ಆಧುನಿಕ ತಂತ್ರಜ್ಞಾನ ದೇಶದ ಪ್ರಗತಿಗೆ ಪೂರಕ ಸಾಧನ: ಆಶಿಶ್ ಕುಮಾರ್ ಚೌಹಾಣ್
.jpg)
ಮಣಿಪಾಲ, ಎ.2: ಆಧುನಿಕ ತಂತ್ರಜ್ಞಾನದ ಅಲೆಗಳು ಸಮಾಜ, ದೇಶ, ಜಗತ್ತನ್ನು ಪ್ರಗತಿಯತ್ತ ಕೊಂಡೊಯ್ಯುವ ಪೂರಕ ಸಾಧನವಾಗಿದೆ ಎಂದು ಮುಂಬೈ ಷೇರು ವಿನಿಮಯದ ಆಡಳಿತ ನಿರ್ದೇಶಕ ಹಾಗೂ ಮುಖ್ಯಕಾರ್ಯ ನಿರ್ವಹಣಾಧಿಕಾರಿ ಆಶಿಶ್ ಕುಮಾರ್ ಚೌಹಾಣ್ ಹೇಳಿದ್ದಾರೆ.
ಮಣಿಪಾಲ ಕೆಎಂಸಿ ಗ್ರೀನ್ಸ್‌ನಲ್ಲಿರವಿವಾರ ಆಯೋಜಿಸಲಾದ ಮಣಿಪಾಲ ಟಿ.ಎ.ಪೈ ಮ್ಯಾನೇಜ್‌ಮೆಂಟ್ ಇನ್ಸಿಟ್ಯೂಟ್ ಇದರ 31ನೆ ವಾರ್ಷಿಕ ಘಟಿಕೋತ್ಸವದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡುತಿದ್ದರು. ಇಂದು ಜಗತ್ತಿಗೆ ತಂತ್ರಜ್ಞಾನ ಅತಿಅಗತ್ಯವಿದ್ದು, ದೇಶಗಳ ಪ್ರಗತಿಯಲ್ಲಿ ತಂತ್ರಜ್ಞಾನ ಪಾತ್ರ ಬಹಳ ಪ್ರಾಮುಖ್ಯವಾಗಿದೆ. ಭಾರತ ದೇಶದಲ್ಲಿ ಕಳೆದ ಕೆಲವು ವರ್ಷಗಳಿಂದ ಆಗುತ್ತಿರುವ ಬದಲಾವಣೆಗಳಿಗೆ ತಂತ್ರಜ್ಞಾನದ ಪ್ರಭಾವವೇ ಕಾರಣ. ತಂತ್ರಜ್ಞಾನದಲ್ಲಿ ಕ್ರಿಯಾತ್ಮಕವಾಗಿ ಭಾರತ ಮುಂದುವರಿಯುತ್ತಿದೆ ಎಂದು ಅವರು ತಿಳಿಸಿದರು.
ಅಮೆರಿಕಾ, ಜಪಾನ್, ಚೀನಾ ದೇಶಗಳು ವೃದ್ಧರ ರಾಷ್ಟ್ರವಾಗುತ್ತಿದೆ. 2050ರ ವೇಳೆ ಭಾರತೀಯರ ಸರಸಾರಿ ವಯಸ್ಸು 40 ಆಗುತ್ತದೆ. ಈ ಅವಧಿಯಲ್ಲಿ ಭಾರತ ಯುವ ರಾಷ್ಟ್ರವಾಗಲಿದೆ. ಆ ಸಂದರ್ಭದಲ್ಲಿ ಜಗತ್ತಿನ ಎಲ್ಲ ಅವಕಾಶ ಗಳನ್ನು ಬಾಚಿಕೊಳ್ಳಬೇಕಾಗಿದೆ ಎಂದ ಅವರು, ಭಾರತವು ನಿರುದ್ಯೋಗ ಸಮಸ್ಯೆ ನಿವಾರಿಸಲು ವಾರ್ಷಿಕ 1.5ಕೋಟಿ ಉದ್ಯೋಗ ಸೃಷ್ಠಿಯ ಗುರಿಯನ್ನು ಹೊಂದ ಬೇಕು ಎಂದರು.
