ದ.ಕ. ಜಿಲ್ಲೆಯಲ್ಲಿ ಸೊರಗುತ್ತಿರುವ ‘ಗೇರು’ ಕೃಷಿ

- ಕೂಲಿಯಾಳು ಮತ್ತು ನಿರ್ವಹಣೆಯ ಸಮಸ್ಯೆ
- ಬೆಳೆಗಾರರಲ್ಲಿ ಇಚ್ಛಾಶಕ್ತಿಯ ಕೊರತೆ
- ಸಮತಟ್ಟಾಗುತ್ತಿರುವ ಗುಡ್ಡಗಾಡು ಪ್ರದೇಶ
- ಹೆಚ್ಚಿದ ಭೂ ಮಾರಾಟ ದಂಧೆ
ಮಂಗಳೂರು, ಎ.2: ದ.ಕ. ಜಿಲ್ಲೆಯ ನಗರ ಸಹಿತ ಗ್ರಾಮಾಂತರ ವಲಯದ ಗುಡ್ಡಗಾಡು ಪ್ರದೇಶ ಮತ್ತು ಒಣಭೂಮಿಯಲ್ಲಿ ಹತ್ತಿಪ್ಪತ್ತು ವರ್ಷದ ಹಿಂದೆ ಹೇರಳವಾಗಿ ಬೆಳೆಯುತ್ತಿರುವ ‘ಗೇರು ಕೃಷಿ’ ಇಂದು ಸೊರಗುತ್ತಿದೆ. ನಗರ ಮಾತ್ರವಲ್ಲದೆ ಗ್ರಾಮಾಂತರ ಪ್ರದೇಶದಲ್ಲೂ ಗೇರು ಮರಗಳನ್ನು ಕಡಿದು ಗುಡ್ಡವನ್ನು ಸಮತಟ್ಟುಗೊಳಿಸಿ ಮಾರಾಟ ಮಾಡುವ ಪ್ರಕ್ರಿಯೆ ಬಿರುಸಿನಿಂದ ನಡೆಯುತ್ತಿದೆ. ಇದರಿಂದ ಗ್ರಾಮಾಂತರ ಪ್ರದೇಶದ ಎಳೆಯ ಮಕ್ಕಳು ಕೂಡ ‘ಗೇರು ಮರ ಮತ್ತು ಬೀಜ’ವನ್ನು ನೋಡುವ ಸೌಭಾಗ್ಯದಿಂದ ವಂಚಿತರಾಗುತ್ತಿದ್ದಾರೆ.
ಹಿಂದೆ ಖಾಸಗಿ ಮಾಲಕರ ಭೂಮಿಯಲ್ಲಿ ಹೇರಳವಾಗಿ ಕಾಣುತ್ತಿದ್ದ ಗೇರು ತೋಪುಗಳು ಇಂದು ಸದ್ದಿಲ್ಲದೆ ಮಾಯವಾಗುತ್ತಿದ್ದು, ಗೇರು ಬೆಳೆಗಾರರು ಕೂಡ ಪರ್ಯಾಯ ದಾರಿ ಹುಡುಕುತ್ತಿದ್ದಾರೆ. ಹಿಂದೆ ಅದೆಷ್ಟೋ ಕುಟುಂಬಗಳು ‘ಗೇರು’ವನ್ನು ಉಪ ಕೃಷಿಯಾಗಿ ಬೆಳೆದು ಸಂಸಾರ ಸರಿದೂಗಿಸುತ್ತಿದ್ದರೆ, ಮಕ್ಕಳು ತಮ್ಮ ವಿದ್ಯಾಭ್ಯಾಸಕ್ಕೆ ಗೇರು ಮಾರಿ ಬಂದ ಹಣವನ್ನು ಬಳಸುತ್ತಿದ್ದರು. ಹಿಂದೆ ಮಕ್ಕಳು ಗುಂಪು ಕಟ್ಟಿಕೊಂಡು ಬೆಳ್ಳಂಬೆಳಗ್ಗೆ ಗೇರುಬೀಜ ಕೊಯ್ಯಲು ಪೈಪೋಟಿ ಮಾಡುತ್ತಿದ್ದರೆ ಇಂದು ಆ ದೃಶ್ಯ ಕಾಣಲು ಅಪರೂಪ ಎಂಬಂತಾಗಿದೆ.
