ಸಿಂಧು ಮುಡಿಗೆ ಇಂಡಿಯಾ ಓಪನ್ ಕಿರೀಟ

ಹೊಸದಿಲ್ಲಿ,ಎ.2: ಭಾರತದ ಸ್ಟಾರ್ ಆಟಗಾರ್ತಿ ಪಿ.ವಿ.ಸಿಂಧು ಸ್ಪೇನ್‌ನ ಅಗ್ರ ಶ್ರೇಯಾಂಕಿತ ಆಟಗಾರ್ತಿ ಕರೋಲಿನ್ ಮರಿನ್‌ರನ್ನು ನೇರ ಗೇಮ್‌ಗಳ ಅಂತರದಿಂದ ಸದೆಬಡಿದು ಇಂಡಿಯ ಓಪನ್ ಸೂಪರ್ ಸರಣಿಯಲ್ಲಿ ಚೊಚ್ಚಲ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡರು.
ರವಿವಾರ ಇಲ್ಲಿನ ಸಿರಿ ಫೋರ್ಟ್ ಸ್ಪೋರ್ಟ್ಸ್ ಕಾಂಪ್ಲೆಕ್ಸ್‌ನಲ್ಲಿ ಕಿಕ್ಕಿರಿದು ನೆರೆದಿದ್ದ ಪ್ರೇಕ್ಷಕರ ಎದುರು ನಡೆದ ಮಹಿಳೆಯರ ಸಿಂಗಲ್ಸ್ ಫೈನಲ್ ಪಂದ್ಯದಲ್ಲಿ ಸಿಂಧು ಅವರು ಮರಿನ್‌ರನ್ನು ಕೇವಲ 47 ನಿಮಿಷದಲ್ಲಿ 21-19, 21-16 ಗೇಮ್‌ಗಳ ಅಂತರದಿಂದ ಮಣಿಸಿ ಪ್ರಶಸ್ತಿ ಎತ್ತಿ ಹಿಡಿದರು. ಈ ಗೆಲುವಿನ ಮೂಲಕ ಸಿಂಧು ಅವರು ರಿಯೋ ಒಲಿಂಪಿಕ್ಸ್ ಫೈನಲ್ ಸೋಲಿಗೆ ತಕ್ಕ ಸೇಡು ತೀರಿಸಿಕೊಂಡರು. ಸಿಂಧು 2016ರ ಒಲಿಂಪಿಕ್ಸ್‌ನಲ್ಲಿ ಮರಿನ್ ವಿರುದ್ಧ 3 ಗೇಮ್‌ಗಳ ಅಂತರದಿಂದ ಸೋತು ಬೆಳ್ಳಿ ಪದಕವನ್ನು ಗೆದ್ದುಕೊಂಡಿದ್ದ್ದರು.
ಸಿಂಧು ಮೊದಲ ಗೇಮ್‌ನಲ್ಲಿ ನಿರ್ಣಾಯಕ 5-1 ಮುನ್ನಡೆ ಪಡೆದರು. ತಿರುಗೇಟು ನೀಡಿದ ಮರಿನ್ 18-17ರಿಂದ ಮುನ್ನಡೆ ಸಾಧಿಸಿದರು. ಆದರೆ, ಮರಿನ್‌ಗೆ ಮೇಲುಗೈ ನಿರಾಕರಿಸಿದ ಸಿಂಧು ಮೊದಲ ಗೇಮ್‌ನ್ನು 21-19 ರಿಂದ ರೋಚಕವಾಗಿ ಗೆದ್ದುಕೊಂಡರು.
ಎರಡನೆ ಗೇಮ್‌ನ ಆರಂಭದಲ್ಲೇ ಸಿಂಧು 4-0 ಮುನ್ನಡೆ ಪಡೆದರು. ಹೈದರಾಬಾದ್ ಆಟಗಾರ್ತಿ ಸಿಂಧು 5 ಅಂಕಗಳ ಮುನ್ನಡೆಯನ್ನು ಕಾಯ್ದುಕೊಳ್ಳಲು ಯಶಸ್ವಿಯಾದರು. ಒಂದು ಹಂತದಲ್ಲಿ 15-10 ರಿಂದ ಮುನ್ನಡೆಯಲ್ಲಿದ್ದ ವಿಶ್ವದ ನಂ.3ನೆ ಆಟಗಾರ್ತಿ ಸಿಂಧು ಅಂತಿಮವಾಗಿ 2ನೆ ಗೇಮ್‌ನ್ನು 21-16 ರಿಂದ ಜಯಿಸುವ ಮೂಲಕ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡರು.
