ಗೃಹಬಳಕೆ ಎಲ್‌ಪಿಜಿ ಬೆಲೆಯಲ್ಲಿ 5.57 ರೂ.ಏರಿಕೆ

ಹೊಸದಿಲ್ಲಿ,ಎ.2: ಗೃಹಬಳಕೆ ಅಡುಗೆ ಅನಿಲದ ಬೆಲೆಯನ್ನು ಪ್ರತಿ ಸಿಲಿಂಡರ್‌ಗೆ 5.57 ರೂ.ಹೆಚ್ಚಿಸಲಾಗಿದ್ದು, ಸಬ್ಸಿಡಿರಹಿತ ಅಡುಗೆ ಅನಿಲದ ಬೆಲೆಯನ್ನು ಪ್ರತಿ ಸಿಲಿಂಡರ್‌ಗೆ 14.50 ರೂ.ಕಡಿತಗೊಳಿಸಲಾಗಿದೆ. ಇದೇ ವೇಳೆ ಕಳೆದೆರಡು ತಿಂಗಳು ಗಳಿಂದ ಹೆಚ್ಚುತ್ತಲೇ ಇದ್ದ ವಿಮಾನ ಇಂಧನ(ಎಟಿಎಫ್)ದ ಬೆಲೆಯಲ್ಲಿ ಶೇ.5.1ರಷ್ಟು ಇಳಿಕೆಯನ್ನು ಮಾಡಲಾಗಿದೆ.
ತೈಲ ಮಾರಾಟ ಸಂಸ್ಥೆಗಳು 14.2 ಕೆ.ಜಿ.ತೂಕದ ಗೃಹಬಳಕೆ ಎಲ್‌ಪಿಜಿ ಸಿಲಿಂಡರ್ ಬೆಲೆಯನ್ನು 440.50 ರೂ.ಗೆ ಹೆಚ್ಚಿಸಿದ್ದು, ಪಂಚರಾಜ್ಯಗಳಲ್ಲಿ ವಿಧಾನಸಭಾ ಚುನಾವಣೆ ಗಳ ಹಿನ್ನೆಲೆಯಲ್ಲಿ ಫೆ.1 ಮತ್ತು ಮಾ.1ರಂದು ಇಂಧನ ಬೆಲೆಗಳ ಪರಿಷ್ಕರಣೆ ಸಂದರ್ಭದಲ್ಲಿ ಇದರ ಬೆಲೆಯಲ್ಲಿ ಯಾವುದೇ ಗಮನಾರ್ಹ ಏರಿಕೆ ಮಾಡಲಾಗಿ ರಲಿಲ್ಲ. ಅದಕ್ಕೂ ಮುನ್ನ ಪ್ರತಿ ತಿಂಗಳು ಬೆಲೆಯನ್ನು ಅಲ್ಪ ಪ್ರಮಾಣದಲ್ಲಿ ಹೆಚ್ಚಿಸುವ ಮೂಲಕ ಸಬ್ಸಿಡಿ ಮೊತ್ತವನ್ನು ತಗ್ಗಿಸುವ ಸರಕಾರದ ನಿರ್ಧಾರಕ್ಕನುಗುಣವಾಗಿ ಗೃಹಬಳಕೆ ಎಲ್‌ಪಿಜಿ ಬೆಲೆಯನ್ನು ಎಂಟು ತಿಂಗಳ ಕಾಲ ಪ್ರತಿ ತಿಂಗಳೂ ಸುಮಾರು ಎರಡು ರೂ.ಗಳಷ್ಟು ಹೆಚ್ಚಿಸಲಾಗಿತ್ತು.
ಸಬ್ಸಿಡಿರಹಿತ ಎಲ್‌ಪಿಜಿ ಬೆಲೆಯನ್ನು ಈಗ 14.2 ಕೆಜಿ ತೂಕದ ಪ್ರತಿ ಸಿಲಿಂಡರ್‌ಗೆ 737.50 ರೂ.ನಿಂದ 723 ರೂ.ಗೆ ತಗ್ಗಿಸಲಾಗಿದೆ. ಮಾ.1ರಂದು ಇದರ ಬೆಲೆಯಲ್ಲಿ 86 ರೂ.ಗಳಷ್ಟು ತೀವ್ರ ಏರಿಕೆಯನ್ನು ಮಾಡಲಾಗಿತ್ತು. ಅದಕ್ಕೂ ಮುನ್ನ ಫೆ.1ರಂದು 66.5 ರೂ.ಹೆಚ್ಚಿಸಲಾಗಿತ್ತು.
ಎಟಿಎಫ್ ಬೆಲೆಯನ್ನು ಪ್ರತಿ ಸಾವಿರ ಲೀ.ಗೆ 2811.38 ರೂ.ಗಳಷ್ಟು ಕಡಿತಗೊಳಿ ಸಲಾಗಿದ್ದು, ಎ.1ರಿಂದ ಪ್ರತಿ ಕಿ.ಲೀ.ಗೆ 51,428 ರೂ.ನಂತೆ ಮಾರಾಟವಾಗುತ್ತಿದೆ.