ಈ ಹಿಂದೆ ಶೇ.75 ಗೇರು ಬೀಜವನ್ನು ವಿದೇಶಕ್ಕೆ ರಫ್ತು ಮಾಡಲಾಗುತ್ತಿತ್ತು. ಅಂದರೆ ಸುಮಾರು 90 ಸಾವಿರ ಟನ್ ಗೇರುಬೀಜ ಉತ್ಪತ್ತಿಯಾಗುತ್ತಿತ್ತು ಎಂದು ನಿವೃತ್ತ ಗೇರು ಕೃಷಿ ಅಧಿಕಾರಿಯೊಬ್ಬರು ಅಭಿಪ್ರಾಯಪಡುತ್ತಾರೆ. ಆದರೆ ಇಂದು ಉತ್ಪತ್ತಿ ಕಡಿಮೆಯಾಗಿದೆ. ಅಲ್ಲದೆ ರಫ್ತಿನ ಪ್ರಮಾಣವೂ ಭಾರೀ ಪ್ರಮಾಣದಲ್ಲಿ ಇಳಿಮುಖವಾಗಿದೆ. ಸ್ಥಳೀಯ ಕಾರ್ಖಾನೆಗೆ ಪೂರೈಕೆ ಮಾಡುವಷ್ಟು ಬೀಜವೂ ಲಭ್ಯವಿಲ್ಲ ಎಂದು ಮಾಹಿತಿ ಇದೆ.
- ಗೇರು ಬೀಜದ ಇತಿಹಾಸ
16ನೆ ಶತಮಾನದಲ್ಲಿ ಪೋರ್ಚುಗೀಸರು ಗೇರುಬೀಜವನ್ನು ಭಾರತಕ್ಕೆ ಪರಿಚಯಿಸಿದರು ಎಂದು ಇತಿಹಾಸ ಹೇಳುತ್ತವೆ. ಮೊದಲು ಗೋವಾದಲ್ಲಿ ಬೆಳೆಯಲ್ಪಟ್ಟ ಗೇರು ಬಳಿಕ ಉ.ಕ., ದ.ಕ., ಉಡುಪಿ, ಶಿವಮೊಗ್ಗ ಜಿಲ್ಲೆಗೆ ವ್ಯಾಪಿಸಿತು. ಗೇರು ಕೃಷಿ ಬೆಳೆಯಲು ಹೆಚ್ಚಿನ ನೀರಿನ ಅಗತ್ಯವಿಲ್ಲ. ಗುಡ್ಡಗಾಡು ಮತ್ತು ಒಣಭೂಮಿಯಲ್ಲೂ ಹೇರಳವಾಗಿ ಗೇರು ಕೃಷಿ ಬೆಳೆಯಬಹುದು. ಇದು ಹಳ್ಳಿಯ ರೈತರನ್ನು ಆಕರ್ಷಿಸಿತು. ಹಾಗೇ ಅಲ್ಲಲ್ಲಿ ಸಸಿ ನೆಟ್ಟು ಗೇರು ಕೃಷಿ ಬೆಳೆಯತೊಡಗಿದರು. ಫೆನ್ನಿ (ಮದ್ಯ) ತಯಾರಿಸಲೂ ಬಳಸತೊಡಗಿದರಲ್ಲದೆ, ಬಗೆ ಬಗೆಯ ಸ್ವಾದಿಷ್ಟವಾದ ‘ಗೇರು ಹಣ್ಣು’ ಬಡವರ ಆಹಾರವಾಗಿಯೂ ಕಂಡು ಬಂತು. ಗೇರು ಬೀಜವನ್ನು ಸಂಸ್ಕರಿಸಿ ವಿದೇಶಕ್ಕೆ ರಫ್ತು ಮಾಡುವ ಅವಕಾಶವೂ ಲಭಿಸಿತು. ಹಾಗಾಗಿ ‘ಗೇರು ಕೃಷಿ’ಯು ವಿದೇಶಿ-ವಿನಿಮಯದಲ್ಲಿ ಮಹತ್ವ ಪಡೆಯಿತು. ಇದರಿಂದ ಕೇಂದ್ರ ಮತ್ತು ರಾಜ್ಯ ಸರಕಾರಗಳು ಇದಕ್ಕೆ ಹೆಚ್ಚೆಚ್ಚು ಪ್ರೋತ್ಸಾಹ ನೀಡತೊಡಗಿತು.
