್ಪಿಗಾಗಿ ವಿಧಿಸಲಾಗುವ ದಂಡವನ್ನೂ ರೂ. 50,000 ದಿಂದ ರೂ. 1 ಲಕ್ಷದಿಂದ ರೂ. 5 ಲಕ್ಷದ ತನಕ ಹೆಚ್ಚಿಸಬಹುದು. ಇದರ ಹೊರತಾಗಿ ಮೂರರಿಂದ ಏಳು ವರ್ಷಗಳ ತನಕ ಜೈಲು ಶಿಕ್ಷೆಯೂ ತಪ್ಪಿತಸ್ಥರಿಗೆ ವಿಧಿಸಬಹುದಾಗಿದೆ.







