ವರದಕ್ಷಿಣೆ ಮರಳಿಸಿದ ಆದರ್ಶ ವರನಿಗೆ ಪ್ರೇರಣೆ ಏನು ಗೊತ್ತೇ?

ರಾಂಚಿ, ಎ.2: ಇದೊಂದು ಅಪರೂಪದ ಆದರ್ಶ ವಿವಾಹ. ವರದಕ್ಷಿಣೆಯಾಗಿ ನೀಡಲು ಒಪ್ಪಂದವಾಗಿದ್ದ 70 ಸಾವಿರ ರೂಪಾಯಿ ನಗದು ಹಾಗೂ ಮೋಟರ್‌ಸೈಕಲ್ ಮರಳಿಸಿದ ವರ. ಇದಕ್ಕೆ ಪ್ರೇರಣೆಯಾದದ್ದು ಸ್ಥಳೀಯ ಮಸೀದಿ ಹಾಗೂ ಮದ್ರಸ!
ಜಾಖರ್ಂಡ್ ರಾಜ್ಯದ ಲತೇಹಾರ್ ಜಿಲ್ಲಾ ಕೇಂದ್ರದಿಂದ 10 ಕಿಲೋಮೀಟರ್ ದೂರದ ತರ್ವಾಡಿ ಎಂಬ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಗ್ರಾಮದ ಯುವತಿ ಬಾನೊ ಪರ್ವೀನ್ (20) ಎಂಬಾಕೆಯನ್ನು ಪಕ್ಕದ ಗ್ರಾಮದಲ್ಲಿ ವೆಲ್ಡರ್ ಕೆಲಸ ಮಾಡುತ್ತಿದ್ದ ಮೆಹಫೂಝ್ ಅನ್ಸಾರಿ (20) ಅವರಿಗೆ ವಿವಾಹ ಮಾಡಿಕೊಡಲು ನಿಶ್ಚಯಿಸಲಾಗಿತ್ತು. ಈ ಸಂಬಂಧ ವಧು ಹಾಗೂ ವರನ ಕುಟುಂಬದ ನಡುವೆ ವರದಕ್ಷಿಣೆ ಒಪ್ಪಂದವೂ ನಡೆಯಿತು.
ಸ್ಥಳೀಯ ಮದ್ರಸ ಹಾಗೂ ಮಸೀದಿ ಸಮಿತಿಯು ವರನ ಕುಟುಂಬದ ಮನವೊಲಿಸಿ, ವರದಕ್ಷಿಣೆ ರೂಪದಲ್ಲಿ ಸ್ವೀಕರಿಸಿದ ನಗದು ಹಾಗೂ ಬೈಕನ್ನು ಬಾನೊ ಅವರ ತಂದೆ ಐನುಲ್ ಹಕ್ ಅವರಿಗೆ ವಾಪಸ್ ಮಾಡುವಂತೆ ಸೂಚಿಸಿತು. ವಿವಾಹಕ್ಕೆ ನಾಲ್ಕು ದಿನ ಮುಂಚಿತವಾಗಿ ಹಣ ಮರಳಿಸಲಾಯಿತು. ಈ ಹಣವನ್ನು ಮಗಳಿಗಾಗಿ ಪಾತ್ರೆ, ಪಗಡೆ, ಅಲ್ಮೇರಾ ಮತ್ತಿತರ ವಸ್ತುಗಳನ್ನು ಖರೀದಿಸಲು ಬಳಸಿಕೊಂಡೆ. ವಿವಾಹ ಯೋಜನೆಯಂತೆ ನಡೆಯಿತು ಎಂದು ಹಕ್ ಖುಷಿಯಿಂದ ಹೇಳಿಕೊಂಡಿದ್ದಾರೆ.
ಈ ಘಟನೆ ನಡೆದು ವರ್ಷವಾಗುತ್ತಾ ಬಂದರೂ, ಮುಸ್ಲಿಂ ಸಮುದಾಯದಲ್ಲಿ ನಡೆಯುತ್ತಿರುವ ವರದಕ್ಷಿಣೆ ವಿರೋಧಿ ಆಂದೋಲನದಲ್ಲಿ ಒಳ್ಳೆಯ ನಿದರ್ಶನವಾಗಿ ಇದನ್ನು ಉದಾಹರಿಸಲಾಗುತ್ತಿದೆ. ಹಾಜಿ ಮುಮ್ತಾಝ್ ಅಲಿ ಎಂಬ ಕೈಮಗ್ಗ ವ್ಯಾಪಾರಿ 2016ರ ಎಪ್ರಿಲ್ 24ರಂದು ಆರಂಭಿಸಿದ ಈ ಆಂದೋಲನ ಇದೀಗ ಝಾರ್ಖಂಡ್‌ನ ಪಲಮು, ಘರ್ವಾ ಹಾಗೂ ಲತೇಹಾರ್ ಜಿಲ್ಲೆಗಳಿಗೆ ವ್ಯಾಪಿಸಿದೆ.
"ಹಲವಾರು ಮಂದಿ ಗ್ರಾಮಸ್ಥರು ನೆರವಿಗಾಗಿ ನನ್ನ ಬಳಿ ಬರುತ್ತಿದ್ದರು. ಸಾಮಾನ್ಯವಾಗಿ ಹೆಣ್ಣುಮಕ್ಕಳ ಮದುವೆಗೆ ನೆರವು ನೀಡುವಂತೆ ಕೋರುತ್ತಿದ್ದರು. ಆಗ ವರದಕ್ಷಿಣೆ ಭೂತ ಬಡವರಿಗೆ ಎಷ್ಟು ಹಿಂಸೆಯಾಗುತ್ತಿದೆ ಎನ್ನುವುದು ಮನವರಿಕೆಯಾಯಿತು. ಆದ್ದರಿಂದ ಈ ಆಂದೋಲನಕ್ಕೆ ನಿರ್ಧರಿಸಿದೆ. ಯಾರೂ ಇದರ ವಿರುದ್ಧ ಮಾತನಾಡಿಲ್ಲ" ಎಂದು ಆಂದೋಲನದ ಹಿನ್ನೆಲೆಯಲ್ಲಿ ಅವರು ವಿವರಿಸಿದರು.
ವರದಕ್ಷಿಣೆಗಾಗಿ ಆಗ್ರಹ ಮಂಡಿಸುವುದು ನಿಯಮಬಾಹಿರ. ಈ ಕಾರಣದಿಂದ ಅದರ ವಿರುದ್ಧ ಹೋರಾಡುತ್ತಿದ್ದೇವೆ ಎಂದು ಹೇಳುತ್ತಾರೆ. ಇದುವರೆಗೆ ಜಿಲ್ಲೆಯಲ್ಲಿ 700ಕ್ಕೂ ಹೆಚ್ಚು ಮುಸ್ಲಿಂ ಕುಟುಂಬಗಳು ಹೀಗೆ ಸುಮಾರು ಆರು ಕೋಟಿ ರೂಪಾಯಿ ವರದಕ್ಷಿಣೆ ಮರಳಿಸಿವೆ ಎಂದು ಯಶೋಗಾಥೆಯನ್ನು ಅವರು ವಿವರಿಸುತ್ತಾರೆ.







