ಕೇಳಿದ್ದು 4,702ಕೋಟಿ ರೂ., ಕೊಟ್ಟಿದ್ದು 1,782ಕೋಟಿ ರೂ. : ಬರ ಪರಿಹಾರ ವಿತರಣೆಯಲ್ಲಿ ರಾಜ್ಯಕ್ಕೆ ಅನ್ಯಾಯ

ಬೆಂಗಳೂರು, ಎ. 2: ರಾಜ್ಯದ 176 ತಾಲೂಕುಗಳ ಪೈಕಿ 160 ತಾಲೂಕುಗಳಲ್ಲಿ ಭೀಕರ ಸ್ವರೂಪದ ಬರ ಸ್ಥಿತಿ ಆವರಿಸಿದ್ದು, ಕುಡಿಯುವ ನೀರಿಗೂ ತತ್ವಾರ ಸೃಷ್ಟಿಸಿದೆ. ಆದರೆ, ಕೇಂದ್ರ ಬರ ಪರಿಹಾರ ವಿತರಣೆಯಲ್ಲಿಯೂ ಕರ್ನಾಟಕಕ್ಕೆ ಬರೆ ಎಳೆದಿದೆ.
ರಾಜ್ಯ ಸರಕಾರ ರಾಷ್ಟ್ರೀಯ ವಿಪತ್ತು ನಿರ್ವಹಣಾ ನಿಧಿ(ಎನ್‌ಡಿಆರ್‌ಎಫ್) ಮಾರ್ಗಸೂಚಿಯನ್ವಯ ಬರ ಪರಿಸ್ಥಿತಿ ಹಿನ್ನೆಲೆಯಲ್ಲಿ 4,702 ಕೋಟಿ ರೂ. ಪರಿಹಾರ ಕೋರಿ ಕೇಂದ್ರಕ್ಕೆ ಮನವಿ ಸಲ್ಲಿಸಿತ್ತು. ಆದರೆ, ಕೇಂದ್ರ 1,782 ಕೋಟಿ ರೂ.ಗಳನ್ನಷ್ಟೇ ನೀಡುವ ಮೂಲಕ ಅನ್ಯಾಯ ಮಾಡಿದೆ ಎಂಬ ಆರೋಪ ಕೇಳಿ ಬಂದಿದೆ.
ಈ ಹಿಂದೆ 450 ಕೋಟಿ ರೂ.ಬಿಡುಗಡೆ ಮಾಡಿದ್ದ ಕೇಂದ್ರ ಸರಕಾರ, ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ನಿಧಿಯಲ್ಲಿ ಬಾಕಿ ಉಳಿದಿದ್ದ 96.92 ಕೋಟಿ ರೂ.ಹಾಗೂ ಇದೀಗ 1,235.52 ಕೋಟಿ ರೂ.ಗಳನ್ನು ಬಿಡುಗಡೆ ಮಾಡಿದೆ. ರಾಜ್ಯ ಸರಕಾರ ಕೇಳಿದ 4,702 ಕೋಟಿ ರೂ.ಗಳ ಅರ್ಧದಷ್ಟು ಮೊತ್ತದ ಪರಿಹಾರವನ್ನು ಕೇಂದ್ರ ಸರಕಾರ ನೀಡಿಲ್ಲವೆಂಬುದು ಗಮನಾರ್ಹ.
ರಾಜ್ಯದಲ್ಲಿನ ಬರ ಪರಿಸ್ಥಿತಿ ಹಿನ್ನೆಲೆಯಲ್ಲಿ ಕೇಂದ್ರ ಅಧ್ಯಯನ ತಂಡ ಖುದ್ದು ಪರಿಶೀಲನೆ ನಡೆಸಿ 1,782 ರೂ.ಗಳ ಪರಿಹಾರ ಬಿಡುಗಡೆ ಮಾಡುವಂತೆ ಶಿಫಾರಸ್ಸು ಮಾಡಿತ್ತು. ಈ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ವಪಕ್ಷ ನಿಯೋಗ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿ ಮನವಿಯನ್ನು ಸಲ್ಲಿಸಿತ್ತು.
ರಾಜ್ಯದಲ್ಲಿ ಕಳೆದ 40 ವರ್ಷಗಳಲ್ಲೆ ಅತ್ಯಂತ ಭೀಕರ ಸ್ವರೂಪದ ಬರ ಆವರಿಸಿದ್ದು, 17 ಸಾವಿರ ಕೋಟಿ ರೂ.ಗಳಿಗೂ ಅಧಿಕ ಮೊತ್ತ ಬೆಳೆ ನಷ್ಟ ಸಂಭವಿಸಿದೆ. ಎನ್‌ಡಿಆರ್‌ಎಫ್ ಮಾರ್ಗಸೂಚಿ ಅನ್ವಯ 4,702 ಕೋಟಿ ರೂ.ಪರಿಹಾರವನ್ನು ಕೇಂದ್ರ ಸರಕಾರ ನೀಡಬೇಕಿತ್ತು.