ಅದರಂತೆ ನಗರ ಮತ್ತು ಗ್ರಾಮಾಂತರ ಪ್ರದೇಶದ ಹಲವು ಕಡೆಯ ಖಾಸಗಿ ಜಮೀನಿನಲ್ಲಿ ಇತ್ತೀಚಿನವರೆಗೂ ಗೇರು ಕೃಷಿಯನ್ನು ಆದ್ಯತೆಯ ನೆಲೆಯಲ್ಲಿ ಬೆಳೆಯುತ್ತಿದ್ದರು. ಆದರೆ ಆಧುನೀಕರಣದ ಭರಾಟೆ, ಕೆಲಸದಾಳುಗಳ ಕೊರತೆ, ಕೂಲಿಯ ಸಮಸ್ಯೆಯಿಂದ ಗೇರು ಕೃಷಿ ಜಿಲ್ಲೆಯ ಬೆಳೆಗಾರರಿಂದ ದೂರ ಸರಿಯುತ್ತಿವೆ. ಇದೀಗ 1 ಕೆ.ಜಿ. ಗೇರು ಬೀಜಕ್ಕೆ 130 ರೂ. ಇದೆ. ಆದರೆ, ಗೇರು ಕೊಯ್ಯಲು, ಹೆಕ್ಕಲು, ಒಣಗಿಸಲು ಕೆಲಸಗಾರರು ಸಿಗುತ್ತಿಲ್ಲ. ಸರಕಾರ ಗೇರು ಬೆಳೆಗಾರರಿಗೆ ಪ್ರೋತ್ಸಾಹ ನೀಡದಿದ್ದರೆ ಈ ಕೃಷಿ ಸೊರಗುವುದರಲ್ಲಿ ಮತ್ತು ಗೇರು ಕಾರ್ಖಾನೆಗಳು ಅಸ್ತಿತ್ವ ಕಳಕೊಳ್ಳುವುದರಲ್ಲಿ ಸಂಶಯವಿಲ್ಲ. ರಾಜ್ಯದ ನೂರಾರು ಗೇರು ಕಾರ್ಖಾನೆಗಳಿಗೆ ಪೂರೈಕೆ ಮಾಡುವಷ್ಟು ಗೇರು ಬೀಜ ರಾಜ್ಯದಲ್ಲಿ ಉತ್ಪತ್ತಿ ಯಾಗುತ್ತಿಲ್ಲ. ಹಾಗಾಗಿ ಈ ಕಾರ್ಖಾನೆ ಯ ಮಾಲಕರೇ ಗೇರು ಕೃಷಿ ಬೆಳೆಯಲು ಆದ್ಯತೆ ನೀಡದಿದ್ದರೆ ಗೇರು ಕಾರ್ಖಾನೆಗಳಿಗೆ ಅಪಾಯ ಖಂಡಿತ.
