ಬಂಟ್ವಾಳ: ಸಾರ್ವಜನಿಕ ಸೇವೆಗೆ ಸಿದ್ಧವಾಗುತ್ತಿರುವ ಮಿನಿ ವಿಧಾನಸೌಧ

ಒಂದೇ ಕಟ್ಟಡದಲ್ಲಿ ತಾಲೂಕಿನ ಪ್ರಮುಖ ಕಚೇರಿಗಳು
ಇನ್ನೊಂದು ತಿಂಗಳೊಳಗೆ ಲೋಕಾರ್ಪಣೆ
3,225 ಚದರ ಮೀಟರ್ ವಿಸ್ತೀರ್ಣ
ಬಂಟ್ವಾಳ, ಎ.2: ಬಿ.ಸಿ.ರೋಡ್ ಹಳೆ ತಾಲೂಕು ಕಚೇರಿಯನ್ನು ಕೆಡವಿ ಸುಸಜ್ಜಿತ, ಸುಂದರವಾಗಿ ನಿರ್ಮಾಣಗೊಂಡಿರುವ ಮಿನಿ ವಿಧಾನಸೌಧ ಕಟ್ಟಡದ ಕಾಮಗಾರಿ ಮುಕ್ತಾಯದ ಹಂತದಲ್ಲಿದ್ದು ಎಪ್ರಿಲ್ ಅಥವಾ ಮೇ ತಿಂಗಳಲ್ಲಿ ಲೋಕಾರ್ಪಣೆಗೊಳ್ಳಲಿದೆ. ಬಿ.ಸಿ.ರೋಡ್‌ಗೆ ಹೊಸ ಮೆರುಗು ನೀಡುತ್ತಿರುವ ಮಿನಿ ವಿಧಾನಸೌಧ ಲೋಕಾರ್ಪಣೆ ಬಳಿಕ ತಾಲೂಕು ಕಚೇರಿ, ಸಬ್ ರಿಜಿಸ್ಟ್ರಾರ್, ಗ್ರಾಮಕರಣಿಕ, ಸರ್ವೇ ಇಲಾಖೆ, ನೆಮ್ಮದಿ ಕೇಂದ್ರ, ಭೂ ದಾಖಲೆ ನಿರ್ದೇಶಕರ ಕಚೇರಿ, ನಾಡಕಚೇರಿ, ತಹಶೀಲ್ದಾರ್ ಕಚೇರಿ ಸಹಿತ ತಾಲೂಕಿನ ಎಲ್ಲ ಪ್ರಮುಖ ಕಚೇರಿಗಳು ಇಲ್ಲಿ ಕಾರ್ಯ ನಿರ್ವಹಿಸಲಿವೆೆ. ಪ್ರಸ್ತುತ ಅಲ್ಲೊಂದು, ಇಲ್ಲೊಂದು ಬಿಡಿ ಬಿಡಿಯಾಗಿ ತಾಲೂಕು ಕಚೇರಿಯ ವಿವಿಧ ಶಾಖೆಗಳು ಚದುರಿರುವುದರಿಂದ ಜನಸಾಮಾನ್ಯರು ತೊಂದರೆ ಅನುಭವಿಸುತ್ತಿದ್ದಾರೆ. ಇನ್ನು ಮುಂದೆ ಒಂದೇ ಕಟ್ಟಡದಲ್ಲಿ ಎಲ್ಲ ಶಾಖೆಗಳು ಕಾರ್ಯ ನಿರ್ವಹಿಸಲಿರುವುದರಿಂದ ಸಾರ್ವಜನಿಕರಿಗೆ ಸಾಕಷ್ಟು ಅನುಕೂಲಕರವಾಗಲಿದೆ. ಬಂಟ್ವಾಳದ ಶಾಸಕ ಸಚಿವ ಬಿ.ರಮಾನಾಥ ರೈ ಅವರ ಮುತುವರ್ಜಿಯಿಂದ ನಿರ್ಮಾ ಣವಾಗುತ್ತಿರುವ ಈ ಮಿನಿ ವಿಧಾನಸೌಧ ಜಿಲ್ಲೆಯಲ್ಲಿ ನಿರ್ಮಾಣಗೊಂಡ ಮಿನಿ ವಿಧಾನ ಸೌಧಗಳ ಪೈಕಿ ಅತ್ಯಂತ ವಿನೂತನ ಮತ್ತು ಅತೀ ದೊಡ್ಡದಾಗಿದೆ ಎಂಬ ಹೆಗ್ಗಳಿಕೆ ಇದೆ. ಸುಮಾರು 33 ಸೆಂಟ್ಸ್ ವಿಸ್ತೀರ್ಣದಲ್ಲಿ ನಿರ್ಮಾಣವಾಗಿರುವ ಬಿ.ಸಿ.ರೋಡ್ ಮಿನಿ ವಿಧಾನಸೌಧ ನೆಲ, ಮೊದಲ, ಎರಡನೆ ಮಹಡಿಯನ್ನು ಹೊಂದಿದೆ. ಪ್ರತಿಯೊಂದು ಮಹಡಿ 1,075 ಚದರ ಮೀಟರ್‌ನಂತೆ ಒಟ್ಟು 3,225 ಚ.