ಯುವಕನಿಂದ ಪ್ರೀತಿ ನಿರಾಕರಣೆ: ಯುವತಿ ಆತ್ಮಹತ್ಯೆ

ಕಡೂರು, ಎ.2: ಪ್ರೀತಿ ನಿರಾಕರಿಸಿದ ಹಿನ್ನೆಲೆಯಲ್ಲಿ ಯುವತಿಯೋರ್ವಳು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಲೂಕಿನ ಸೋಮನಹಳ್ಳಿ ಎಂಬಲ್ಲಿ ನಡೆದಿದೆ.
ರಮೇಶ್ ನಾಯ್ಕ ಎಂಬವರ ಪುತ್ರಿ ನಂದಿನಿಬಾಯಿ(22) ಎಂಬಾಕೆ ಆತ್ಮಹತ್ಯೆಗೆ ಶರಣಾದ ಯುವತಿ. ಈಕೆ ಪ್ರೀತಿಯನು ನಿರಾಕರಿಸಿದ ವ್ಯಕ್ತಿ ಸೀತಾಪುರ ಗ್ರಾಮದ ಕೃಷ್ಣಾನಾಯ್ಕ ಎಂಬವರ ಪುತ್ರ ಆನಂದನಾಯ್ಕ(27) ತಲೆಮರೆಸಿಕೊಂಡಿದ್ದಾನೆ.
ಸೋಮನಹಳ್ಳಿಯ ನಂದಿನಿ ಬಾಯಿ ಬೆಂಗಳೂರಿನ ಗಾರ್ಮೆಂಟ್ ಪ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದಳು. ಕಳೆದ 6 ವರ್ಷಗಳಿಂದ ಆನಂದನಾಯ್ಕನನ್ನು ಪ್ರೀತಿಸುತ್ತಿದ್ದಳು. ಆನಂದನಾಯ್ಕ ಇತ್ತೀಚೆಗೆ ಕೇಂದ್ರ ಮೀಸಲು ಸಶಸ್ತ್ರ ಪಡೆಗೆ ಪೇದೆಯಾಗಿ ಆಯ್ಕೆಯಾಗಿದ್ದ.
ಕೆಲವು ತಿಂಗಳಿನಿಂದ ನಂದಿನಿಬಾಯಿಯನ್ನು ಪ್ರೀತಿಸುವುದಲ್ಲ ಎಂದು ಹೇಳಿಕೊಂಡು ತಿರುಗಾಡಿದ್ದ. ಬೇರೊಂದು ಯುವತಿಯನ್ನು ನಿಶ್ಚಿತಾರ್ಥ ಮಾಡಿಕೊಂಡಿದ್ದು, ಆಕೆಯನ್ನೇ ಮದುವೆಯಾಗುವುದಾಗಿ ಹೇಳಿಕೊಂಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಇದೇ ವಿಷಯದಲ್ಲಿ ಗುರುವಾರ ಮಧ್ಯಾಹ್ನ ಆನಂದ ನಾಯ್ಕ ಮತ್ತು ನಂದಿನಿ ನಡುವೆ ಜಗಳವಾಗಿತ್ತು. ಈ ವೇಳೆ ತಾನು ವಿಷ ಕುಡಿದು ಸಾಯುವುದಾಗಿ ನಂದಿನಿಬಾಯಿ ಹೇಳಿಕೊಂಡಿದ್ದಳು. ಅದರಂತೆ ವಿಷ ಸೇವಿಸಿದ್ದರಿಂದ ಆನಂದನಾಯ್ಕೆನೇ ಆಕೆಯನ್ನು ಆಸ್ಪತ್ರೆಗೆ ಸೇರಿಸಿದ್ದನು. ಆದರೆ ಕಡೂರು ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನಂತರ ಚಿಕ್ಕಮಗಳೂರಿಗೆ ಕಳುಹಿಸಲಾಗಿದ್ದು, ಮಾರ್ಗ ಮದ್ಯೆ ಆಕೆ ಮೃತಪಟ್ಟಿದ್ದಾಳೆ ಎನ್ನಲಾಗಿದೆ.
ಘಟನೆ ಕುರಿತು ಕಡೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.