ಸಿಂಧು-ಮರಿನ್ 10ನೆ ಬಾರಿ ಅಂತಾರಾಷ್ಟ್ರೀಯ ಟೂರ್ನಿಯಲ್ಲಿ ಮುಖಾಮುಖಿಯಾಗಿದ್ದು ಮರಿನ್ ಹಾಗೂ ಸಿಂಧು ತಲಾ 5 ಬಾರಿ ಜಯ ಸಾಧಿಸಿ ಸಮಬಲ ಸಾಧಿಸಿದ್ದಾರೆ.
ಮೆಕ್ಸಿಕೊದಲ್ಲಿ ನಡೆದಿದ್ದ 2010ರ ವಿಶ್ವ ಜೂನಿಯರ್ ಚಾಂಪಿಯನ್‌ಶಿಪ್‌ನಲ್ಲಿ ಮೊದಲ ಬಾರಿ ಮರಿನ್‌ರನ್ನು ಎದುರಿಸಿದ್ದ ಸಿಂಧು 21-17, 21-19 ಗೇಮ್‌ಗಳ ಅಂತರದಿಂದ ಜಯ ಸಾಧಿಸಿದ್ದರು. 2011ರಲ್ಲಿ ಮಾಲ್ಡೀವ್ಸ್ ಚಾಲೆಂಜ್‌ನಲ್ಲಿ ಸತತ 2ನೆ ಬಾರಿ ಮರಿನ್‌ರನ್ನು ಎದುರಿಸಿದ್ದ ಸಿಂಧು 21-7, 15-21, 21-13 ಅಂತರದಿಂದ ಜಯ ಸಾಧಿಸಿ ಮಿಂಚಿದ್ದರು. 2015ರ ಡೆನ್ಮಾರ್ಕ್ ಓಪನ್ ಸೂಪರ್ ಸರಣಿಯ ಸೆಮಿ ಫೈನಲ್‌ನಲ್ಲಿ ಸಿಂಧು ಅವರು ಮರಿನ್‌ರನ್ನು 21-15, 18-21, 21-17 ಗೇಮ್‌ಗಳ ಅಂತರದಿಂದ ಸೋಲಿಸಿದ್ದರು.
2016ರ ವರ್ಷಾಂತ್ಯದಲ್ಲಿ ನಡೆದಿದ್ದ ದುಬೈ ವರ್ಲ್ಡ್ ಸೂಪರ್ ಸರಣಿ ಫೈನಲ್ಸ್ ಟೂರ್ನಿಯಲ್ಲಿ ಮರಿನ್‌ರನ್ನು 21-17, 21-13 ನೇರ ಗೇಮ್‌ಗಳ ಅಂತರದಿಂದ ಮಣಿಸಿದ್ದ ಸಿಂಧು ಸೆಮಿ ಫೈನಲ್‌ಗೆ ತಲುಪಿದ್ದರು.
ಮರಿನ್ ಅವರು 2014ರ ಆಸ್ಟ್ರೇಲಿಯನ್ ಓಪನ್, 2014ರ ವಿಶ್ವ ಚಾಂಪಿಯನ್‌ಶಿಪ್, 2015ರ ಸೈಯದ್ ಮೋದಿ ಇಂಟರ್‌ನ್ಯಾಶನಲ್ ಜಿಪಿ ಟೂರ್ನಿ, 2015ರ ಹಾಂಕಾಂಗ್ ಸೂಪರ್ ಸರಣಿ, 2016ರ ರಿಯೋ ಒಲಿಂಪಿಕ್ಸ್‌ನಲ್ಲಿ ಸಿಂಧು ಅವರನ್ನು ಮಣಿಸಿದ್ದರು.
