ಹೆಣ್ಣು ಮಕ್ಕಳ ಶಿಕ್ಷಣದಿಂದ ಸಮುದಾಯದ ಅಭಿವೃದ್ಧಿ ಸಾಧ್ಯ: ವಜುಬಾಯಿ ವಾಲಾ

ಬೆಂಗಳೂರು, ಎ.2: ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡುವ ಮೂಲಕ ಶೋಷಣೆಯ ಸುಳಿಗೆ ಸಿಲುಕಿರುವ ಬಂಜಾರ ಸಮುದಾಯ ತನ್ನ ಸರ್ವತೋಮುಖ ಅಭಿವೃದ್ಧಿಯತ್ತ ಸಾಗಬೇಕು ಎಂದು ರಾಜ್ಯಪಾಲ ವಜುಬಾಯಿ ವಾಲಾ ಇಂದಿಲ್ಲಿ ಆಶಿಸಿದ್ದಾರೆ.
ರವಿವಾರ ಅಖಿಲ ಭಾರತ ಬಂಜಾರ ಸಮುದಾಯದ ಸಂಘದ ವತಿಯಿಂದ ನಗರದ ಅಂಬೇಡ್ಕರ್ ಭವನದಲ್ಲಿ ಆಯೋಜಿಸಿದ್ದ ಬಂಜಾರ ಸಮುದಾಯದ ಹಿರಿಯ ರಾಜಕಾರಣಿ ಡಾ.ಎಂ.ಶಂಕರ್ ನಾಯ್ಕ ರವರ 70ನೆ ಸಂಸ್ಮರಣ ದಿನಾಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಬಂಜಾರ ಸಮುದಾಯದ ಸಾಮಾಜಿಕ, ಆರ್ಥಿಕ ಹಾಗೂ ರಾಜಕೀಯವಾಗಿ ಸಾಕಷ್ಟು ಹಿಂದುಳಿದಿದೆ. ಹೀಗಾಗಿ ಸಮುದಾಯದ ಸುಶಿಕ್ಷಿತ ವರ್ಗ ಸಭೆ, ಸಮಾರಂಭಗಳನ್ನು ಮಾಡುವುದನ್ನು ಬಿಟ್ಟು ತಮ್ಮ ಸಮುದಾಯಗಳು ವಾಸಿಸುವ ತಾಂಡಾಗಳಿಗೆ ತೆರಳಿ ಹೆಣ್ಣು ಮಕ್ಕಳ ಶಿಕ್ಷಣದ ಕುರಿತು ಜಾಗೃತಿ ಮೂಡಿಸಬೇಕಾದ ಅಗತ್ಯವಿದೆ ಎಂದು ಅವರು ಹೇಳಿದರು.
ಕೇವಲ ಭಾಣಗಳಿಂದ ಏನನ್ನು ಸಾಧಿಸಲಾಗುವುದಿಲ್ಲ ಎಂಬ ಸ್ಪಷ್ಟತೆ ಇರಬೇಕು. ಸಮುದಾಯದ ಯುವಕ, ಯುವತಿಯರನ್ನು ಸಂಘಟಿಸಿ, ಸಮುದಾಯದ ಏಳ್ಗೆಗೆ ರೂಪರೇಷಗಳನ್ನು ರೂಪಿಸುವಂತಹ ಕೆಲಸವಾಗಬೇಕು. ಈ ನಿಟ್ಟಿನಲ್ಲಿ ಸಮುದಾಯದ ಹಿರಿಯರು ಯೋಜನೆಯನ್ನು ರೂಪಿಸಬೇಕಾದ ಅಗತ್ಯವಿದೆ ಎಂದು ಅವರು ಹೇಳಿದರು.
ಕಾರ್ಯಕ್ರಮದಲ್ಲಿ ಶಾಸಕ ಪಿ.ರಾಜೀವ್, ಮಾಜಿ ಶಾಸಕಿ ಜಲಜಾ ನಾಯ್ಕ, ಅಖಿಲ ಭಾರತ ಬಂಜಾರ ಸಮುದಾಯದ ಅಧ್ಯಕ್ಷ ರಾಜು ನಾಯ್ಕ, ಕಾರ್ಯನಿರ್ವಾಹಕ ಅಧ್ಯಕ್ಷ ಅಮರ್ ಸಿಂಗ್ ಮತ್ತಿತರರಿದ್ದರು.







