ಬಿಸಿಲ ಧಗೆಗೆ ಶಿವಮೊಗ್ಗ ತತ್ತರ!
40 ಡಿಗ್ರಿ ಸೆ. ದಾಟಿದ ತಾಪಮಾನ

ಶಿವಮೊಗ್ಗ, ಎ.2: ಶಿವಮೊಗ್ಗ ನಗರದಲ್ಲಿ ತಾಪಮಾನದ ಪ್ರಮಾಣ ದಿನದಿಂದ ದಿನಕ್ಕೆ ಏರುಗತಿಯಲ್ಲಿ ಸಾಗುತ್ತಿದ್ದು, ಇತ್ತೀಚಿನ ದಿನಗಳಲ್ಲಿ ನಗರದಲ್ಲಿ ದಾಖಲಾಗುತ್ತಿರುವ ಗರಿಷ್ಠ ಉಷ್ಣಾಂಶದ ಪ್ರಮಾಣ 40 ಡಿಗ್ರಿ ಸೆಲ್ಸಿಯಸ್ ಗಡಿ ದಾಟಿದೆ. ಬಿಸಿಲ ಧಗೆಗೆ ನಾಗರಿಕರು ಅಕ್ಷರಶಃ ತತ್ತರಿಸಿ ಹೋಗುತ್ತಿದ್ದು, ಏದುಸಿರು ಬಿಡುವಂತಾಗಿದೆ. ಮಲೆನಾಡು ನಗರದಲ್ಲಿ ಬೇಸಿಗೆಯ ವಾತಾವರಣವು ಬಯಲು ಸೀಮೆಯ ಅನುಭವವನ್ನುಂಟು ಮಾಡುವಂತಿದೆ. ನಗರದಲ್ಲಿ ದಾಖಲಾದ ಗರಿಷ್ಠ ಉಷ್ಣಾಂಶದ ಪ್ರಮಾಣ 41 ಡಿಗ್ರಿ ಸೆಲ್ಸಿಯಸ್ ಆಗಿದೆ.
ಕಳೆದ ಏಳೆಂಟು ವರ್ಷಗಳಲ್ಲಿ ದಾಖಲಾದ ಅತ್ಯಧಿಕ ಉಷ್ಣಾಂಶ ಇದಾಗಿದೆ ಎಂದು ಹವಾಮಾನ ಇಲಾಖೆಯ ಮೂಲಗಳು ಮಾಹಿತಿ ನೀಡಿವೆ. ಸದ್ಯದ ಸ್ಥಿತಿ ಗಮನಿಸಿದರೆ ಎಪ್ರಿಲ್, ಮೇ ತಿಂಗಳುಗಳಲ್ಲಿ ತಾಪಮಾನದ ಪ್ರಮಾಣದಲ್ಲಿ ಮತ್ತಷ್ಟು ಅಧಿಕವಾಗುವ ಸಾಧ್ಯತೆಯಿದ್ದು, ಇದು ನಾಗರಿಕರ ನಿದ್ದೆಗೆಡಿಸುವಂತೆ ಮಾಡಿದೆ. ಬೇಸಿಗೆಯ ಅವಧಿಯಲ್ಲಿಯೂ ತಣ್ಣನೆಯ ವಾತಾವರಣಕ್ಕೆ ಹೆಸರುವಾಸಿಯಾಗಿದ್ದ ನಗರದಲ್ಲೀಗ ಎಲ್ಲೆಲ್ಲೂ ಬಿಸಿಗಾಳಿ ಬೀಸುತ್ತಿರುವು ಕಂಡುಬರುತ್ತಿದೆ. ನಾಗರಿಕರು ತಣ್ಣನೆಯ ಸ್ಥಳಗಳನ್ನರಿಸಿ ಹೋಗುವಂತಾಗಿದೆ.
ಮಧ್ಯಾಹ್ನದ ವೇಳೆಯಲ್ಲಂತೂ ನಗರದ ಡಾಂಬರು ರಸ್ತೆಗಳಲ್ಲಿ ಬರಿಗಾಲಲ್ಲಿ ಕಾಲಿಡಲು ಆಗದ ಮಟ್ಟಕ್ಕೆ ರಸ್ತೆಗಳು ಬಿಸಿಲಿಗೆ ಕಾದಿರುತ್ತವೆ. ಅಕ್ಷರಶಃ ಕಾದ ಕಾವಲಿನಂತಾಗಿ ಪರಿಣಮಿಸುತ್ತಿವೆ. ‘ಇತ್ತೀಚಿನ ವರ್ಷಗಳಲ್ಲಿ ಈ ರೀತಿಯ ಬಿಸಿಲನ್ನು ತಾವು ನೋಡಿರಲಿಲ್ಲ. ಮನೆ ಬಿಟ್ಟು ಹೊರಗಡೆ ಬರಲು ಆಗದ ಮಟ್ಟಕ್ಕೆ ಬಿಸಿಲು ಬೀಳುತ್ತಿದೆ. ಬೆಳಗ್ಗೆ 8-9 ಗಂಟೆಗೆ ನೆತ್ತಿ ಸುಡುವ ರೀತಿಯಲ್ಲಿ ಬಿಸಿಲು ಬೀಳುತ್ತಿದೆ.
