ಚಾಲೆಂಜರ್ ಟೂರ್ನಮೆಂಟ್: ಪೇಸ್‌ಗೆ ಪ್ರಶಸ್ತಿ

ಲಿಯೊನ್(ಮೆಕ್ಸಿಕೊ), ಎ.2: ಭಾರತದ ಹಿರಿಯ ಟೆನಿಸ್ ತಾರೆ ಲಿಯಾಂಡರ್ ಪೇಸ್ ಕೆನಡಾದ ಆದಿಲ್ ಶಂಸುದ್ದೀನ್ ಜೊತೆಗೂಡಿ ಈ ವರ್ಷ ಮೊದಲ ಪ್ರಶಸ್ತಿಯನ್ನು ಗೆದ್ದುಕೊಂಡರು.
ಇಲ್ಲಿ ರವಿವಾರ ನಡೆದ ಪುರುಷರ ಡಬಲ್ಸ್ ವಿಭಾಗದ ಫೈನಲ್ ಪಂದ್ಯದಲ್ಲಿ ಪೇಸ್ ಹಾಗೂ ಆದಿಲ್ ಜೋಡಿ ಸ್ವಿಸ್‌ನ ಲುಕಾ ಮಾರ್ಗರೊಲಿ ಹಾಗೂ ಬ್ರೆಝಿಲ್‌ನ ಕಾರೊ ಝಾಂಪೆರಿ ಅವರನ್ನು 6-1, 6-4 ನೇರ ಸೆಟ್‌ಗಳ ಅಂತರದಿಂದ ಮಣಿಸಿತು.
ಈ ಗೆಲುವಿನೊಂದಿಗೆ ಪೇಸ್ 20ನೆ ಬಾರಿ ಎಟಿಪಿ ಚಾಲೆಂಜರ್ ಟ್ರೋಫಿಯನ್ನು ಗೆದ್ದುಕೊಂಡರು. ಪೇಸ್ ಕಳೆದ 26 ವರ್ಷಗಳಿಂದ ಪ್ರತಿ ವರ್ಷ ತಲಾ ಒಂದು ಪ್ರಶಸ್ತಿಯನ್ನು ಗೆಲ್ಲುತ್ತಾ ಬಂದಿದ್ದಾರೆ.
ಪೇಸ್ ಈ ವರ್ಷ ಮೊದಲ ಬಾರಿ ಫೈನಲ್‌ಗೆ ತಲುಪಿದ್ದು, ಈ ಹಿಂದೆ ದುಬೈ ಚಾಂಪಿಯನ್‌ಶಿಪ್ ಹಾಗೂ ಡೆಲ್‌ರೆ ಬೀಚ್ ಓಪನ್ ಟೂರ್ನಿಯಲ್ಲಿ ಸೆಮಿ ಫೈನಲ್‌ಗೆ ತಲುಪಿದ್ದರು.
ಪೇಸ್ 2015ರಲ್ಲಿ ಆಕ್ಲೆಂಡ್‌ನಲ್ಲಿ ದಕ್ಷಿಣ ಆಫ್ರಿಕದ ಕೇವಿನ್ ಕ್ಲಾಸೆನ್ ಜೊತೆಗೂಡಿ ಕೊನೆಯ ಬಾರಿ ಎಟಿಪಿ ವರ್ಲ್ಡ್ ಟೂರ್ ಪ್ರಶಸ್ತಿಯನ್ನು ಗೆದ್ದುಕೊಂಡಿದ್ದರು. 2015ರಲ್ಲಿ ಕೊನೆಯ ಬಾರಿ ಅಮೆರಿಕನ್ ಓಪನ್‌ನಲ್ಲಿ ಪುರುಷರ ಡಬಲ್ಸ್ ಪ್ರಶಸ್ತಿಯನ್ನು ಜಯಿಸಿದ್ದರು. ಸ್ವಿಸ್‌ನ ಮಾರ್ಟಿನಾ ಹಿಂಗಿಸ್ ಜೊತೆಗೂಡಿ 2015 ಹಾಗೂ 16ರಲ್ಲಿ ಮೂರು ಮಿಶ್ರ ಡಬಲ್ಸ್ ಪ್ರಶಸ್ತಿಯನ್ನು ಜಯಿಸಿದ್ದರು.







