ಮಹಾದೇವ್‌ಗೆ ಮುಖ್ಯಮಂತ್ರಿ ಪದಕ ಪ್ರದಾನ

ಮಡಿಕೇರಿ, ಎ.2: ಪೊಲೀಸ್ ಇಲಾಖೆಯಲ್ಲಿನ ಉತ್ತಮ ಸೇವೆಗಾಗಿ ಕೊಡಗು ಜಿಲ್ಲಾ ನಿಸ್ತಂತು ಘಟಕದ ಇನ್‌ಸ್ಪೆಕ್ಟರ್ ಎನ್.ಟಿ. ಮಹಾದೇವ್ ಅವರಿಗೆ ಮುಖ್ಯಮಂತ್ರಿಗಳ ಪದಕ ಪ್ರದಾನ ಮಾಡಲಾಗಿದೆ. ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಶಸ್ತಿ ಪ್ರದಾನ ಮಾಡಿದರು.
1985 ರಿಂದ 1994ರವರೆಗೆ ಸತತವಾಗಿ ರಾಜ್ಯ ನಿಸ್ತಂತು ಘಟಕದಿಂದ ಆಲ್ ಇಂಡಿಯಾ ಪೊಲೀಸ್ ಡ್ಯೂಟಿ ಮೀಟ್‌ಗಳಲ್ಲಿ ಪ್ರತಿನಿಧಿಸಿದ ಎನ್.ಟಿ. ಮಹಾದೇವ್ ಅವರು ಪಾಟ್ನ, ಜಮ್ಮು ಮತ್ತು ಕಾಶ್ಮೀರ, ಬೆಂಗಳೂರು, ಹರಿಯಾಣ, ಚಂಡೀಗಡ ಹಾಗು ಹೈದರಾಬಾದ್‌ನಲ್ಲಿ ನಡೆದ ಡ್ಯೂಟಿ ಮೀಟ್‌ಗಳಲ್ಲಿ ಭಾಗವಹಿಸಿ ಹಿರಿಯ ಅಧಿಕಾರಿಗಳಿಂದ ಪ್ರಶಂಸೆಗೆ ಪಾತ್ರರಾಗಿದ್ದಾರೆ. ಕೊಡಗು ಜಿಲ್ಲೆಯಲ್ಲಿ ಪ್ರತಿವರ್ಷ ನಡೆಯುವ ಮಡಿಕೇರಿ ದಸರಾ, ಗೋಣಿಕೊಪ್ಪದಸರಾ, ತಲಕಾವೇರಿ ಜಾತ್ರೆ, ಎಮ್ಮೆಮಾಡು ಉರೂಸ್ ವತ್ತು ವೀರಾಜಪೇಟೆ ಗೌರಿ-ಗಣೇಶ ವಿಸರ್ಜನೆ ವೇಳೆ ಇವರ ನೇತೃತ್ವದಲ್ಲಿ ನಿಸ್ತಂತು ಜಾಲವನ್ನು ಸಮರ್ಪಕವಾಗಿ ರೂಪಿಸಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲಾಗಿದೆ.
2013ರಲ್ಲಿ ನಡೆದ ಧಾನಸಭಾ ಚುನಾವಣೆಯಲ್ಲಿ ಜಿಲ್ಲಾದ್ಯಂತ 20 ಸಂಖ್ಯೆಯ ನಕ್ಸಲ್ ಬೂತ್‌ಗಳಿಗೆ ತಕ್ಷಣದಲ್ಲಿ ನಿಸ್ತಂತು ಅಳವಡಿಸಿ ಉತ್ತಮ ಸಂಪರ್ಕ ಜಾಲವನ್ನು ರೂಪಿಸಿದ್ದು, ಹಾಗೂ ಜಿಲ್ಲೆಯಲ್ಲಿ ಉತ್ತಮ ಸಂಪರ್ಕ ನಿರ್ವಹಣೆಗಾಗಿ, ಕೊಡಗು ಜಿಲ್ಲೆಯ ವರಿಷ್ಠಾಧಿಕಾರಿಯವರಿಂದ ಪ್ರಶಂಸೆಗೊಳಟ್ಟಿದ್ದರು.
ಕೊಡಗು- ಕೇರಳ ಗಡಿಭಾಗದಲ್ಲಿರುವ 10 ಪೊಲೀಸ್ ಅರಣ್ಯ ಗಡಿ ತಪಾಸಣಾ ಠಾಣೆಗಳಿದ್ದು, ನಕ್ಸಲ್ ಚಟುವಟಿಕೆ ಪ್ರದೇಶವಾಗಿವೆ. ಈ ಠಾಣೆಗಳಿಗೆ ನೇರ ಸಂಪರ್ಕ ಹೊಂದುವಂತೆ ನಿಸ್ತಂತು ಸಂಪರ್ಕವನ್ನು ಕೇಂದ್ರ ಸ್ಥಳಕ್ಕೆ ತಲುಪುವಂತೆ ಮಾಡಿದ್ದಾರೆ. ಆಗ್ಗಿಂದಾಗ್ಗೆ ಕೇರಳ ರಾಜ್ಯದ ನಿಸ್ತಂತು ನಮ್ಮ ಸಂಪರ್ಕದೊಂದಿಗೆ ಜಾಮಿಂಗ್ ಆಗುತ್ತಿದ್ದು, ಅದನ್ನು ಸರ್ವೇ ಕಾರ್ಯ ನಡೆಸಿ ಉತ್ತಮ ಪಡಿಸಿದ ಹೆಗ್ಗಳಿಕೆ ಇನ್‌ಸ್ಪೆಕ್ಟರ್ ಎನ್.ಟಿ. ಮಹಾದೇವ್ ಅವರದ್ದು.







