ವನಿತೆಯರ ವಿಶ್ವ ಹಾಕಿ ಲೀಗ್: ಭಾರತಕ್ಕೆ ರೋಚಕ ಜಯ

ವೆಸ್ಟ್ ವ್ಯಾಂಕೊವರ್(ಕೆನಡಾ), ಎ.2: ಪೆನಾಲ್ಟಿ ಶೂಟೌಟ್‌ನಲ್ಲಿ ಉರುಗ್ವೆ ತಂಡವನ್ನು 4-2 ಗೋಲುಗಳ ಅಂತರದಿಂದ ಮಣಿಸಿದ ಭಾರತದ ಮಹಿಳಾ ಹಾಕಿ ತಂಡ ವನಿತೆಯರ ವಿಶ್ವ ಹಾಕಿ ಲೀಗ್ ರೌಂಡ್-2ರಲ್ಲಿ ಶುಭಾರಂಭ ಮಾಡಿದೆ.
ರವಿವಾರ ಇಲ್ಲಿ ನಡೆದ ಪಂದ್ಯದಲ್ಲಿ ಉಭಯ ತಂಡಗಳು ನಿಗದಿತ ಸಮಯದಲ್ಲಿ 2-2 ರಿಂದ ಸಮಬಲ ಸಾಧಿಸಿದವು. ಆಗ ಫಲಿತಾಂಶ ನಿರ್ಧರಿಸಲು ಪೆನಾಲ್ಟಿ ಶೂಟೌಟ್‌ನ್ನು ಅಳವಡಿಸಲಾಯಿತು. ಪೆನಾಲ್ಟಿ ಶೂಟೌಟ್‌ನಲ್ಲಿ ನಾಯಕಿ ರಾಣಿ, ಮೋನಿಕಾ, ದೀಪಿಕಾ ಹಾಗೂ ನವಜೋತ್ ಕೌರ್ ತಲಾ ಒಂದು ಗೋಲು ಬಾರಿಸಿದರು. ಭಾರತದ ಅನುಭವಿ ಗೋಲ್‌ಕೀಪರ್ ಸವಿತಾ ಉತ್ತಮ ಪ್ರದರ್ಶನ ನೀಡಿದ್ದು, ಭಾರತ 4-2 ರಿಂದ ಜಯಭೇರಿ ಬಾರಿಸಲು ನೆರವಾದರು.
ಆರನೆ ನಿಮಿಷದಲ್ಲಿ ಗೋಲು ಬಾರಿಸಿದ ರಾಣಿ ಭಾರತಕ್ಕೆ 1-0 ಮುನ್ನಡೆ ಒದಗಿಸಿಕೊಟ್ಟಿದ್ದರು. 45ನೆ ನಿಮಿಷದಲ್ಲಿ ಗೋಲು ಬಾರಿಸಿದ ಉರುಗ್ವೆ 1-1 ರಿಂದ ಸಮಬಲ ಸಾಧಿಸಿತು. ಉರುಗ್ವೆ ಪರ ಮರಿಯಾ ತೆರೆಸಾ ವಿಯಾನ ಗೋಲು ಬಾರಿಸಿದರು.
49ನೆ ನಿಮಿಷದಲ್ಲಿ ಆಕರ್ಷಕ ಗೋಲು ಬಾರಿಸಿದ ವಂದನಾ ಕಟಾರಿಯ ಭಾರತಕ್ಕೆ 2-1 ಮುನ್ನಡೆ ಒದಗಿಸಿಕೊಟ್ಟರು. ಆದರೆ, ಸ್ಟ್ರೈೀಕಿಂಗ್ ಸರ್ಕಲ್‌ನಲ್ಲಿ ರಕ್ಷಣಾತ್ಮಕ ಆಟದಲ್ಲಿ ತಪ್ಪೆಸಗಿದ ಭಾರತ ಎದುರಾಳಿ ಉರುಗ್ವೆಗೆ ಗೋಲು ಬಿಟ್ಟುಕೊಟ್ಟಿತು. 54ನೆ ನಿಮಿಷದಲ್ಲಿ ಪೆನಾಲ್ಟಿ ಕಾರ್ನರ್‌ನ್ನು ಗೋಲಾಗಿ ಪರಿವರ್ತಿಸಲು ಯಶಸ್ವಿಯಾದ ಉರುಗ್ವೆಯ ಮ್ಯಾನುಯೆಲ್ ವಿಲಾರ್ 2-2 ರಿಂದ ಸಮಬಲ ಸಾಧಿಸಲು ನೆರವಾದರು.
ಅಂತಿಮ ಆರು ನಿಮಿಷದಲ್ಲಿ ಭಾರತೀಯ ಫಾರ್ವರ್ಡ್ ಆಟಗಾರ್ತಿಯರು ಎದುರಾಳಿಯ ಸ್ಟ್ರೈಕಿಂಗ್ ಸರ್ಕಲ್‌ಗೆ ಪ್ರವೇಶಿಸಲು ಯತ್ನಿಸಿದರೂ ಗೋಲು ಬಾರಿಸಲು ವಿಫಲರಾದರು. ಪಂದ್ಯ ನಿಗದಿತ ಸಮಯದಲ್ಲಿ 2-2 ರಿಂದ ಕೊನೆಗೊಂಡಿತು.







