ತಮಿಳುನಾಡಿನ ರೈತರ ಪ್ರತಿಭಟನೆಯ ಬಗ್ಗೆ ಎಚ್ಚರ ಅಗತ್ಯ: ಕುಮಾರಸ್ವಾಮಿ

ಬೆಂಗಳೂರು, ಎ.2: ಕಾವೇರಿ ನೀರಿಗೆ ಸಂಬಂಧಿಸಿ ತಮಿಳುನಾಡಿನ ರೈತರು ದಿಲ್ಲಿಯ ಜಂತರ್ ಮಂತರ್‌ನಲ್ಲಿ ನಡೆಸುತ್ತಿರುವ ಪ್ರತಿಭಟನೆಯ ಬಗ್ಗೆ ನಿಗಾ ಅಗತ್ಯ. ತಮಿಳುನಾಡಿಗೆ ಕಾವೇರಿ ನೀರು ಹರಿಸುವ ಕುರಿತಂತೆ ಕೇಂದ್ರ ಸರಕಾರ ಯಾವ ಕ್ಷಣದಲ್ಲಿ ಯಾವ ತೀರ್ಮಾನ ಬೇಕಾದರೂ ಕೈಗೊಳ್ಳಬಹುದು ಎಂದು ಎಚ್ಚರಿಸಿದ್ದಾರೆ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಮಿಳುನಾಡಿನ ರೈತರು ರೈತರು, ರಾಜಕಾರಿಣಿಗಳು, ಅಧಿಕಾರಿಗಳು ಬುದ್ಧಿವಂತಿಕೆಯ ನಡೆ ಪ್ರದರ್ಶಿಸುತ್ತಿದ್ದಾರೆ. ಕರ್ನಾಟಕ ನೀರು ಬಿಡುತ್ತಿಲ್ಲ ಎಂದು ದಿಲ್ಲಿಯಲ್ಲಿ ಬಿಂಬಿಸಿ ಕಾವೇರಿ ನಿರ್ವಹಣಾ ಮಂಡಳಿ ರಚಿಸುವಂತೆ ಒತ್ತಡ ಹೇರುತ್ತಿದ್ದಾರೆ. ಈ ಪ್ರತಿಭಟನೆ ರಾಷ್ಟ್ರೀಯ ಮಾಧ್ಯಮಗಳಲ್ಲಿ ಸುದ್ದಿಯಾಗುತ್ತಿದೆ. ಆ ಮೂಲಕ ಕೇಂದ್ರ ಸರಕಾರದ ಮೇಲೆ ಒತ್ತಡ ಹೇರುವ ತಂತ್ರ ಪ್ರಯೋಗಿಸುತ್ತಿದ್ದಾರೆ. ಕೇಂದ್ರ ಸರ್ಕಾರ ಯಾವ ಕ್ಷಣದಲ್ಲಿ ಯಾವ ತೀರ್ಮಾನ ಬೇಕಾದರೂ ಕೈಗೊಳ್ಳಬಹುದು. ಈ ಬಗ್ಗೆ ಎಚ್ಚರದಿಂದರಬೇಕಿದೆ ಎಂದರು.
ನೀರಿನ ಈ ಸಮಸ್ಯೆಯತ್ತ್ತಗಮನಹರಿಸದ ರಾಜ್ಯದ 17 ಬಿಜೆಪಿ ಸಂಸದರು ಉಪ ಚುನಾವಣೆ ಗೆಲ್ಲಲು ತಲೆ ಕೆಡಿಸಿಕೊಂಡಿರುವುದು ಖೇದಕರ. ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡ ಈ ನಿಟ್ಟಿನಲ್ಲಿ ಸೂಕ್ತ ಕ್ರಮಕ್ಕೆ ಮುಂದಾಗಲಿ. ನೀರಿನ ವಿಚಾರದಲ್ಲಿ ನಮ್ಮ ರಾಜ್ಯಕ್ಕೆ ಯಾವಾಗಲೂ ಹೊಡೆತವೇ ಬೀಳುತ್ತಿದೆ. ಇನ್ನು ಹಾಗೆ ಆಗದಿರಲಿ ಎಂದು ಆಶಿಸಿದರು.
ನೀರಿನ ಈ ಸಮಸ್ಯೆಯ ಬಗ್ಗೆ ಜೆಡಿಎಸ್ ರಾಷ್ಟ್ರಾಧ್ಯಕ್ಷರು ನಿನ್ನೆ ದನಿ ಎತ್ತಿದ್ದಾರೆ ಎಂದರು.





