ಬೇಸಿಗೆಯ ತಾಪದಿಂದ ರಕ್ಷಿಸಿಕೊಳ್ಳಲು ಆರೋಗ್ಯ ಇಲಾಖೆ ಸೂಚನೆ

ಬೆಂಗಳೂರು, ಎ.2: ರಾಜ್ಯದಲ್ಲಿ ಬೇಸಿನ ತಾಪಮಾನ ಹೆಚ್ಚುತ್ತಿರುವುದರಿಂದ ಸಾರ್ವಜನಿಕರು ಆರೋಗ್ಯಕ್ಕೆ ಸಂಬಂಧಿಸಿದಂತೆ ಅಗತ್ಯ ಮುಂಜಾಗ್ರತೆ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಜಿಲ್ಲಾ, ತಾಲೂಕು ವೈದ್ಯಾಧಿಕಾರಿಗಳಿಗೆ ಎಂದು ಆರೋಗ್ಯ ನಿರ್ದೇಶನ ನೀಡಿದೆ.
ಬೇಸಿಗೆಯಲ್ಲಿ ದೇಹದಲ್ಲಿರುವ ನೀರಿನ ಅಂಶ ಬೆವರಿನಿಂದಲೇ ಸಾಕಷ್ಟು ಪ್ರಮಾಣದಲ್ಲಿ ಖಾಲಿಯಾಗುತ್ತದೆ. ಹೀಗಾಗಿ ಅರ್ಧಗಂಟೆಗೊಮ್ಮೆ ಉಪ್ಪು-ಸಕ್ಕರೆ ಮಿಶ್ರಿತ ನೀರು, ಹಣ್ಣಿನ ರಸ, ಎಳೆನೀರು ಕುಡಿಯುವುದರಿಂದ ದೇಹದಲ್ಲಿ ನೀರಿನ ಅಂಶ ಸದಾ ಇರುವಂತೆ ನೋಡಿಕೊಳ್ಳುವುದು ಅವಶ್ಯಕ ಎಂದು ಸೂಚಿಸಿದೆ.
ಬೇಸಿಗೆಯ ತಾಪದ ಪರಿಣಾಮ ಕೆಲವು ವ್ಯಕ್ತಿಗಳು ದಿಢೀರನೆ ತೊದಲು ಮಾತು, ಅರ್ಥರಹಿತವಾಗಿ ಬಡಬಡಿಸಲು ಪ್ರಾರಂಭಿಸುತ್ತಾರೆ. ಈ ವೇಳೆ ಆ ವ್ಯಕ್ತಿಯನ್ನು ನೆರಳಿನ ಪ್ರದೇಶಕ್ಕೆ ಸ್ಥಳಾಂತರಿಸಬೇಕು. ಹಣೆ, ಕತ್ತು, ಪಾದಗಳನ್ನು ಒದ್ದೆ ಬಟ್ಟೆಯಿಂದ ಒರೆಸಬೇಕು. ಹಾಗೂ ಸ್ವಲ್ಪ ಸಕ್ಕರೆ-ಉಪ್ಪು ಮಿಶ್ರಿತ ನೀರನ್ನು ಕುಡಿಸಬೇಕು ಎಂದು ಆರೋಗ್ಯ ಇಲಾಖೆ ಹೇಳಿದೆ.
ಬಿಸಿಲ ತಾಪಕ್ಕೆ ವ್ಯಕ್ತಿಗಳ ದೇಹದಲ್ಲಿ ಚರ್ಮ ಕೆಂಪಾಗುವುದು, ಬೆವರಿನ ಪ್ರಮಾಣ ಕಡಿಮೆಯಾಗುವುದು, ದೇಹದ ಉಷ್ಣತೆ ಹೆಚ್ಚಾಗುವುದು ಹಾಗೂ ದೀರ್ಘವಾದ ತೀವ್ರ ಉಸಿರಾಟವಿದ್ದಲ್ಲಿ ಕೂಡಲೆ ತಣ್ಣಗಿನ ನೀರನ್ನು ವ್ಯಕ್ತಿಯ ಮೇಲೆ ಸಿಂಪಡಿಸಬೇಕು. ಕುಡಿಯು ಸ್ವಲ್ಪ ನೀರನ್ನು ನೀಡಿ ವೈದ್ಯರ ಬಳಿ ಕರೆದೊಯ್ಯಬೇಕೆಂದು ಆರೋಗ್ಯ ಇಲಾಖೆ ತಿಳಿಸಿದೆ.
ಕುಡಿಯುವ ನೀರಿನ ಎಲ್ಲ ಮಾದರಿಗಳನ್ನು ಕಡ್ಡಾಯವಾಗಿ ಪರೀಕ್ಷೆಗೆ ಒಳಪಡಿಸಿ, ಕ್ಲೋರಿನೇಷನ್ ಮಾಡಿಸುವುದು. ಆಸ್ಪತ್ರೆಗಳಲ್ಲಿ ಅಗತ್ಯ ಚಿಕಿತ್ಸೆ ಕ್ರಮ ಕೈಗೊಳ್ಳಲು ಹಾಗೂ ಅಗತ್ಯ ಔಷಧಿಗಳನ್ನು ದಾಸ್ತಾನು ಮಾಡಿಕೊಳ್ಳಬೇಕೆಂದು ಇಲಾಖೆ ಅಧಿಕಾರಿಗಳಿಗೆ ನಿರ್ದೇಶಿಸಲಾಗಿದೆ.
ಬಿಸಿಲು ಮತ್ತು ಹೊಲದಲ್ಲಿ ಕೆಲಸ ಮಾಡುವ ಜನರು ಸದಾ ಕೈಗೆಟುಕುವಂತೆ ಕುಡಿಯುವ ನೀರನ್ನು ಇಟ್ಟುಕೊಳ್ಳಬೇಕು. ಸಾಧ್ಯವಾದಷ್ಟು ಸಡಿಲವಾದ ತೆಳು ಬಣ್ಣದ ಹತ್ತಿಯ ಬಟ್ಟೆಯನ್ನು ಧರಿಸಬೇಕು. ಬಿರು ಬಿಸಿಲಿನಿಂದ ಸಾಧ್ಯವಾದಷ್ಟು ದೂರವಿರಿ ಎಂದು ಆರೋಗ್ಯ ಇಲಾಖೆ ಪ್ರಕಟಣೆಯಲ್ಲಿ ಸೂಚಿಸಿದೆ.