ಮಧ್ಯಾಹ್ನದ ವೇಳೆಯಂತೂ ನಗರದ ಪ್ರಮುಖ ರಸ್ತೆಗಳಲ್ಲಿ ಜನ-ವಾಹನ ಸಂಚಾರ ದಟ್ಟಣೆ ಕಡಿಮೆಯಿರುವುದು ಕಂಡುಬರುತ್ತಿದೆ. ಫ್ಯಾನ್, ಎಸಿ, ಏರ್ ಕೂಲರ್ ಇಲ್ಲದೆ ಮನೆ, ಕಚೇರಿಯೊಳಗಿರಲು ಅಸಾಧ್ಯವಾಗಿದೆ’ ಎಂದು ವಿನೋಬಾನಗರದ ನಿವಾಸಿ ಮಂಜುನಾಥ್ ಅಸಹಾಯಕತೆ ವ್ಯಕ್ತಪಡಿಸುತ್ತಾರೆ. ವ್ಯವಹಾರವಿಲ್ಲ: ಮಧ್ಯಾಹ್ನದ ವೇಳೆ ಕಂಡುಬರುವ ತೀವ್ರ ಬಿಸಿಲಿನ ಕಾರಣದಿಂದ ಮುಕ್ಕಾಲು ಪಾಲು ನಾಗರಿಕರು ಮನೆ ಬಿಟ್ಟು ಹೊರಗೆ ಬರುತ್ತಿಲ್ಲ. ಇದರಿಂದ ಈ ವೇಳೆ ನಗರದ ಪ್ರಮುಖ ರಸ್ತೆಗಳಲ್ಲಿ ವ್ಯಾಪಾರ-ವಹಿವಾಟು ಕಡಿಮೆ ಇರುವುದು ಕಂಡುಬರುತ್ತಿದೆ. ಗ್ರಾಹಕರ ಸಂಖ್ಯೆ ಕಡಿಮೆ ಇರುವುದರಿಂದ ಕೆಲ ವರ್ತಕರು ಮಧ್ಯಾಹ್ನದ ವೇಳೆ ತಮ್ಮ ಅಂಗಡಿ ಮುಚ್ಚಿ ಮನೆಗೆ ತೆರಳುತ್ತಿರುವುದು ಕೂಡ ಕಂಡುಬರುತ್ತಿದೆ.
ಮರಗಳ ಮಾರಣಹೋಮ
‘ಕಳೆದೊಂದು ದಶಕದ ಅವಧಿಯಲ್ಲಿ ಅಭಿವೃದ್ಧಿಯ ನೆಪದಲ್ಲಿ ನಗರದಲ್ಲಿ ಸಾವಿರಾರು ಮರಗಳ ಮಾರಣ ಹೋಮ ನಡೆಸಲಾಗಿದೆ. ಭಾರೀ ಪ್ರಮಾಣದ ಕೆರೆ-ಕಟ್ಟೆಗಳು ಕಣ್ಮರೆಯಾಗಿವೆ. ಪರಿಸರ ಸಂರಕ್ಷಣೆಗೆ ಆಡಳಿತಗಾರರು ಕಾಳಜಿ ವಹಿಸುತ್ತಿಲ್ಲ. ಇದೆಲ್ಲದರ ಪರಿಣಾಮದಿಂದ ನಗರದ ಪರಿಸರದಲ್ಲಿ ಭಾರೀ ಪ್ರಮಾಣದ ವೈಪರೀತ್ಯ ಕಂಡುಬರುತ್ತಿದೆ. ತಾಪಮಾನ ಹೆಚ್ಚಳಕ್ಕೆ ಕಾರಣವಾಗಿದೆ’ ಎಂದು ಪರಿಸರ ಪ್ರೇಮಿಗಳು ಹೇಳುತ್ತಾರೆ.
ತಂಪು ಪಾನೀಯಕ್ಕೆ ಸಖತ್ ಡಿಮ್ಯಾಂಡ್
ಒಂದೆಡೆ ಬಿಸಿಲ ಬೇಗೆ ಏರುತ್ತಿದ್ದಂತೆ ಮತ್ತೊಂದೆಡೆ ತಂಪು ಪಾನೀಯ, ಹಣ್ಣುಗಳಿಗೆ ಸಖತ್ ಡಿಮ್ಯಾಂಡ್ ಕಂಡುಬಂದಿದೆ. ತಂಪು ಪಾನೀಯ-ಐಸ್ ಕ್ರೀಂ ಮಾರಾಟ ಸ್ಥಳಗಳು ಜನರಿಂದ ತುಂಬಿ ತುಳುಕುತ್ತಿವೆ. ಕಲ್ಲಂಗಡಿ, ಖರಬೂಜದಂತಹ ಹಣ್ಣುಗಳಿಗೆ ನಾಗರಿಕ ವಲಯದಲ್ಲಿ ಭಾರೀ ಬೇಡಿಕೆ ಕಂಡುಬರುತ್ತಿದೆ.