ಮೀ. ವಿಸ್ತೀರ್ಣ ಇದೆ. ಅಲ್ಲದೆ ಕಟ್ಟಡದ ಜಾಗದಲ್ಲೇ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗುತ್ತದೆ. ಮಂಗಳೂರಿನ ಸೀಡಿ ಕನ್‌ಸ್ಟ್ರಕ್ಷನ್ ಸಂಸ್ಥೆಯು ಇದರ ಕಾಮಗಾರಿಯನ್ನು ಕೈಗೆತ್ತಿಕೊಂಡಿದೆ. ಅಂದುಕೊಂಡದ್ದಕ್ಕಿಂತ ವೇಗವಾಗಿ ಕೆಲಸವೂ ನಡೆದಿದೆ. ಯಾವ ಮಹಡಿಯಲ್ಲಿ ಏನೇನಿದೆ?: ನೆಲ ಅಂತಸ್ತಿನಲ್ಲಿ ತಾಲೂಕು ಸಬ್ ಟ್ರೆಜರಿ ಕಚೇರಿ, ತಾಲೂಕು ಕಚೇರಿ, ಮೊದಲ ಅಂತಸ್ತಿನಲ್ಲಿ ಸಬ್ ರಿಜಿಸ್ಟ್ರಾರ್ ಕಚೇರಿ, ಭೂ ದಾಖಲೆ ನಿರ್ದೇಶಕರ ಕಚೇರಿ, ನಾಡ ಕಚೇರಿ, ತಾಲೂಕು ಕಚೇರಿ ಇದೆ. ಎರಡನೆ ಅಂತಸ್ತಿನಲ್ಲಿ ವಾಣಿಜ್ಯ ತೆರಿಗೆ ಕಚೇರಿ, ಭೂ ದಾಖಲೆ ಹಾಗೂ ತಾಲೂಕು ಕಚೇರಿಗೆ ಸಂಬಂಧಿಸಿದ ಇತರ ಕಚೇರಿಗಳು. ಅಲ್ಲದೆ 230ಚ.ಮೀ. ವಿಸ್ತೀರ್ಣದ ವಿಶಾಲ ರೆಕಾರ್ಡ್ ಕೊಠಡಿಯನ್ನು ಹೊಂದಿದೆ.
ಮಿನಿ ವಿಧಾನಸೌಧ ಲೋಕಾರ್ಪಣೆಗೆ ಸಿಎಂ
ಬಂಟ್ವಾಳ ತಾಲೂಕಿಗೊಂದು ಸುಂದರ, ಸುಸಜ್ಜಿತ ಮಿನಿ ವಿಧಾನಸೌಧ ನಿರ್ಮಾಣ ಬಂಟ್ವಾಳ ಶಾಸಕ ಸಚಿವ ಬಿ.ರಮಾನಾಥ ರೈ ಅವರ ಕನಸಿನ ಯೋಜನೆಯಾಗಿದೆ. ಯೋಜನೆ ಸಿದ್ಧಗೊಂಡು ಕಟ್ಟಡದ ಪ್ರತೀ ಹಂತದ ಕಾಮಗಾರಿಯನ್ನು ಪದೇ ಪದೇ ಖುದ್ದು ಪರಿಶೀಲಿಸುತ್ತಿದ್ದ ಸಚಿವರು ನಿರ್ಮಾಣದ ಅವಧಿಗಿಂತ ಒಂದು ವರ್ಷ ಮೊದಲೇ ಪೂರ್ಣಗೊಳ್ಳುವಂತೆ ಮಾಡಿದ್ದಾರೆ. ಮಿನಿ ವಿಧಾನಸೌಧ ಕಟ್ಟಡದ ಸ್ವಲ್ಪಕೆಲಸ ಬಾಕಿಯಿದೆ. ಕಾಮಗಾರಿ ಸಂಪೂರ್ಣ ಮುಗಿದ ಬಳಿಕ ಮುಖ್ಯಮಂತ್ರಿಯವರನ್ನು ಕರೆದು ಲೋಕಾರ್ಪಣೆ ಮಾಡಲಾಗುವುದು. ಉಪ ಚುನಾವಣೆ ಮುಗಿದ ಬಳಿಕ ಮುಖ್ಯಮಂತ್ರಿ ಸಿದ್ದರಾಮಯ್ಯರೊಂದಿಗೆ ಚರ್ಚಿಸಿ ಲೋಕಾರ್ಪಣೆಗೆ ದಿನಾಂಕ ನಿಗದಿಪಡಿಸಲಾಗುವುದು ಎಂದು ಸಚಿವ ಬಿ.ರಮಾನಾಥ ರೈ ಹೇಳಿದ್ದಾರೆ.