ರಿಯೋ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ವಿಜೇತೆ ಭಾರತದ ಮೊದಲ ಕುಸ್ತಿತಾರೆ ಸಾಕ್ಷಿ ಮಲಿಕ್ ರವಿವಾರ ಹರ್ಯಾಣದ ರೋಹ್ಟಕ್‌ನಲ್ಲಿ ಕುಸ್ತಿಪಟು ಸತ್ಯವೃತ್ ಕಾದಿಯಾನ್‌ರನ್ನು ವಿವಾಹವಾದರು.
*ಒಲಿಂಪಿಕ್ಸ್ ಫೈನಲ್‌ನಲ್ಲಿ ಮರಿನ್ ವಿರುದ್ಧ ಸೋತ ಬಳಿಕ ಸಿಂಧು ಸತತ ಎರಡನೆ ಬಾರಿ ಜಯ ಸಾಧಿಸಿದ್ದಾರೆ.
*2016ರ ಡಿಸೆಂಬರ್‌ನಲ್ಲಿ ದುಬೈ ವಿಶ್ವ ಸೂಪರ್ ಸರಣಿಯಲ್ಲಿ ಮರಿನ್‌ರನ್ನು ಸೋಲಿಸಿದ್ದ ಸಿಂಧು ಪ್ರಶಸ್ತಿ ಜಯಿಸಿದ್ದರು.
*2016ರ ನವೆಂಬರ್‌ನಲ್ಲಿ ಚೀನಾ ಓಪನ್ ಜಯಿಸಿದ್ದ ಸಿಂಧು ಸತತ 2ನೆ ಬಾರಿ ಸೂಪರ್ ಸರಣಿಯನ್ನು ಗೆದ್ದುಕೊಂಡರು.
*ಸಿಂಧು ಇಂಡಿಯ ಓಪನ್ ಸಿಂಗಲ್ಸ್ ಪ್ರಶಸ್ತಿ ಜಯಿಸಿದ ಭಾರತದ ಮೂರನೆ ಬ್ಯಾಡ್ಮಿಂಟನ್ ತಾರೆ. ಸೈನಾ ನೆಹ್ವಾಲ್(ಮಹಿಳೆಯರ ಸಿಂಗಲ್ಸ್) ಹಾಗೂ ಕೆ.ಶ್ರೀಕಾಂತ್(ಪುರುಷರ ಸಿಂಗಲ್ಸ್) ಈ ಹಿಂದೆ ಇಂಡಿಯ ಓಪನ್ ಜಯಿಸಿದ್ದರು.
*ಭಾರತದಲ್ಲಿ ಮರಿನ್‌ರನ್ನು 2ನೆ ಬಾರಿ ಎದುರಿಸಿದ ಸಿಂಧು ಮೊದಲ ಜಯ ಸಾಧಿಸಿದರು. *ಜನವರಿಯಲ್ಲಿ ಲಕ್ನೋದಲ್ಲಿ ನಡೆದಿದ್ದ ಸೈಯದ್ ಮೋದಿ ಜಿಪಿ ಟೂರ್ನಿ ಜಯಿಸಿದ್ದ ಸಿಂಧು ಈ ವರ್ಷ 2ನೆ ಪ್ರಶಸ್ತಿ ಗೆದ್ದುಕೊಂಡರು.
ವಿಕ್ಟರ್ ಅಕ್ಸೆಲ್‌ಸನ್‌ಗೆ ಚೊಚ್ಚಲ ಸಿಂಗಲ್ಸ್ ಪ್ರಶಸ್ತಿ
ಹೊಸದಿಲ್ಲಿ, ಎ.2: ಏಕಪಕ್ಷೀಯವಾಗಿ ಸಾಗಿದ ಪುರುಷರ ಸಿಂಗಲ್ಸ್ ಫೈನಲ್‌ನಲ್ಲಿ ಚೌ ಟಿಯೆನ್ ಚೆನ್‌ರನ್ನು ಸುಲಭವಾಗಿ ಮಣಿಸಿದ ವಿಕ್ಟರ್ ಅಕ್ಸೆಲ್‌ಸನ್ ಇಂಡಿಯ ಓಪನ್ ಸೂಪರ್ ಸರಣಿಯಲ್ಲಿ ಮೊದಲ ಬಾರಿ ಟ್ರೋಫಿ ಗೆದ್ದುಕೊಂಡರು.