- ಗೇರು ಅಭಿವೃದ್ಧಿ ನಿಗಮದ ಸ್ಥಾಪನೆ: ಗೇರು ಕೃಷಿಯನ್ನು ಪ್ರೋತ್ಸಾಹಿಸಲು ರಾಜ್ಯ ಸರಕಾರವು 1978ರಲ್ಲಿ ಗೇರು ಅಭಿವೃದ್ಧಿ ನಿಗಮ ಸ್ಥಾಪಿಸಿತು. ಇದರ ಕೇಂದ್ರ ಕಚೇರಿಯು ಮಂಗಳೂರಿನಲ್ಲಿದ್ದು, ಇದೀಗ ಸುಮಾರು 25,632.62 ಸಾವಿರ ಹೆಕ್ಟೇರ್ ಸರಕಾರಿ ಜಮೀನಿನಲ್ಲಿ ಗೇರು ಕೃಷಿಯನ್ನು ನಿಗಮವು ಬೆಳೆಯುತ್ತಿವೆ. ಇದರಲ್ಲಿ 12,724.43 ಸಾವಿರ ಹೆಕ್ಟೇರ್ ಪ್ರದೇಶ ಈಕ್ವಿಟಿ ಮತ್ತು 12,908.10 ಸಾವಿರ ಹೆಕ್ಟೇರ್ ಪ್ರದೇಶ ಲೀಸ್ ರೂಪದಲ್ಲಿದೆ. ಇವುಗಳ ನಿರ್ವಹಣೆಯನ್ನು ಕುಮಟಾ, ಮೂಡುಬಿದಿರೆ, ಕುಂದಾಪುರ, ಪುತ್ತೂರು ವಿಭಾಗೀಯ ಕಚೇರಿಗಳ ಮುಖಾಂತರ ಮಾಡಲಾಗುತ್ತದೆ.
ಉತ್ತಮ ಇಳುವರಿ ಪಡೆಯುವುದಕ್ಕಾಗಿ ಕೇಂದ್ರ ಸರಕಾರವು 1986ರಲ್ಲಿ ಪುತ್ತೂರಿನಲ್ಲಿ ಗೇರು ಸಂಶೋಧನಾ ಕೇಂದ್ರ ಸ್ಥಾಪಿಸಿದೆ. ರಾಜ್ಯ ಸರಕಾರ ಕೂಡ ಉಳ್ಳಾಲ ಮತ್ತು ಬ್ರಹ್ಮಾವರದಲ್ಲಿ ಗೇರು ಸಂಶೋಧನಾ ಕೇಂದ್ರ ಸ್ಥಾಪಿಸಿದ್ದು, ಈ ಕೇಂದ್ರಗಳು ಅತೀ ಹೆಚ್ಚು ಇಳುವರಿ ನೀಡುವ ಉಳ್ಳಾಲ 1, ಉಳ್ಳಾಲ 2, ಉಳ್ಳಾಲ 3, ಭಾಸ್ಕರ, ವೆಂಗುರ್ಲ 4, ವೃದ್ಧಾಚಲಂ 3, ಯು.ಎನ್ 50 ತಳಿಯನ್ನು ಅಭಿವೃದ್ಧಿಪಡಿಸಿದೆ. ಇ-ಟೆಂಡರ್: ಸರಕಾರಿ ಜಮೀನಿನಲ್ಲಿ ಬೆಳೆದ ಗೇರುಬೀಜವನ್ನು ನಿಗಮವು 2011-12ನೆ ಸಾಲಿನಿಂದ ಇ-ಟೆಂಡರ್ ಮೂಲಕ ಹರಾಜು ಮಾಡಿ ಪಾರದರ್ಶಕಗೊಳಿಸಿದೆ. 2012-13ರಲ್ಲಿ 632.25 ಲಕ್ಷ ರೂ., 2013-14ರಲ್ಲಿ 609.01 ಲಕ್ಷ ರೂ., 2014-15ರಲ್ಲಿ 853.50 ಲಕ್ಷ ರೂ., 2015-16ರಲ್ಲಿ 1,387.69 ಲಕ್ಷ ರೂ., 2016-17ರಲ್ಲಿ 601.93 ಲಕ್ಷ ರೂ. ಮೊತ್ತದ ಗೇರು ಬೀಜವನ್ನು ನಿಗಮ ಹರಾಜು ಮಾಡಿದೆ.
