ಮೆಡಿಟರೇನಿಯನ್ ಸಮುದ್ರದಿಂದ 4 ದಿನಗಳ ಹಸುಳೆಯ ರಕ್ಷಣೆ
.jpeg)
ರೋಮ್ (ಇಟಲಿ), ಎ. 2: ಮೆಡಿಟರೇನಿಯನ್ ಸಮುದ್ರದ ಮಧ್ಯ ಭಾಗದಲ್ಲಿ ಶನಿವಾರ ಮಾನವೀಯ ಸೇವಾ ಸಂಘಟನೆಗಳ ಹಡಗುಗಳು ನಡೆಸಿದ ರಕ್ಷಣಾ ಕಾರ್ಯಾಚರಣೆಯಲ್ಲಿ ನಾಲ್ಕು ದಿನಗಳ ಹಸುಳೆಯೊಂದು ಸೇರಿದಂತೆ ಸುಮಾರು 480 ವಲಸಿಗರನ್ನು ರಕ್ಷಿಸಲಾಯಿತು.
ಉತ್ತರ ಮತ್ತು ಮಧ್ಯ ಆಫ್ರಿಕ, ಶ್ರೀಲಂಕಾ ಮತ್ತು ಯಮನ್‌ಗಳ 200ಕ್ಕೂ ಅಧಿಕ ವಲಸಿಗರನ್ನು ಸಾಗಿಸುತ್ತಿದ್ದ ಎರಡು ರಬ್ಬರ್ ದೋಣಿಗಳ ಪೈಕಿ ಒಂದರಲ್ಲಿ ಈ ಮಗು ಪ್ರಯಾಣಿಸುತ್ತಿತ್ತು. ಲಿಬಿಯದ ಪಟ್ಟಣ ಸಬ್ರತದಿಂದ ಸುಮಾರು 22 ನಾಟಿಕಲ್ ಮೈಲಿ ದೂರದಲ್ಲಿ ದೋಣಿಗಳು ಅಲೆಗಳಿಗೆ ಸಿಲುಕಿ ಆಳ ಸಮುದ್ರದತ್ತ ಚಲಿಸಿದವು.
ಆಗ ಸ್ಪೇನ್‌ನ ಸರಕಾರೇತರ ಸಂಸ್ಥೆ ‘ಪ್ರೊಆ್ಯಕ್ಟಿವ ಓಪನ್ ಆರ್ಮ್ಸ್’ ರಕ್ಷಣಾ ಕಾರ್ಯಾಚರಣೆಯನ್ನು ಆರಂಭಿಸಿತು. ಮೂರು ಗಂಟೆಗಳ ಕಾಲ ಸಾಗಿದ ಕಾರ್ಯಾಚರಣೆಯ ವೇಳೆ ವಲಸಿಗರನ್ನು ಇನ್ನೊಂದು ಹಡಗಿಗೆ ಸ್ಥಳಾಂತರಿಸಲಾಯಿತು.
ಇನ್ನೊಂದು ಘಟನೆಯಲ್ಲಿ, ಇತರ ಎರಡು ರಬ್ಬರ್ ದೊಣಿಗಳಲ್ಲಿ ಪ್ರಯಾಣಿಸುತ್ತಿದ್ದ ವಲಸಿಗರನ್ನು ‘ವೋಸ್ ಪ್ರೂಡೆನ್ಸ್’ ಎಂಬ ಹಡಗಿನ ಸಿಬ್ಬಂದಿ ರಕ್ಷಿಸಿದರು ಎಂದು ತಟ ರಕ್ಷಣಾ ಪಡೆಯ ವಕ್ತಾರರೊಬ್ಬರು ‘ರಾಯ್ಟರ್ಸ್’ಗೆ ತಿಳಿಸಿದರು.
ಹಸುಳೆಯ ತಾಯಿ 29 ವರ್ಷದ ನೈಜೀರಿಯನ್ ಮಹಿಳೆ ಹಾಗೂ ಆಕೆಯ ಗಂಡ 34 ವರ್ಷದ ಘಾನಾ ಪ್ರಜೆಯನ್ನೂ ರಕ್ಷಿಸಲಾಗಿದೆ.







