58 ವರ್ಷಗಳ ಹಿಂದೆ ದಲಾಯಿ ಲಾಮಾರನ್ನು ಭಾರತಕ್ಕೆ ಬರಮಾಡಿಕೊಂಡಿದ್ದ ಹವಿಲ್ದಾರ್ ದಾಸ್

ನರೇನ್ ದಾಸ್
ಗುವಾಹಟಿ,ಎ.2: ಟಿಬೆಟಿಯನ್ನರ ಆಧ್ಯಾತ್ಮಿಕ ಗುರು ದಲಾಯಿ ಲಾಮಾ ಅವರು 58 ವರ್ಷಗಳ ಹಿಂದೆ ಜೀವದ ಹಂಗನ್ನು ತೊರೆದು ಟಿಬೆಟ್ನಿಂದ ಪರಾರಿಯಾಗಿದ್ದಾಗ ಅವರನ್ನು ಮೊಟ್ಟಮೊದಲು ಭಾರತದ ನೆಲದೊಳಗೆ ಸ್ವಾಗತ ಕೋರಿದ್ದ ಏಳು ಭಾರತೀಯ ಯೋಧರ ಪೈಕಿ ಸದ್ಯಕ್ಕೆ ಗೊತ್ತಿರುವಂತೆ ಓರ್ವರು ಮಾತ್ರ ಬದುಕುಳಿದಿದ್ದಾರೆ. ಅವರೇ ಅಸ್ಸಾಂ ರೈಫಲ್ಸ್ನ ನಿವೃತ್ತ ಹವಿಲ್ದಾರ್ ನರೇನ್ ದಾಸ್(79).
ದಾಸ್ ಆಗ ರೈಫಲ್ಮನ್ ಆಗಿದ್ದರು. ಸೆಕ್ಷನ್ ಕಮಾಂಡರ್ ನಾಯ್ಕ ದೇಬು ಸಿಂಗ್ ಗುರುಂಗ್ ನೇತೃತ್ವದ ದಾಸ್ ಮತ್ತು ಅವರ ಐವರು ಸಹೋದ್ಯೋಗಿಗಳ ತಂಡಕ್ಕೆ ವಿಶೇಷ ಅತಿಥಿಯನ್ನು ಬರಮಾಡಿಕೊಳ್ಳಲು ಅಂತರರಾಷ್ಟ್ರೀಯ ಗಡಿಗೆ ತೆರಳುವಂತೆ ಮತ್ತು ಆ ವಿಶೇಷ ಅತಿಥಿಯನ್ನು ಭಾರತದ ತವಾಂಗ್ಗೆ ಸುರಕ್ಷಿತವಾಗಿ ಕರೆತರುವಂತೆ ಆದೇಶಿಸಲಾಗಿತ್ತು.
ನಾವು 303 ರೈಫಲ್ಗಳೊಂದಿಗೆ ಸಜ್ಜಿತರಾಗಿದ್ದೆವು. ದಲಾಯಿ ಲಾಮಾ ಕುದುರೆಯ ಮೇಲೆ ಕುಳಿತುಕೊಂಡು ಸಾಗುತ್ತಿದ್ದರೆ, ನಾವು ಕಾಲ್ನಡಿಗೆಯಲ್ಲಿ ಅವರಿಗೆ ಬೆಂಗಾವಲು ನೀಡಿದ್ದೆವು. ಆಗ ಭಾರತದ ಗಡಿಗೆ ಟಿಬೆಟ್ ಹೊಂದಿಕೊಂಡಿತ್ತೇ ಹೊರತು ಚೀನಾ ಅಲ್ಲ, ಹೀಗಾಗಿ ಆ ವೇಳೆ ಆ ಪ್ರದೇಶದಲ್ಲಿ ನಮಗೆ ಚೀನಿಯರು ಎದುರಾಗಿರಲಿಲ್ಲ ಎಂದು ರವಿವಾರ ಲಾಮಾರನ್ನು ಭೇಟಿಯಾಗಲು ಇಲ್ಲಿಗೆ ಆಗಮಿಸಿದ್ದ ದಾಸ್ ಸುದ್ದಿಗಾರರಿಗೆ ತಿಳಿಸಿದರು.
ಅಂದಿನ ಐತಿಹಾಸಿಕ ಪಯಣದಲ್ಲಿ ತನ್ನೊಂದಿಗಿದ್ದ ಇಬ್ಬರು ಸಹೋದ್ಯೋಗಿಗಳು 1962ರಲ್ಲಿ ಚೀನಾ ವಿರುದ್ಧ ಯುದ್ಧದಲ್ಲಿ ಹುತಾತ್ಮರಾಗಿದ್ದಾರೆ ಎಂದು ಅವರು ನೆನೆಸಿಕೊಂಡರು.