- ತರಬೇತಿ ಶಿಬಿರ: ಯುವ ಕೃಷಿಕರನ್ನು ಗೇರುಬೆಳೆಯತ್ತ ಸೆಳೆಯುವ ಹಿನ್ನೆಲೆಯಲ್ಲಿ ಪುತ್ತೂರಿನ ಗೇರು ಸಂಶೋಧನಾ ಕೇಂದ್ರದಲ್ಲಿ 110 ಮಂದಿ ಯುವ ರೈತರಿಗೆ ಇತ್ತೀಚೆಗೆ ಕಾರ್ಯಾಗಾರವನ್ನು ನಡೆಸಿದೆ.
- ಗೇರು ಸಸಿ ವಿತರಣೆ: ವನಮಹೋತ್ಸವ ಸಂದರ್ಭ ಅರಣ್ಯ ಇಲಾಖೆಯು ಸಸಿಗಳನ್ನು ಉಚಿತವಾಗಿ ವಿತರಿಸುತ್ತಿವೆ. ಅದೇ ಮಾದರಿಯಲ್ಲಿ ಮಸೀದಿ, ಮದ್ರಸ, ದೇವಸ್ಥಾನ, ಚರ್ಚ್ ಮತ್ತಿತರ ಧಾರ್ಮಿಕ ಕೇಂದ್ರಗಳಿಗೆ, ಸಮಾಜಮುಖಿ ಸಂಘ-ಸಂಸ್ಥೆಗಳಿಗೆ, ಶಾಲಾ-ಕಾಲೇಜುಗಳಿಗೆ ಗೇರು ಸಸಿಯನ್ನು ವಿತರಿಸಲು ನಿಗಮ ಮುಂದಾಗಿದೆ.
- ಅಧ್ಯಯನ ತಂಡ: ಗೋವಾದಲ್ಲಿ ಈಗಲೂ ಹೇರಳವಾಗಿ ಗೇರು ಕೃಷಿ ಮಾಡಲಾಗುತ್ತದೆ. ಈ ಕುರಿತು ತಜ್ಞರು, ಗೇರುಬೆಳೆಗಾರರ ತಂಡದೊಂದಿಗೆ ಗೋವಾದಲ್ಲಿ ಅಧ್ಯಯನ ಮಾಡಲು ನಿಗಮ ಹೊಸ ಹೆಜ್ಜೆ ಇರಿಸಿದೆ.
- ಹಣ್ಣಿನ ಸದ್ಬಳಕೆ: ಸಾಮಾನ್ಯವಾಗಿ ‘ಗೇರು ಕೃಷಿ’ಯಲ್ಲಿ ಬೀಜವನ್ನು ಕಾರ್ಖಾನೆಯಲ್ಲಿ ಸಂಸ್ಕರಿಸಿದರೆ ಹಣ್ಣನ್ನು ತಿಂದೋ, ಜಾನುವಾರುಗಳಿಗೆ ಆಹಾರವಾಗಿ ನೀಡಿ ವ್ಯಯಿಸಲಾಗುತ್ತದೆ. ಆದರೆ ಕೇರಳದಲ್ಲಿ ಗೇರು ಹಣ್ಣಿನ ಜೆಲ್, ಹಲ್ವಾ, ಜ್ಯೂಸ್ ತಯಾರಿಸಿ ಮಾರಾಟ ಮಾಡಲಾಗುತ್ತದೆ. ಈ ನಿಟ್ಟಿನಲ್ಲಿ ಗೇರು ಹಣ್ಣನ್ನು ಕೊಳೆಯಲು ಬಿಡದೆ ಸದ್ಬಳಕೆ ಮಾಡಲು ನಿಗಮ ಇಚ್ಛಿಸಿದೆ.