ಪ್ರಸ್ತುತ ಸಮಾಜ ಹಾಗೂ ವಿದ್ಯಾರ್ಥಿಗಳು ಬಹಳಷ್ಟು ನಿರೀಕ್ಷೆಯೊಂದಿಗೆ ಬದುಕು ನಡೆಸುತ್ತಿದ್ದಾರೆ. ಇಂದು ಆರ್ಥಿಕ ಅಭಿವೃದ್ಧಿ ಮತ್ತು ಪ್ರಸಿದ್ದಿಗಾಗಿ ಸಾಕಷ್ಟು ಪೈಪೋಟಿ ನಡೆಯುತ್ತಿದೆ. ಆದರೆ ವಿದ್ಯಾರ್ಥಿಗಳು ಈ ಜಂಜಾಟಗಳಿಗೆ ಸಿಲುಕದೆ ಉತ್ತಮ ಮನುಷ್ಯರಾಗಿ ಬಾಳುವುದನ್ನು ಅರಿತುಕೊಳ್ಳಬೇಕು. ವಿದ್ಯಾರ್ಥಿಗಳು ಜವಾಬ್ದಾರಿ, ಮಾನವೀಯತೆ, ಧೈರ್ಯ ಹಾಗೂ ಕುತೂಹಲ ಕಾರಿ ಮನೋಭಾವವನ್ನು ಬೆಳಸಿಕೊಳ್ಳಬೇಕು ಎಂದು ಅವರು ಹೇಳಿದರು.
ಪ್ರಾಮಾಣಿಕತೆ, ನೈತಿಕತೆ ಜೀವನದ ಪ್ರತಿಯೊಂದು ಸಂದರ್ಭದಲ್ಲಿಯೂ ಬಹಳ ಮುಖ್ಯವಾಗುತ್ತದೆ. ಹಣಕ್ಕಿಂತ ನಮ್ಮ ಬುದ್ದಿವಂತಿಕೆ ನಮ್ಮನ್ನು ರಕ್ಷಿಸುತ್ತದೆ. ವಿದ್ಯಾರ್ಥಿಗಳು ಇಂಥ ಗುಣಗಳನ್ನು ಮೈಗೂಡಿಸಿಕೊಳ್ಳಬೇಕು. ಯುವ ಸಮೂಹ ಆರೋಗ್ಯದ ಕಡೆಗೂ ಹೆಚ್ಚಿನ ಕಾಳಜಿ ವಹಿಸಬೇಕು. ಯುವ ಜನತೆ ಬಲಶಾಲಿಯಾದರೆ ಕುಟುಂಬ, ಸಮಾಜ, ದೇಶ ಬಲಿಷ್ಠವಾಗುತ್ತದೆ ಎಂದು ಅವರು ಅಭಿಪ್ರಾಯ ಪಟ್ಟರು.
ಮಣಿಪಾಲ ವಿವಿಯ ಪ್ರೊಚಾನ್ಸೆಲರ್ ಡಾ.ಎಚ್.ಎಸ್.ಬಲ್ಲಾಳ್, ಮಣಿಪಾಲ ಅಕಾಡೆಮಿ ಆಫ್ ಜನರಲ್ ಎಜುಕೇಶನ್‌ನ ಆಡಳಿತಾಧಿಕಾರಿ ಡಾ.ಎಚ್.ಶಾಂತರಾಮ್, ರಾಜನ್ ಪಡುಕೋಣೆ ಉಪಸ್ಥಿತರಿದ್ದರು. ಪ್ರೊ. ಜಯಂತಿ ವಂದಿಸಿದರು. ವಿನೋದ್ ಕಾರ್ಯಕ್ರಮ ನಿರೂಪಿಸಿ ದರು.







