ಮನೆ ಹೆಸರಲ್ಲಿ 550 ಗ್ರಾಹಕರಿಗೆ ಪಂಗನಾಮ: ರಿಯಲ್ ಎಸ್ಟೇಟ್ ಸಂಸ್ಥೆ ಮಾಲಕ ಬಂಧನ

ಹೊಸದಿಲ್ಲಿ, ಎ.2: ರಾಜಧಾನಿಯ ಗೃಹ ಖರೀದಿ ಗ್ರಾಹಕರಿಗೆ ವಂಚಿಸಿದ ಆರೋಪದ ಮೇಲೆ ದೇಶದ ರಿಯಲ್ ಎಸ್ಟೇಟ್ ಉದ್ಯಮದಲ್ಲಿ ಮುಂಚೂಣಿಯಲ್ಲಿರುವ ಯುನಿಟೆಕ್ ಲಿಮಿಟೆಡ್‌ನ ಮಾಲಕರಾದ ಸಂಜಯ್‌ಚಂದ್ರ ಹಾಗೂ ಅಜಯ್‌ಚಂದ್ರ ಅವರನ್ನು ದಿಲ್ಲಿ ಪೊಲೀಸ್ ಪಡೆಯ ಆರ್ಥಿಕ ಅಪರಾಧಗಳ ವಿಭಾಗ ಬಂಧಿಸಿದೆ.
ಗುರ್ಗಾಂವ್ ಸೆಕ್ಟರ್ 70ರಲ್ಲಿ ನಿರ್ಮಾಣ ಹಂತದಲ್ಲಿದ್ದ ವೈಲ್ಡ್ ಫ್ಲವರ್ ಕಂಟ್ರಿ ಹೆಸರಿನ ಅಥೇನಾ ಫ್ಲೋರ್ಸ್ ಎಂಬ ವಿಭಾಗದಲ್ಲಿ 550 ಗ್ರಾಹಕರಿಗೆ ಸಂಸ್ಥೆ ವಂಚಿಸಿದೆ ಎಂದು ಆಪಾದಿಸಲಾಗಿದೆ.
"ಪ್ರಕರಣದ ಬಗ್ಗೆ ವಿಸ್ತೃತ ತನಿಖೆ ನಡೆಸಲು ಪೊಲೀಸರಿಗೆ ಅಧಿಕಾರ ನೀಡಲಾಗಿದೆ. ಇತರ ಸಂಚುಕೋರರೂ ಇದರಲ್ಲಿ ಸೇರಿರುವ ಬಗ್ಗೆಯೂ ತನಿಖೆ ನಡೆಸಬಹುದು. ನಾವು ಹೇಳುವಂಥದ್ದು ಏನೂ ಇಲ್ಲ ಎಂದು ಬಂಧಿತರು ಹೇಳಿದರೂ, ವಿಸ್ತೃತ ತನಿಖೆಗೆ ಒಳಪಡಿಸಲು ಪೊಲೀಸ್ ಕಸ್ಟಡಿಗೆ ಪಡೆಯಬಹುದು" ಎಂದು ಹೆಚ್ಚುವರಿ ಮುಖ್ಯ ಮೆಟ್ರೊಪಾಲಿಟನ್ ಮ್ಯಾಜಿಸ್ಟ್ರೇಟ್ ಅಶು ಗರ್ಗ್ ಸ್ಪಷ್ಟಪಡಿಸಿದ್ದಾರೆ.
ಈ ಪ್ರಸ್ತಾವಿತ ಯೋಜನೆಯಲ್ಲಿ ಭೂಮಿಯನ್ನು ಸಮತಟ್ಟುಗೊಳಿಸಿ, ಕೆಲ ಒಳಚರಂಡಿ ಹೊಂಡಗಳನ್ನಷ್ಟೇ ನಿರ್ಮಿಸಲಾಗಿದೆ. ನಿರ್ಮಾಣದ ಯಾವುದೇ ಸೂಚನೆಗಳೂ ಕಾಣುತ್ತಿಲ್ಲ. ಗ್ರಾಹಕರಿಂದ ಹಾಗೂ ಹಣಕಾಸು ಸಂಸ್ಥೆಗಳಿಂದ ಈ ಗೃಹನಿರ್ಮಾಣ ಸಂಸ್ಥೆ 94 ಕೋಟಿ ರೂಪಾಯಿಗಳನ್ನು ಪಡೆದಿದೆ ಎನ್ನುವುದು ತನಿಖೆಯಿಂದ ತಿಳಿದುಬಂದಿದೆ. ಸಂಸ್ಥೆ ಮಾಲಕರು ಹಲವು ಮಂದಿಯನ್ನು ವಂಚಿಸಿದ್ದಾರೆ ಎಂದು ಹೇಳಲಾಗಿದ್ದು, ಈ ಪ್ರಕರಣದಲ್ಲಿ 91 ಮಂದಿ ಅಪಾರ್ಟ್‌ಮೆಂಟ್‌ಗಳನ್ನು ಖರೀದಿಸಲು 35 ಕೋಟಿ ರೂಪಾಯಿ ಪಾವತಿಸಿದ್ದಾರೆ ಎಂದು ಪೊಲೀಸರು ವಿವರಿಸಿದ್ದಾರೆ. ಗ್ರಾಹಕರಿಗೆ ಇನ್ನೂ ಫ್ಲ್ಯಾಟ್ ಹಂಚಿಕೆಯಾಗದ ಹಿನ್ನೆಲೆಯಲ್ಲಿ ನ್ಯಾಯಾಲಯದ ಮೊರೆ ಹೋಗಿದ್ದರು. ಸುಮಾರು 557 ಖರೀದಿದಾರರಿಂದ 203 ಕೋಟಿ ರೂಪಾಯಿಗಳನ್ನು ಸಂಸ್ಥೆ ಪಡೆದಿದೆ ಎಂದು ಪೊಲೀಸರು ಹೇಳಿದ್ದಾರೆ.
ಇಷ್ಟಾಗಿಯೂ ಈ ಯೋಜನೆಗೆ ಕಂಪೆನಿ ಕಟ್ಟಡ ನಿರ್ಮಾಣ ಪರವಾನಿಗೆಯನ್ನೂ ಪಡೆದಿಲ್ಲ. 10 ಲಕ್ಷ ರೂಪಾಯಿ ಹೊರತುಪಡಿಸಿ ಉಳಿದ ಹಣವನ್ನು ಬೇರೆಡೆಗೆ ವರ್ಗಾಯಿಸಲಾಗಿದೆ ಎನ್ನುವುದೂ ತನಿಖೆಯಿಂದ ಗೊತ್ತಾಗಿದೆ.







