ಮುಖ್ಯಶಿಕ್ಷಕನ ಬರ್ಬರ ಹತ್ಯೆ ಪ್ರಕರಣ: ಹೆಂಡತಿ, ಮಗಳಿಂದಲೇ ಕೊಲೆಗೆ ಸುಫಾರಿ

ಮಂಡ್ಯ, ಎ.2: ಮದ್ದೂರು ತಾಲೂಕು ಬಿದರಹೊಸಹಳ್ಳಿ ಸರಕಾರಿ ಪ್ರಾಥಮಿಕ ಶಾಲೆ ಮುಖ್ಯ ಶಿಕ್ಷಕ ಶಶಿಭೂಷಣ್ ಕೊಲೆ ರಹಸ್ಯವನ್ನು ಪೊಲೀಸರು ಬೇಧಿಸಿದ್ದಾರೆ.
ಕಳೆದ ಮಾರ್ಚ್ 31 ರಂದು ಬೆಳಗ್ಗೆ ಬೈಕ್‌ನಲ್ಲಿ ತೆರಳುತ್ತಿದ್ದ ಶಶಿಭೂಷಣ್ ಅವರನ್ನು ಅರೆಚಾಕನಹಳ್ಳಿ ಬಳಿ ದುಷ್ಕರ್ಮಿಗಳು ಅಡ್ಡಗಟ್ಟಿ ಹಾಡಹಗಲೇ ಕತ್ತುಕೊಯ್ದು ಬರ್ಬರವಾಗಿ ಹತ್ಯೆ ಮಾಡಿದ್ದರು.
ಕೆ.ಎಂ.ದೊಡ್ಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದರು. ಇದೀಗ, ಪ್ರಕರಣವನ್ನು ಬೇಧಿಸಿದ್ದು, ಶಶಿಭೂಷಣ್ ಅವರ ಪತ್ನಿ ಮತ್ತು ಪುತ್ರಿಯೇ ಸುಫಾರಿಕೊಟ್ಟು ಕೊಲೆ ಮಾಡಿಸಿದ್ದಾರೆ ಎನ್ನಲಾಗಿದೆ.
ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಪತ್ನಿ ಶಾಂತಮ್ಮ ಮತ್ತು ಪುತ್ರಿ ನವ್ಯಶ್ರೀ ದುಷ್ಕರ್ಮಿಗಳಿಗೆ 5 ಲಕ್ಷ ರೂ. ಸುಫಾರಿ ಕೊಟ್ಟು ಶಶಿಭೂಷಣ್ ಅವರನ್ನು ಕೊಲೆ ಮಾಡಿಸಿರುವುದು ವಿಚಾರಣೆಯಿಂದ ತಿಳಿದು ಬಂದಿದೆ ಎಂದು ಎಸ್ಪಿ ಸುಧೀರ್‌ಕುಮಾರ್ ರೆಡ್ಡಿ ತಿಳಿಸಿದ್ದಾರೆ.
ಶಾಂತಮ್ಮ, ನವ್ಯಶ್ರೀ ಅವರ ಮೊಬೈಲ್‌ನ ವಾಟ್ಸ್‌ಪ್ ಮೆಸೇಜ್ ಆಧರಿಸಿ, ಅವರನ್ನು ಬಂಧಿಸಿ ವಿಚಾರಣೆಗೊಳಪಡಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಪರಾರಿಯಾಗಿರುವ ಕೊಲೆಗಾರರ ಬಂಧನಕ್ಕೆ ಬಲೆ ಬೀಸಲಾಗಿದೆ ಎಂದು ರೆಡ್ಡಿ ಸುದ್ದಿಗಾರರಿಗೆ ಹೇಳಿದರು.
ಪತ್ನಿ ಶಾಂತಮ್ಮ ಮತ್ತು ಪುತ್ರಿ ನವ್ಯಶ್ರೀ ಅವರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ ಎಂದು ತಿಳಿದು ಬಂದಿದೆ.







