ಯು.ಟಿ.ಫರೀದ್ ಫೌಂಡೇಶನ್‌ನಿಂದ ವೈದ್ಯಕೀಯ ಶಿಬಿರ

ಮಂಗಳೂರು, ಎ.2: ಯು.ಟಿ.ಫರೀದ್ ಫೌಂಡೇಶನ್ ಮೇಲಂಗಡಿ ಘಟಕದ ವತಿಯಿಂದ ದೇರಳಕಟ್ಟೆ ಕಣಚೂರು ವೈದ್ಯಕೀಯ ಕಾಲೇಜು ಮತ್ತು ಪ್ರಸಾದ್ ನೇತ್ರಾಲಯದ ಸಹಯೋಗದಲ್ಲಿ ರವಿವಾರ ದರ್ಗಾ ಮುಂಭಾಗ ಉಚಿತ ವೈದ್ಯಕೀಯ ತಪಾಸಣಾ ಶಿಬಿರ ನಡೆಯಿತು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಉಳ್ಳಾಲ ದರ್ಗಾ ಅಧ್ಯಕ್ಷ ಹಾಜಿ ಅಬ್ದುರ್ರಶೀದ್ ತಮ್ಮ ಮೇಲೆ ನಂಬಿಕೆಯಿಟ್ಟು ಚಿಕಿತ್ಸೆಗೆ ಬರುವ ರೋಗಿಗಳ ಮೇಲೆ ಕಾಳಜಿ, ಹಾಗೂ ಕೆಲಸ ನೀಡಿದ ಸಂಸ್ಥೆಯ ಮೇಲೆ ಸಿಬ್ಬಂದಿ ವರ್ಗ ಹಾಗೂ ವೈದ್ಯರಿಗೆ ಪ್ರೀತಿಯಿದ್ದಲ್ಲಿ ಯಾವುದೇ ಸಂಸ್ಥೆ ಕೀರ್ತಿಯ ಉತ್ತಂಗಕ್ಕೇರಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.
ಮೇಲಂಗಡಿ ಮುಹಿಯುದ್ದೀನ್ ಜುಮಾ ಮಸೀದಿಯ ಖತೀಬ್ ಯೂಸುಫ್ ಮಿಸ್ಬಾಹಿ ದುಆ ನೆರವೇರಿಸಿದರು. ಪೆರ್ಮನ್ನೂರು ಸಂತ ಸೆಬಸ್ಟಿಯನ್ ಚರ್ಚ್‌ನ ಪ್ರಧಾನ ಧರ್ಮಗುರು ರೆ.ಎಡ್ವಿನ್ ಸೆಲಿನ್ ಮಸ್ಕರೇನಸ್, ಕಣಚೂರು ವೈದ್ಯಕೀಯ ಕಾಲೇಜಿನ ಆಡಳಿತ ನಿರ್ದೇಶಕ ಅಬ್ದುರ್ರಹ್ಮಾನ್, ಮೇಲಂಗಡಿ ಮಸೀದಿಯ ಅಧ್ಯಕ್ಷ ಫಾರೂಕ್ ಉಳ್ಳಾಲ್, ಉಳ್ಳಾಲ ನಗರಸಭಾ ಅಧ್ಯಕ್ಷ ಹುಸೈನ್ ಕುಂಞಿಮೋನು ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ಉಚಿತ ಆರೋಗ್ಯ ಕಾರ್ಡ್ ಮತ್ತು ಕಾರ್ಮಿಕ ಕಾರ್ಡ್ ವಿತರಣೆ, ಆರ್ಥಿಕವಾಗಿ ಹಿಂದುಳಿದವರಿಗೆ ಉಚಿತ ಹೆರಿಗೆ ವ್ಯವಸ್ಥೆ ಮತ್ತು ನಗದು, ಕಣ್ಣು ಪರೀಕ್ಷೆ, ಫಿಸಿಯೋಥೆರಪಿ ಮತ್ತು ತಜ್ಞರಿಂದ ಆರೋಗ್ಯ ತಪಾಸಣೆ, ಇಬ್ಬರು ರೋಗಿಗಳಿಗೆ ಸಹಾಯಧನ ಹಾಗೂ ಮೂವರು ಮಹಿಳೆಯರಿಗೆ ಹೊಲಿಗೆ ಯಂತ್ರ ವಿತರಿಸಲಾಯಿತು.
ಉಳ್ಳಾಲ ನಗರಸಭಾ ಸ್ಥಾಯಿ ಸಮಿತಿ ಅಧ್ಯಕ್ಷ ಉಸ್ಮಾನ್ ಕಲ್ಲಾಪು, ಸದಸ್ಯ ಬಾಝಿಲ್ ಡಿಸೋಜ, ಸರ್ವಧರ್ಮ ಸಮನ್ವಯ ಸಮಿತಿಯ ಸಂಚಾಲಕ ಪಿಯೂಸ್ ಮೊಂತೆರೊ, ಯು.ಟಿ.ಫರೀದ್ ಫೌಂಡೇಶನ್‌ನ ಡಾ.ಯು.ಟಿ.ಇಫ್ತಿಕಾರ್, ಪ್ರಸಾದ್ ನೇತ್ರಾಯದ ಡಾ.ವಿಕ್ರಂ ಜೈನ್, ಡಾ.ರೇಖಲತಾ ಉಪಸ್ಥಿತರಿದ್ದರು. ಕಾರ್ಯಕ್ರಮ ಸಂಯೋಜಕ, ನಗರಸಭಾ ಸದಸ್ಯ ಮುಸ್ತಫಾ ಅಬ್ದುಲ್ಲಾ ಸ್ವಾಗತಿಸಿದರು. ರೋಹಿತ್ ಉಳ್ಳಾಲ್ ಕಾರ್ಯಕ್ರಮ ನಿರೂಪಿಸಿದರು.







