ಕೈವಾಡ ನಡೆದರೆ ಕೆಲಸವನ್ನೇ ನಿಲ್ಲಿಸುವ ನೂತನ ಇವಿಎಂ

ಹೊಸದಿಲ್ಲಿ,ಎ.2: ಯಂತ್ರದಲ್ಲಿ ಹಸ್ತಕ್ಷೇಪ ನಡೆಸಲು ಪ್ರಯತ್ನಿಸಿದರೆ ತಕ್ಷಣವೇ ನಿಷ್ಕ್ರಿಯಗೊಳ್ಳುವ ಮುಂದಿನ ಪೀಳಿಗೆಯ ವಿದ್ಯುನ್ಮಾನ ಮತದಾನ ಯಂತ್ರ (ಇವಿಎಂ) ಗಳನ್ನು ಖರೀದಿಸಲು ಚುನಾವಣಾ ಆಯೋಗವು ಸಜ್ಜಾಗಿದೆ. ಇತ್ತೀಚಿನ ವಿಧಾನಸಭಾ ಚುನಾವಣೆಗಳಲ್ಲಿ ಇವಿಎಂಗಳಲ್ಲಿ ಕೈವಾಡ ನಡೆಸಲಾಗಿತ್ತು ಎಂಬ ಕೆಲವು ರಾಜಕೀಯ ಪಕ್ಷಗಳ ಆರೋಪಗಳ ನಡುವೆಯೇ ಆಯೋಗವು ಈ ಹೆಜ್ಜೆಯನ್ನಿರಿಸಿದೆ.
‘ಎಂ 3’ಮಾದರಿಯ ಇವಿಎಂಗಳು ಯಂತ್ರಗಳಲ್ಲಿ ಸಾಚಾತನ ದೃಢೀಕರಣಕ್ಕೆ ಸ್ವಯಂ ದೋಷನಿರ್ಣಯ ವ್ಯವಸ್ಥೆಯನ್ನೂ ಅಳವಡಿಸಲಾಗಿದೆ. ಸರಕಾರಿ ಸ್ವಾಮ್ಯದ ಉದ್ಯಮ ಗಳಾದ ಇಸಿಐಎಲ್ ಮತ್ತು ಬಿಇಎಲ್ ಈ ನೂತನ ಯಂತ್ರಗಳನ್ನು ಪೂರೈಸಲಿವೆ.
2019ರ ಲೋಕಸಭಾ ಚುನಾವಣೆಗೆ ಒಂದು ವರ್ಷ ಮೊದಲೇ ನೂತನ ಯಂತ್ರಗಳು ಕಾರ್ಯಾರಂಭಗೊಳ್ಳುವ ಸಾಧ್ಯತೆಗಳಿವೆ ಮತ್ತು ಇವುಗಳ ಖರೀದಿಗಾಗಿ ಸಾಗಣೆ ವೆಚ್ಚ ಹಾಗೂ ತೆರಿಗೆಗಳನ್ನು ಹೊರತುಪಡಿಸಿ ಸುಮಾರು 1,940 ಕೋ.ರೂ.ಗಳ ಅಗತ್ಯವಿದೆ ಎಂದು ಕಾನೂನು ಸಚಿವಾಲಯವು ತಿಳಿಸಿದೆ.
2006ಕ್ಕೆ ಮೊದಲು ಖರೀದಿಸಲಾಗಿದ್ದ 9,30,430 ಇವಿಎಂಗಳು ತಮ್ಮ 15 ವರ್ಷಗಳ ಜೀವಿತಾವಧಿಯ ಅಂತ್ಯವನ್ನು ಸಮೀಪಿಸುತ್ತಿರುವುದರಿಂದ ಅವುಗಳನ್ನು ಬದಲಿಸಲು ಚುನಾವಣಾ ಆಯೋಗವು ನಿರ್ಧರಿಸಿದೆ.
2019ರ ಲೋಕಸಭಾ ಚುನಾವಣೆಗೆ ಮುನ್ನ ಹಳೆಯ ಯಂತ್ರಗಳನ್ನು ಹಂತಹಂತವಾಗಿ ತೆಗೆದು ಹಾಕುವಂತಾಗಲು ನೂತನ ಇವಿಎಂಗಳ ಖರೀದಿಗಾಗಿ ಚುನಾವಣಾ ಆಯೋಗಕ್ಕೆ ಹೊಸದಾಗಿ 1,009 ಕೋ.ರೂ.ಬಿಡುಗಡೆ ಮಾಡಲು ಕೇಂದ್ರ ಸಂಪುಟವು ಕಳೆದ ವರ್ಷದ ಡಿ.7ರಂದು ಸಮ್ಮತಿ ನೀಡಿತ್ತು.
ಕಳೆದ ವರ್ಷದ ಜುಲೈನಲ್ಲಿ 2016-17ನೇ ಸಾಲಿನಲ್ಲಿ ಮೊದಲ ಕಂತಿನಲ್ಲಿ 9,200 ಕೋ.ರೂ.ವೆಚ್ಚದಲ್ಲಿ ಸುಮಾರು 14 ಲಕ್ಷ ಹೊಸ ಇವಿಎಂ ಯಂತ್ರಗಳನ್ನು ಖರೀದಿಸುವ ಆಯೋಗದ ಇಂತಹುದೇ ಪ್ರಸ್ತಾವಕ್ಕೆ ಕೇಂದ್ರ ಸಂಪುಟವು ಒಪ್ಪಿಗೆ ನೀಡಿತ್ತು.
ಕಳೆದ ಮೂರು ಹಣಕಾಸು ವರ್ಷಗಳಲ್ಲಿ ಆಯೋಗವು ಹೊಸ ಇವಿಎಂಗಳನ್ನು ಖರೀದಿಸಿಲ್ಲ ಎಂದು ಸಹಾಯಕ ಕಾನೂನು ಸಚಿವ ಪಿ.ಪಿ.ಚೌಧರಿ ಅವರು ಶುಕ್ರವಾರ ರಾಜ್ಯಸಭೆಯಲ್ಲಿ ಲಿಖಿತ ಉತ್ತರದಲ್ಲಿ ತಿಳಿಸಿದ್ದರು.