ವಿಶ್ವದ ನಂ.4ನೆ ಆಟಗಾರ ವಿಕ್ಟರ್ ರವಿವಾರ ಇಲ್ಲಿನ ಸಿರಿ ಫೋರ್ಟ್ ಸ್ಪೋರ್ಟ್ಸ್ ಕಾಂಪ್ಲೆಕ್ಸ್‌ನಲ್ಲಿ ನಡೆದ ಪ್ರಶಸ್ತಿ ಸುತ್ತಿನ ಪಂದ್ಯದಲ್ಲಿ ಕೇವಲ 36 ನಿಮಿಷದಲ್ಲಿ ಚೆನ್‌ರನ್ನು 21-13, 21-10 ಗೇಮ್‌ಗಳ ಅಂತರದಿಂದ ಮಣಿಸಿದ್ದಾರೆ. ತನ್ನ ಮೂರನೆ ಪ್ರಯತ್ನದಲ್ಲಿ ಇಂಡಿಯ ಓಪನ್ ಪ್ರಶಸ್ತಿಯನ್ನು ಜಯಿಸಲು ಯಶಸ್ವಿಯಾಗಿದ್ದಾರೆ.
ಡೆನ್ಮಾರ್ಕ್‌ನ ಆಟಗಾರ ವಿಕ್ಟರ್ ಮೊದಲ ಗೇಮ್ ಆಡುತ್ತಿದ್ದಾಗ ಮಂಡಿನೋವು ಕಾಣಿಸಿಕೊಂಡಿತ್ತು. ವೈದ್ಯರಿಂದ ಚಿಕಿತ್ಸೆ ಪಡೆದು ಪಂದ್ಯವನ್ನು ಮುಂದುವರಿಸಿದ ವಿಕ್ಟರ್ ಎರಡೂ ಗೇಮ್‌ಗಳನ್ನು ಸುಲಭವಾಗಿ ಗೆದ್ದುಕೊಂಡರು.
ಮಿಶ್ರ ಡಬಲ್ಸ್ ಫೈನಲ್‌ನಲ್ಲಿ ಹಾಲಿ ಚಾಂಪಿಯನ್ ಚೀನಾ ಲು ಕೇ ಹಾಗೂ ಹುಯಾಂಗ್ ಯಾಕ್ವಿಯೊಂಗ್ ತಮ್ಮದೇ ದೇಶದ ಝಿಂಗ್ ಸಿವೀ-ಚೆನ್ ಕ್ವಿಂಗ್‌ಚೆನ್‌ರನ್ನು 22-24, 21-14, 21-17 ಸೆಟ್‌ಗಳಿಂದ ಮಣಿಸಿ ಸತತ ಎರಡನೆ ಬಾರಿ ಇಂಡಿಯನ್ ಓಪನ್‌ನಲ್ಲಿ ಮಿಶ್ರ ಡಬಲ್ಸ್ ವಿಭಾಗದಲ್ಲಿ ಪ್ರಶಸ್ತಿ ಎತ್ತಿ ಹಿಡಿದರು.
ಜಪಾನಿ ಆಟಗಾರ್ತಿಯರ ನಡುವೆ ನಡೆದ ಮಹಿಳೆಯರ ಡಬಲ್ಸ್‌ನಲ್ಲಿ ಏಳನೆ ಶ್ರೇಯಾಂಕಿತ ಜೋಡಿ ಶಿಯೊ ಟನಕಾ-ಕೊಹರು ಯೊನೆಮೊಟೊ ಚೊಚ್ಚಲ ಸೂಪರ್ ಸಿರೀಸ್ ಪ್ರಶಸ್ತಿಯನ್ನು ಗೆದ್ದುಕೊಂಡಿತು.
ರವಿವಾರ ನಡೆದ ಫೈನಲ್ ಪಂದ್ಯದಲ್ಲಿ ಟನಕಾ-ಯೊನೆಮೊಟೊ ಜೋಡಿ ನಾಯೊಕೊ ಫುಕುಮನ್-ಕುರುಮಿ ಯೊನಾವೊರನ್ನು 16-21, 21-19, 21-10 ಗೇಮ್‌ಗಳ ಅಂತರದಿಂದ ಸೋಲಿಸಿದ್ದಾರೆ.







