ಜೊಹನ್ನಾ ಕಾಂಟಾಗೆ ಮಿಯಾಮಿ ಸಿಂಗಲ್ಸ್ ಪ್ರಶಸ್ತಿ

ಮಿಯಾಮಿ, ಮಾ.2: ಕರೊಲಿನ್ ವೋಝ್ನಿಯಾಕಿ ಅವರನ್ನು ನೇರ ಸೆಟ್‌ಗಳ ಅಂತರದಿಂದ ಮಣಿಸಿದ ಜೊಹನ್ನಾ ಕಾಂಟಾ ಮಿಯಾಮಿ ಓಪನ್‌ನಲ್ಲಿ ಮಹಿಳೆಯರ ಸಿಂಗಲ್ಸ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ.
ಇಲ್ಲಿ ಶನಿವಾರ ನಡೆದ ಮಹಿಳೆಯರ ಸಿಂಗಲ್ಸ್‌ನ ಫೈನಲ್ ಪಂದ್ಯದಲ್ಲಿ ಕಾಂಟಾ ಅವರು ವೋಝ್ನಿಯಾಕಿ ಅವರನ್ನು 6-4, 6-3 ನೇರ ಸೆಟ್‌ಗಳ ಅಂತರದಿಂದ ಸೋಲಿಸಿದ್ದಾರೆ.
40 ವರ್ಷಗಳ ಬಳಿಕ ಪ್ರತಿಷ್ಠಿತ ಪ್ರಶಸ್ತಿ ಗೆದ್ದುಕೊಂಡ ಬ್ರಿಟನ್‌ನ ಮೊದಲ ಆಟಗಾರ್ತಿ ಎಂಬ ಗೌರವಕ್ಕೆ ಪಾತ್ರರಾಗಿದ್ದಾರೆ. 1977ರಲ್ಲಿ ವಿಂಬಲ್ಡನ್‌ನಲ್ಲಿ ಬ್ರಿಟನ್ ಆಟಗಾರ್ತಿ ವಿರ್ಜಿನಿಯ ವೇಡ್ ಕೊನೆಯ ಬಾರಿ ಪ್ರಶಸ್ತಿ ಗೆದ್ದುಕೊಂಡಿದ್ದರು. ವೇಡ್ ಬಳಿಕ ಯಾವೊಬ್ಬ ಬ್ರಿಟನ್ ಆಟಗಾರ್ತಿ ಪ್ರಮುಖ ಟೂರ್ನಿಯಲ್ಲಿ ಟ್ರೋಫಿ ಜಯಿಸಿಲ್ಲ. ಎರಡನೆ ಬಾರಿ ಮಿಯಾಮಿ ಟೂರ್ನಿಯಲ್ಲಿ ಆಡಲು ಅರ್ಹತೆ ಪಡೆದಿದ್ದ ಕಾಂಟಾ ತನ್ನ 2ನೆ ಪ್ರಯತ್ನದಲ್ಲಿ ಪ್ರಶಸ್ತಿ ಬಾಚಿಕೊಂಡರು.
ಕಾಂಟಾ ಈ ತನಕ ಡಬ್ಲುಟಿಎ ಪ್ರೀಮಿಯರ್ ಎಲೈಟ್ ಟೂರ್ನಿಯಲ್ಲಿ ಪ್ರಶಸ್ತಿಯನ್ನು ಜಯಿಸಿಲ್ಲ. ಮಿಯಾಮಿ ಓಪನ್ ಕಿರೀಟ ಗೆದ್ದುಕೊಂಡಿರುವ 25ರ ಹರೆಯದ ಕಾಂಟಾ ವಿಶ್ವ ರ್ಯಾಂಕಿಂಗ್‌ನಲ್ಲಿ 7ನೆ ಸ್ಥಾನಕ್ಕೆ ಭಡ್ತಿ ಪಡೆದಿದ್ದಾರೆ.
ಸೆಮಿ ಫೈನಲ್‌ನಲ್ಲಿ ಅಮೆರಿಕದ ಹಿರಿಯ ಆಟಗಾರ್ತಿ ವೀನಸ್ ವಿಲಿಯಮ್ಸ್‌ರನ್ನು ಮಣಿಸಿದ್ದ ಸಿಡ್ನಿ ಮೂಲದ ಕಾಂಟಾ ಫೈನಲ್ ಪಂದ್ಯದಲ್ಲಿ ಮಾಜಿ ನಂ.1 ಆಟಗಾರ್ತಿ ವೋಝ್ನಿಯಾಕಿ ವಿರುದ್ಧ ಸಂಪೂರ್ಣ ಪ್ರಾಬಲ್ಯ ಸಾಧಿಸಿದರು.