- ಮಂಡ್ಯದಲ್ಲಿ ಚಿಗುರಿದ ಗೇರು
ಕರಾವಳಿ ತೀರದಲ್ಲಿ ಗೇರುಕೃಷಿ ಸೊರಗುತ್ತಿರುವ ಮಧ್ಯೆಯೇ ಕೊಚ್ಚಿಯಲ್ಲಿರುವ ಗೇರು ಮತ್ತು ಕೊಕ್ಕೊ ಅಭಿವೃದ್ಧಿ ನಿರ್ದೇಶನಾಲಯವು ಬಯಲು ಸೀಮೆಗೆ ಗೇರುಕೃಷಿಯನ್ನು ಕೊಂಡೊಯ್ದಿದೆ. ಅದರ ಪರಿಣಾಮ ಮಂಡ್ಯದಲ್ಲಿ ಗೇರು ಚಿಗುರಿದೆ. ಕಬ್ಬು ಬೆಳೆಯುವ ಮಂಡ್ಯದ ರೈತರು ತಮ್ಮ ಪ್ರದೇಶದಲ್ಲಿ ಗೇರುಕೃಷಿ ಬೆಳೆಯಲು ಆಸಕ್ತಿ ವಹಿಸಿದ್ದರಲ್ಲದೆ, ‘ಮಂಡ್ಯ ಜಿಲ್ಲಾ ಕೃಷಿ ವಿಜ್ಞಾನ ಪದವೀಧರರ ಸಂಘ’ವನ್ನು ಸ್ಥಾಪಿಸಿದ್ದಾರೆ. ತೀವ್ರ ಮಳೆಯ ಅಭಾವದಿಂದ ಬರಗಾಲ ಪೀಡಿತ ಮಂಡ್ಯದಲ್ಲಿ ನೀರಿಗಾಗಿ ಹಾಹಾಕಾರ ಎದ್ದಿವೆ. ಹಾಗಾಗಿ ಕಡಿಮೆ ನೀರು ಬಳಸಿ ಹೆಚ್ಚು ಲಾಭ ಪಡೆಯಬಹುದಾದ ಗೇರು ಕೃಷಿಯನ್ನು ಬೆಳೆಯ ತೊಡಗಿದ್ದಾರೆ.
ದೇಶದ ಬಹುಪಾಲು ಗೇರು ಸಂಸ್ಕರಣಾ ಘಟಕಗಳಿಗೆ ಸುಮಾರು ಎರಡು ತಿಂಗಳಿಗೆ ಬೇಕಾದಷ್ಟು ಕಚ್ಚಾ ಗೇರು ಬೀಜವನ್ನು ಸ್ಥಳೀಯವಾಗಿ ಪೂರೈಸಲ್ಪಡುತ್ತವೆ. ಉಳಿದ 10 ತಿಂಗಳಿಗೆ ಬೇಕಾಗುವ ಗೇರುಬೀಜವನ್ನು ತಾಂಝೇನಿಯ, ಆಫ್ರಿಕ, ಆಸ್ಟ್ರೇಲಿಯ, ಬ್ರೆಝಿಲ್ ದೇಶಗಳಿಂದ ಆಮದು ಮಾಡಲಾಗುತ್ತದೆ. ಈ ಮಧ್ಯೆ ದೇಶದ ಹಲವು ಉದ್ಯಮಿಗಳು ವಿದೇಶಗಳಲ್ಲಿ ಗೇರು ಸಂಸ್ಕರಣಾ ಘಟಕವನ್ನು ತೆರೆಯತೊಡಗಿದ ಬಳಿಕ ಅಲ್ಲಿಂದ ಗೇರುಬೀಜವು ಭಾರತಕ್ಕೆ ಆಮದಾಗುವ ಪ್ರಮಾಣದಲ್ಲಿ ಇಳಿಮುಖವಾಗಿದೆ. ಇದು ಕಡಿಮೆ ಖರ್ಚಿನಲ್ಲಿ ಹೆಚ್ಚು ಲಾಭ ಪಡೆಯುವ ಕೃಷಿಯಾಗಿದ್ದು, ಒಣಭೂಮಿಯಲ್ಲೂ ಬೆಳೆಯಬಹುದಾಗಿದೆ. ನೀರಿನ ಆವಶ್ಯಕತೆ ಅಷ್ಟೇನೂ ಬೇಕಾಗಿಲ್ಲ. ಇದು ಕೇವಲ ಮನುಷ್ಯರಿಗೆ ಮಾತ್ರವಲ್ಲ ಜಾನುವಾರು-ಪಕ್ಷಿಗಳ ಆಹಾರವೂ ಆಗಿದೆ. ಕೇವಲ 2-3 ವರ್ಷ ನೆಡುತೋಪುಗಳನ್ನು ಚೆನ್ನಾಗಿ ನಿರ್ವಹಣೆ ಮಾಡಿದರೆ ಅಧಿಕ ಲಾಭ ಪಡೆಯಬಹುದು. ಹಾಗಾಗಿ ರೈತರು ಗೇರುಕೃಷಿ ಬೆಳೆಯಲು ಆಸಕ್ತಿ ವಹಿಸಬೇಕಿದೆ. ನಿಗಮದ ನೆಡುತೋಪುಗಳಲ್ಲಿ ಬೆಳೆಯುವ ಗೇರು ಕೃಷಿಗೆ 2000ನೆ ಇಸವಿಯಿಂದ ಯಾವುದೇ ಎಂಡೋಸಲ್ಫಾನ್ ಸಹಿತ ರಾಸಾಯನಿಕ ಕೀಟನಾಶಕ ಸಿಂಪಡಣೆ ಮಾಡುತ್ತಿಲ್ಲ.
ಬಿ.ಎಚ್.ಖಾದರ್
ಅಧ್ಯಕ್ಷರು, ರಾಜ್ಯ ಗೇರು ಅಭಿವೃದ್ಧಿ ನಿಗಮ.
ಗೇರು ಒಂದು ಋತುಕಾಲಿಕ ಬೆಳೆಯಾಗಿದ್ದು, ಅಕಾಲಿಕ ಮಳೆ ಮತ್ತು ಹವಾಮಾನ ವೈಪರೀತ್ಯ, ನಿರ್ವಹಣಾ ವೆಚ್ಚ, ಕೆಲಸಗಾರರ ಕೂಲಿ, ‘ಟೀ ಮೋಸ್ಕಿಟೊ’ ಕೀಟಭಾದೆ ಇತ್ಯಾದಿಯಿಂದಾಗಿ ನಿಗಮದ ಆದಾಯದಲ್ಲಿ ಏರುಪೇರು ಆಗುತ್ತದೆ. ಮೋಡ ಕವಿದಾಗಲೂ ಹೂ ಕರಟಿ ಹೋಗುವ ಅಪಾಯವಿದೆ. ಮಳೆಗಾಲದ ಆರಂಭಕ್ಕೆ ಹೈಬ್ರೀಡ್ ತಳಿಯ ಗೇರು ಬೀಜ ನೆಟ್ಟು ಪೋಷಿಸಿದರೆ 2-3 ವರ್ಷಗಳಲ್ಲಿ ಫಸಲು ಪಡೆಯ ಬಹುದು. ಹೂ ಬಿಡುವ ಸಮಯದಲ್ಲಿ ಅದರ ರಸವನ್ನು ಹೀರಿ ನಾಶಪಡಿಸುವ ಕೀಟದ ಬಗ್ಗೆ ಎಚ್ಚರಿಕೆ ವಹಿಸಬೇಕಿದೆ.
ಸದಾಶಿವ ಭಟ್
ಮುಖ್ಯಪ್ರಬಂಧಕರು, ಗೇರು ನಿಗಮ.







